ಕೃಷಿ, ಗ್ರಾಮೀಣಾಭಿವೃದ್ಧಿಗೆ ಒತ್ತು; ಉದ್ಯೋಗ ಸೃಷ್ಟಿಗೆ ಒಲವು: ಬಿಜೆಪಿ ಪ್ರಣಾಳಿಕೆ

ಮಂಗಳವಾರ, ಏಪ್ರಿಲ್ 23, 2019
27 °C
ಭರವಸೆಯ ಮಹಾಪೂರ

ಕೃಷಿ, ಗ್ರಾಮೀಣಾಭಿವೃದ್ಧಿಗೆ ಒತ್ತು; ಉದ್ಯೋಗ ಸೃಷ್ಟಿಗೆ ಒಲವು: ಬಿಜೆಪಿ ಪ್ರಣಾಳಿಕೆ

Published:
Updated:
Prajavani

ಶಿರಸಿ: ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ಮೂಲಭೂತ ಸೌಕರ್ಯ ಅಭಿವೃದ್ಧಿ, ಉದ್ಯಮ ಹಾಗೂ ಉದ್ಯೋಗ ಸೃಷ್ಟಗೆ ಆದ್ಯತೆ ನೀಡಿ ಬಿಜೆಪಿಯು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ. 

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಹಾಗೂ ಪ್ರಮುಖರು ಬುಧವಾರ ಇಲ್ಲಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಕೃಷಿಯಲ್ಲಿ ತಾಂತ್ರಿಕತೆ ಅಳವಡಿಕೆ ಮೂಲಕ ಉತ್ಪನ್ನ ದ್ವಿಗುಣ, ಹೊಸ ಬೆಳೆಗಳಿಗೆ ಪ್ರೋತ್ಸಾಹ, ಪ್ರಧಾನಮಂತ್ರಿ ಕೃಷಿ ನೀರಾವರಿ ಯೋಜನೆ ವಿಸ್ತರಣೆ, ಜೇನು ಅಭಿವೃದ್ಧಿ ಯೋಜನೆಗೆ ಪ್ರೋತ್ಸಾಹ, ಪ್ರಾದೇಶಿಕ ಭೌಗೋಳಿಕತೆಗೆ ಹೊಂದುವ ಹೊಸ ಬೆಳೆ ಪರಿಚಯ, ಬೆಟ್ಟ, ಹಾಡಿ, ಕುಂಬ್ರಿಪಾಳಾ ಪ್ರದೇಶಗಳ ಅಭಿವೃದ್ಧಿ, ಅರಣ್ಯ ಅತಿಕ್ರಮಣ ಮಂಜೂರು ಸಂಬಂಧ ಕಾಯ್ದೆಬದ್ಧ ಯೋಜನೆ, ಸಾಮಾಜಿಕ ಅರಣ್ಯ ಹಾಗೂ ಕಾಡು ಕೃಷಿಗೆ ಉತ್ತೇಜನ ನೀಡುವ ಅಂಶಗಳಿಗೆ ಒತ್ತು ನೀಡಲಾಗಿದೆ ಎಂದರು.

ಸಮುದಾಯ ಆರೋಗ್ಯ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಸಂಬಂಧಿಸಿ ಹಾಲಕ್ಕಿ, ಕುಣಬಿ, ಗೌಳಿ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಪ್ರಯತ್ನ, ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ವರ್ಧನೆಗಾಗಿ ಕ್ಷೇಮ ಕೇಂದ್ರಗಳ ಸ್ಥಾಪನೆ, ಜನೌಷಧ ಕೇಂದ್ರಗಳ ಬಳಕೆಗೆ ವ್ಯಾಪಕ ಪ್ರಚಾರ, ವಿವಿಧ ವಿಮಾ ಯೋಜನೆಗಳನ್ನು ಫಲಾನುಭವಿಗಳವರೆಗೆ ತಲುಪಿಸುವುದು, ದಿವ್ಯಾಂಗರ ಸೇವೆಗೆ ಆದ್ಯತೆ, ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗೆ ಭಾರತೀಯ ಪದ್ಧತಿ ಚಿಕಿತ್ಸಾ ಕೇಂದ್ರ ಸ್ಥಾಪನೆ ಹಾಗೂ ಕಡಿಮೆ ದರದಲ್ಲಿ ಔಷಧ ವಿತರಣೆಯನ್ನು ಪ್ರಣಾಳಿಕೆ ಒಳಗೊಂಡಿದೆ ಎಂದು ಅವರು ವಿವರಿಸಿದರು.

ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ, ಈಗಾಗಲೇ ಸಿದ್ಧವಾಗಿರುವ ದಾಂಡೇಲಿ- ಅಳ್ನಾವರ ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರ ಪ್ರಾರಂಭಿಸುವುದು, ಡಿಜಿಟಲ್ ಹಾಗೂ ಇಂಟರ್‌ನೆಟ್ ತಂತ್ರಜ್ಞಾನ ಬಳಕೆಗೆ ಪ್ರೋತ್ಸಾಹ, ಸಾಮಾನ್ಯ ಸೇವಾ ಕೇಂದ್ರಗಳ ಸ್ಥಾಪನೆ, ಸೀಬರ್ಡ್‌ ನೌಕಾನೆಲೆಯ ವಿಮಾನ ನಿಲ್ದಾಣದ ಸೇವೆಯನ್ನು ಸಾರ್ವಜನಿಕರಿಗೆ ವಿಸ್ತರಿಸುವುದು, ಶರಾವತಿ, ಕಾಳಿ ನದಿಗಳ ಮೂಲಕ ಜಲ ಸಂಪರ್ಕ ವ್ಯವಸ್ಥೆ ನಿರ್ಮಾಣ, ಕ್ಷೇತ್ರದ ನಗರಗಳಿಗೆ ವರ್ತುಲ ರಸ್ತೆ ನಿರ್ಮಾಣ, ಬಡವರ ಸೂರು ಯೋಜನೆಗೆ ಪ್ರೋತ್ಸಾಹ, ಸುಸ್ಥಿರ ಮೀನುಗಾರಿಕಾ ಅಭಿವೃದ್ಧಿ, ಕೌಶಲ ವಿಕಾಸ ಯೋಜನೆಗಳಿಗೆ ಪ್ರಾಶಸ್ತ್ಯ ಹೀಗೆ ಸರ್ವಾಂಗೀಣ ಪ್ರಗತಿಯನ್ನೊಳಗೊಂಡು ಪ್ರಣಾಳಿಕೆ ತಯಾರಿಸಲಾಗಿದೆ ಎಂದು ತಿಳಿಸಿದರು. ಪ್ರಮುಖರಾದ ವಿ.ಎಸ್.ಪಾಟೀಲ, ಸುನೀಲ್ ಹೆಗಡೆ, ಗೋವಿಂದ ನಾಯ್ಕ, ರೇಖಾ ಹೆಗಡೆ, ಆರ್.ಡಿ.ಹೆಗಡೆ, ಗಣೇಶ ಸಣ್ಣಲಿಂಗಣ್ಣನವರ್ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !