ಶಿರಸಿ ನಗರಸಭೆ: ಅರಳಿದ ಕಮಲ; ಚಿರುಟಿದ ಹಸ್ತ

ಶಿರಸಿ: ಇಲ್ಲಿನ ನಗರಸಭೆಯ 31 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಹಿಂದಿನ ಅವಧಿಯಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನು ಗಳಿಸಿ, ತೀವ್ರ ಮುಖಭಂಗ ಅನುಭವಿಸಿದೆ.
ಜೆಡಿಎಸ್ ಒಂದು ಸ್ಥಾನ ಗೆಲ್ಲುವ ಮೂಲಕ ಖಾತೆ ತೆರದಿದೆ. ನಾಲ್ವರು ಪಕ್ಷೇತರರು ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಹಿರಿಯ ಸದಸ್ಯರಾದ ಅರುಣ ಕೋಡ್ಕಣಿ, ಅರುಣ ಪ್ರಭು, ರಮೇಶ ಆಚಾರಿ, ರವಿ ಚಂದಾವರ, ಕೇಶವ ಶೆಟ್ಟಿ ಪರಾಭವಗೊಂಡಿದ್ದಾರೆ. ಇವರಲ್ಲಿ ಅರುಣ ಪ್ರಭು, ಕೇಶವ ಶೆಟ್ಟಿ ಕೊನೆಯ ಕ್ಷಣದಲ್ಲಿ ಬಿಜೆಪಿಯಿಂದ ಜಿಗಿದು, ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದರು. 17ನೇ ವಾರ್ಡಿನಿಂದ ಆಯ್ಕೆಯಾಗಿರುವ ಶ್ರೀಕಾಂತ ತಾರೀಬಾಗಿಲು ಸತತ 5ನೇ ಬಾರಿಗೆ ನಗರಸಭೆ ಸದಸ್ಯರಾಗಿದ್ದಾರೆ.
ಅಧ್ಯಕ್ಷರಾಗಿದ್ದ ಪ್ರದೀಪ ಶೆಟ್ಟಿ ಪುನರಾಯ್ಕೆಯಾದರೆ, ಉಪಾಧ್ಯಕ್ಷೆ ಅರುಣಾ ವೆರ್ಣೇಕರ, ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ, ಅತಿ ಕಡಿಮೆ ಮತ ಪಡೆದಿದ್ದಾರೆ. ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದ ಜ್ಯೋತಿ ಪಾಟೀಲ, ಹರೀಶ ಪಾಲೇಕರ ಸೋಲುಂಡಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ನಾಗರಾಜ ಮೂಗ್ತಿ, ಸುಚಿತ್ರಾ ನಾಯ್ಕ, ಅಶೋಕ ನಾಯ್ಕ, ಉದಯ ಕಳೂರು ಪರಾಜಿತರಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ವಂಚಿತರಾಗಿ, ಜೆಡಿಎಸ್ನಿಂದ ಕಣಕ್ಕಿಳಿದಿದ್ದ ಶೀಲೂ ಬ್ಲೇಝ್ ವಾಜ್ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದ ಮಧುಕರ ಬಿಲ್ಲವ, ಕೆಲವು ಕಾಂಗ್ರೆಸ್ಸಿಗರ ಬಾಹ್ಯ ಬೆಂಬಲ ಪಡೆದು ಪಕ್ಷೇತರರಾಗಿ ಸ್ಪರ್ಧಿಸಿದ್ದ ನೇತ್ರಾ ಬೋವಿವಡ್ಡರ್, ಕೆಲವು ಬಿಜೆಪಿಗರ ಬಾಹ್ಯ ಬೆಂಬಲ ಪಡೆದು ಪಕ್ಷೇತರರಾಗಿ ಕಣಕ್ಕಿಳಿದಿದ್ದ ರಾಘವೇಂದ್ರ ಶೆಟ್ಟಿ, ಕುಮಾರ ಬೋರಕರ ಆಯ್ಕೆಯಾಗಿದ್ದಾರೆ.
ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ 20, ಬಿಜೆಪಿ 10 ಹಾಗೂ ಬಿಎಸ್ಆರ್ ಕಾಂಗ್ರೆಸ್ ಒಂದು ಸ್ಥಾನ ಹೊಂದಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.