ಕಾರವಾರ, ಅಂಕೋಲಾ ಅತಂತ್ರ: ತಲಾ ಮೂರು ಸಂಸ್ಥೆಗಳಲ್ಲಿ ಕಮಲ, ಕೈ ಬಹುಮತ

7
ಜಿಲ್ಲೆಯ ಎಂಟು ಸ್ಥಳೀಯ ಸಂಸ್ಥೆಗಳಲ್ಲಿ ಮತ ಎಣಿಕೆ

ಕಾರವಾರ, ಅಂಕೋಲಾ ಅತಂತ್ರ: ತಲಾ ಮೂರು ಸಂಸ್ಥೆಗಳಲ್ಲಿ ಕಮಲ, ಕೈ ಬಹುಮತ

Published:
Updated:
Deccan Herald

ಕಾರವಾರ: ಜಿಲ್ಲೆಯ ಎಂಟು ಸ್ಥಳೀಯ ಸಂಸ್ಥೆಗಳಲ್ಲಿ ಸೋಮವಾರ ಮತ ಎಣಿಕೆ ನಡೆದಿದ್ದು, ಕಳೆದ ಬಾರಿ ಒಂದೂ ಸಂಸ್ಥೆಯನ್ನು ಗೆದ್ದಿರದ ಬಿಜೆಪಿ ಮೂರು ಕಡೆ ತನ್ನ ಚಿಹ್ನೆಯನ್ನು ಅರಳಿಸುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಕೂಡ ಮೂರು ಸ್ಥಳೀಯ ಸಂಸ್ಥೆಗಳನ್ನು ಗೆದ್ದುಕೊಂಡಿದೆ. ಎರಡು ಕಡೆ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಜೆಡಿಎಸ್ ಎಲ್ಲೂ ದೊಡ್ಡ ಪಕ್ಷವಾಗಿ ಹೊರಹೊಮ್ಮಿಲ್ಲ.

ಮೂರು ನಗರಸಭೆಗಳ ಪೈಕಿ ಶಿರಸಿಯು ಕಾಂಗ್ರೆಸ್‌ನಿಂದ ಬಿಜೆಪಿ ತೆಕ್ಕೆಗೆ ಜಾರಿದ್ದರೆ, ದಾಂಡೇಲಿಯನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ಕಾರವಾರದಲ್ಲಿ ಮಾತ್ರ ಅತಂತ್ರವಾಗಿದೆ.

ನಗರಸಭೆಗಳು: ಕಾರವಾರ ನಗರಸಭೆಯು ಅತಂತ್ರವಾಗಿದೆ. 31 ವಾರ್ಡ್‌ಗಳ ಪೈಕಿ ತಲಾ 11 ವಾರ್ಡ್‌ಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಗೆದ್ದುಕೊಂಡಿವೆ. ಕಳೆದ ಬಾರಿ ಒಬ್ಬರೂ ಸದಸ್ಯರನ್ನು ಹೊಂದಿರದ ಜೆಡಿಎಸ್‌ನಿಂದ ಈ ಬಾರಿ ನಾಲ್ವರು ಆಯ್ಕೆಯಾಗಿದ್ದಾರೆ. ಐವರು ಪಕ್ಷೇತರರು ಆಯ್ಕೆಯಾಗಿದ್ದು, ಅತಂತ್ರ ನಗರಸಭೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಇಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 13 ಸದಸ್ಯರು ಆಯ್ಕೆಯಾಗಿದ್ದರು. ಅತಂತ್ರವಾಗಿದ್ದ ನಗರಸಭೆಯಲ್ಲಿ ಐವರು ಪಕ್ಷೇತರ ಸದಸ್ಯರ ಬೆಂಬಲ ಪಡೆದುಕೊಂಡು ಕಾಂಗ್ರೆಸ್ ನಗರಸಭೆ ಆಡಳಿತ ನಡೆಸಿತ್ತು.

ಶಿರಸಿಯಲ್ಲಿ 17 ಸದಸ್ಯರನ್ನು ಹೊಂದುವ ಮೂಲಕ ಬಿಜೆಪಿಯು ಬಹುಮತ ಪಡೆದಿದೆ. ಕಳೆದ ಬಾರಿ ಅಧಿಕಾರ ಚಲಾಯಿಸಿದ ಕಾಂಗ್ರೆಸ್‌ನಿಂದ ಈ ಬಾರಿ ಒಂಬತ್ತು ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ. ಇಲ್ಲಿ ಜೆಡಿಎಸ್‌ನಿಂದ ಒಬ್ಬರು ಮತ್ತು ನಾಲ್ವರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ದಾಂಡೇಲಿಯಲ್ಲಿ 16 ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡಿದೆ. ಬಿಜೆಪಿಯಿಂದ 11, ನಾಲ್ವರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಜೆಡಿಎಸ್‌ನಿಂದ ಒಬ್ಬರೂ ಗೆದ್ದಿಲ್ಲ.

ಪುರಸಭೆಗಳು: ಮೂರು ಪುರಸಭೆಗಳಲ್ಲಿ ಒಂದಾಗಿರುವ ಕುಮಟಾದಲ್ಲಿ ಬಿಜೆಪಿ 16 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿ ಬಹುಮತ ಪಡೆದುಕೊಂಡಿದೆ. ಇಲ್ಲಿ ಕಾಂಗ್ರೆಸ್ ಆರು ಹಾಗೂ ಜೆಡಿಎಸ್ ಒಂದು ಸ್ಥಾನವನ್ನು ಪಡೆದಿವೆ.

ಹಳಿಯಾಳ ಪುರಸಭೆಯಲ್ಲಿ ಕಾಂಗ್ರೆಸ್ ತನ್ನ ಪಾರಮ್ಯ ಮುಂದುವರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರ ತವರು ಕ್ಷೇತ್ರವೂ ಆಗಿರುವ ಇಲ್ಲಿ, ಕಾಂಗ್ರೆಸ್ 14 ವಾರ್ಡ್‌ಗಳನ್ನು ಗೆದ್ದುಕೊಂಡಿದೆ. ಬಿಜೆಪಿ 7, ಜೆಡಿಎಸ್ ಮತ್ತು ಪಕ್ಷೇತರರು ತಲಾ ಒಂದು ವಾರ್ಡ್‌ನಲ್ಲಿ ಜಯ ಸಾಧಿಸಿದ್ದಾರೆ.

ಅಂಕೋಲಾ ಪುರಸಭೆ ಅತಂತ್ರವಾಗಿದೆ. 10 ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಬಹುಮತ ಪಡೆದಿಲ್ಲ. ಬಿಜೆಪಿಯ ಎಂಟು ಹಾಗೂ ಐವರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಆದರೆ, ಜೆಡಿಎಸ್ ತನ್ನ ಖಾತೆಯನ್ನೇ ತೆರದಿಲ್ಲ ಎಂಬುದು ಗಮನಾರ್ಹ.

ಪಟ್ಟಣ ಪಂಚಾಯ್ತಿಗಳು: ಎರಡು ಪಟ್ಟಣ ಪಂಚಾಯ್ತಿಗಳ ಪೈಕಿ ಮುಂಡಗೋಡದಲ್ಲಿ ಕಮಲ ಅರಳಿದೆ. ಬಿಜೆಪಿಯ 10 ಅಭ್ಯರ್ಥಿಗಳು ಆಯ್ಕೆಯಾಗಿದ್ದರೆ, ಕಾಂಗ್ರೆಸ್‌ನಿಂದ ಒಂಬತ್ತು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಯಲ್ಲಾಪುರದಲ್ಲಿ ಸತತ ಎರಡನೇ ಬಾರಿಗೆ ಕಾಂಗ್ರೆಸ್ ಬಹುಮತ ಪಡೆದಿದೆ. 12 ವಾರ್ಡ್‌ಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದರೆ, ಬಿಜೆಪಿಯಿಂದ ಐವರು, ಜೆಡಿಎಸ್ ಮತ್ತು ಪಕ್ಷೇತರರು ತಲಾ ಒಬ್ಬರನ್ನು ಮತದಾರರು ಆಯ್ಕೆ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !