ಅಸ್ನೋಟಿಕರ್ ದಿಢೀರ್ ಶ್ರೀಮಂತಿಕೆಯ ಗುಟ್ಟೇನು?: ಬಿಜೆಪಿ ಪ್ರಶ್ನೆ

ಗುರುವಾರ , ಏಪ್ರಿಲ್ 25, 2019
31 °C
’23 ವರ್ಷ ಅಧಿಕಾರದಲ್ಲಿದ್ದ ಕುಟುಂಬದಿಂದ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ’

ಅಸ್ನೋಟಿಕರ್ ದಿಢೀರ್ ಶ್ರೀಮಂತಿಕೆಯ ಗುಟ್ಟೇನು?: ಬಿಜೆಪಿ ಪ್ರಶ್ನೆ

Published:
Updated:
Prajavani

ಕಾರವಾರ: ‘1996ರಲ್ಲಿ ವಸಂತ ಅಸ್ನೋಟಿಕರ್ ಶಾಸಕರಾಗಿ ಆಯ್ಕೆಯಾಗುವವರೆಗೂ ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬ, ಈಗ ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದೆ. ಈ ರೀತಿ ದಿಢೀರ್ ಶ್ರೀಮಂತರಾದ್ದರ ಹಿಂದಿನ ಗುಟ್ಟೇನು’ ಎಂದು ಬಿಜೆಪಿಯ ಜಿಲ್ಲಾ ಘಟಕದ ವಕ್ತಾರ ರಾಜೇಶ್ ನಾಯ್ಕ ಪ್ರಶ್ನಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಜಿಲ್ಲಾ ಘಟಕವು ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ವಿರುದ್ಧ ಸಿದ್ಧಪಡಿಸಿದ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿದರು. 

‘ವಿಧಾನಸಭಾ ಚುನಾವಣೆಯಲ್ಲಿ ಎರಡು ಬಾರಿ ಹೀನಾಯವಾಗಿ ಸೋತ ಆನಂದ ಅಸ್ನೋಟಿಕರ್, ಬಿಜೆಪಿಯ ಲೋಕಸಭಾ ಚುನಾವಣೆಯ ಅಭ್ಯರ್ಥಿ ಅನಂತಕುಮಾರ ಹೆಗಡೆ ಬಗ್ಗೆ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರ ಕುಟುಂಬ ಸತತ 23 ವರ್ಷಗಳಿಂದ ರಾಜಕಾರಣದಲ್ಲಿದೆ. ತಂದೆ, ತಾಯಿ, ಮಗ ಕಾರವಾರ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ’ ಎಂದು ಪ್ರಶ್ನಿಸಿದರು. 

‘ರಾಜಕೀಯವಾಗಿ ಸಹಾಯ ಮಾಡಿದ ಬಂಗಾರಪ್ಪ ಅವರ ಬೆನ್ನಿಗೇ ಚೂರಿ ಹಾಕಿದ್ದಾರೆ. ಆನಂದ ಅಸ್ನೋಟಿಕರ್ ಪಕ್ಷಾಂತರ ಮಾಡಿದ್ದರಿಂದ ಜನರಿಗೆ ಏನು ಲಾಭವಾಗಿದೆ ಎಂದು ಅಂಕಿ ಅಂಶ ನೀಡಲಿ’ ಎಂದು ಸವಾಲು ಹಾಕಿದರು.

‘ಹಣಕೋಣದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸಂಬಂಧ ಕಂಪನಿಯೊಂದು ಮುಂದೆ ಬಂದಾಗ ಅದರೊಂದಿಗೆ ಆನಂದ ಒಳಒಪ್ಪಂದ ಮಾಡಿಕೊಂಡಿದ್ದರು. ಹಣದ ಆಸೆಗೆ ಅಲ್ಲಿನ ಬಡವರ ಜಮೀನು ಕಸಿಯಲು ಯತ್ನಿಸಿದ್ದರು. ಕಂಪನಿಯವರು ನೀಡಿದ್ದ ಹಣದಾಸೆಗೆ ಮೀನುಗಾರ ಮಹಿಳೆಯರ ಮೇಲೆ ಪೊಲೀಸ್ ದೌರ್ಜನ್ಯ ಮಾಡಿಸಿದ್ದರು. ಸುಸಂಸ್ಕೃತ ಮನೆತನದ ಮಹಿಳೆಯರನ್ನು ಬಳ್ಳಾರಿ ಜೈಲಿಗೆ ಕಳುಹಿಸಿ ಈಗ ಹಿಂದುಳಿದವರ ಹಕ್ಕಿನ ರಕ್ಷಣೆಯ ಮಾತನ್ನಾಡುತ್ತಿರುವುದು ಕೇವಲ ಬೂಟಾಟಿಕೆ’ ಎಂದು ದೂರಿದರು. 

‘ಅನಂತ ಕುಮಾರ್ ಹೆಗಡೆ ಜಿಲ್ಲೆಗೆ ಕೈಗಾರಿಕೆ ತರಲಿಲ್ಲ ಎಂದು ಹೇಳುವ ಆನಂದ ಅಸ್ನೋಟಿಕರ್ ಅವರ ಕುಟುಂಬ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ? 23 ವರ್ಷಗಳ ಅಧಿಕಾರದ ಅವಧಿಯಲ್ಲಿ ಶಾಸಕರಾಗಿ, ವಿಧಾನಪರಿಷತ್ ಸದಸ್ಯರಾಗಿ, ಸಚಿವರಾಗಿ, ಕಾರವಾರ ಕ್ಷೇತ್ರಕ್ಕೆ ಎಷ್ಟು ಕೈಗಾರಿಕೆಗಳನ್ನು ತಂದಿದ್ದಾರೆ? ಎಷ್ಟು ಉದ್ಯೋಗ ಸೃಷ್ಟಿಯಾಗಿದೆ, ದಲಿತ, ಹಿಂದುಳಿದವರು ಎಷ್ಟು ಲಾಭ ಪಡೆದಿದ್ದಾರೆ ಎಂಬುದಕ್ಕೆ ಅವರು ಉತ್ತರಿಸಲಿ. ನಂತರ ಎರಡನೇ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !