ಸಂಸ್ಕಾರ ಬಹಿರಂಗಪಡಿಸಿದ ಆನಂದ ಅಸ್ನೋಟಿಕರ್: ಬಿಜೆಪಿ ಮುಖಂಡರ ವಾಗ್ದಾಳಿ

ಮಂಗಳವಾರ, ಏಪ್ರಿಲ್ 23, 2019
27 °C
ಜೆಡಿಎಸ್ ಅಭ್ಯರ್ಥಿ ವಿರುದ್ಧ ಟೀಕೆ

ಸಂಸ್ಕಾರ ಬಹಿರಂಗಪಡಿಸಿದ ಆನಂದ ಅಸ್ನೋಟಿಕರ್: ಬಿಜೆಪಿ ಮುಖಂಡರ ವಾಗ್ದಾಳಿ

Published:
Updated:
Prajavani

ಕಾರವಾರ: ‘ನಾಲಿಗೆ ಕುಲವನ್ನು ಹೇಳುತ್ತದೆ ಎಂಬ ರೀತಿಯಲ್ಲೇ ಆನಂದ ಅಸ್ನೋಟಿಕರ್ ತಮ್ಮ ಸಂಸ್ಕಾರವನ್ನು ಬಹಿರಂಗ ಪಡಿಸಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಮೂರು ಪಕ್ಷಗಳನ್ನು ಬದಲಾಯಿಸುವ ಮೂಲಕ ಪಕ್ಷದಿಂದ ಪಕ್ಷಕ್ಕೆ ಜಿಗಿದ ಅವರು ಮಂಗನಾಟ ಮಾಡಿದ್ದಾರೆ’ ಎಂದು ಬಿಜೆಪಿಯ ಜಿಲ್ಲಾ ಘಟಕದ ವಕ್ತಾರ ರಾಜೇಶ್ ನಾಯ್ಕ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ಕಾರ್ಯಕರ್ತರನ್ನು ನಾಯಿಗೆ ಹೋಲಿಸಿದ ಆನಂದ ಅಸ್ನೋಟಿಕರ್ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸಿದ್ದಾರೆ. ಈ ಮಂಗ ಕಾರವಾರ ಕ್ಷೇತ್ರದಲ್ಲಿ ಮಂಗನಾಟದ ಮೂಲಕ ಇಡೀ ಕ್ಷೇತ್ರದಲ್ಲಿ ಮಂಗನಕಾಯಿಲೆ ಹರಡಿದ್ದರಿಂದ ಎರಡು ಚುನಾವಣೆಗಳಲ್ಲಿ ಜನ ಚುಚ್ಚುಮದ್ದು ನೀಡಿ ಮನೆಯಲ್ಲಿ ಕೂರಿಸಿದ್ದರು. ಈಗ ಮತ್ತೆ ಮಂಗನಕಾಯಿಲೆ ಹರಡಲು ಪ್ರಯತ್ನಿಸುತ್ತಿದ್ದು, ಜನ ಮತ್ತೆ ಚುಚ್ಚುಮದ್ದು ನೀಡಲಿದ್ದಾರೆ ಎಂದು ಹೇಳಬಹುದಾದರೂ ನಾವು ಆ ಮಟ್ಟಕ್ಕೆ ಇಳಿಯುತ್ತಿಲ್ಲ’ ಎಂದು ಹೇಳಿದರು. 

ಇದೇವೇಳೆ ಆನಂದ ವಿರುದ್ಧ ಎರಡನೇ ಆರೋಪಪಟ್ಟಿಯನ್ನು ಬಿಡುಗಡೆ ಮಾಡಿದ ಅವರು, ‘ಹಿಂದೂಗಳು ಧರಿಸುವ ಕೇಸರಿ ಶಾಲು, ನಾಮ, ದೇವಾಲಯ, ಮಠ ಮಂದಿರಗಳ ಕುರಿತು ಕೇವಲವಾಗಿ ಮಾತನಾಡಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

‘ತನ್ನನ್ನು ಹಿಂದೂ ಎಂದು ಚುನಾವಣಾ ಪ್ರಮಾಣಪತ್ರದಲ್ಲಿ ನಮೂದಿಸಿದ ಅವರು, ಮಸೀದಿಯಲ್ಲಿ ನಮಾಜು ಮಾಡುತ್ತಿರುವುದು ಯಾರನ್ನು ಓಲೈಸಲು? ಅವರಿಗೆ ಹಿಂದೂಗಳ ಮತ ಬೇಡವೇ’ ಎಂದು ಪ್ರಶ್ನಿಸಿದರು. 

‘ಆಣೆ ಪ್ರಮಾಣ ಮಾಡಲಿ’: ‘ಹಣಕೋಣ ಗಲಭೆ ಸಂದರ್ಭದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿತ್ತು. ಆಗಿನ ಗಲಾಟೆಗೆ ಕಾಂಗ್ರೆಸ್ ಕಾರಣ ಎಂದು ಆನಂದ ಅಸ್ನೋಟಿಕರ್ ಮಾಡಿದ ಪರೋಕ್ಷ ಆರೋಪಕ್ಕೆ ಸತೀಶ್ ಸೈಲ್ ಹಾಗೂ ಆರ್.ವಿ.ದೇಶಪಾಂಡೆ ಸ್ಪಷ್ಟನೆ ನೀಡಲಿ. ಈ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮಾಡದಂತೆ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಅನಂತಕುಮಾರ ಹೆಗಡೆ ಒತ್ತಡ ಹೇರಿದ್ದರು ಎಂದು ಆನಂದ ಸುಳ್ಳು ಹೇಳಿದ್ದಾರೆ. ಇದು ನಿಜವಾಗಿದ್ದಲ್ಲಿ ಹಣಕೋಣದ ಸಾತೇರಿ ದೇವಾಲಯದ ಎದುರು ನಿಂತು ಆಣೆ ಪ್ರಮಾಣ ಮಾಡಲಿ. ಇಲ್ಲದಿದ್ದರೆ ಸಾರ್ವಜನಿಕರ ಕ್ಷಮೆ ಕೇಳಲಿ’ ಎಂದು ಸವಾಲೆಸೆದರು. 

ಮುಖಂಡರಾದ ರಾಜೇಶ ನಾಯ್ಕ ಸಿದ್ದರ, ಮಾರುತಿ ನಾಯ್ಕ, ರವೀಂದ್ರ ಪವಾರ್ ಇದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !