ದೇಶ ವಿರೋಧಿಗಳಿಗೆ ಬಿಜೆಪಿ ಮಣೆ: ಬಿ.ಕೆ.ಹರಿಪ್ರಸಾದ್ ಟೀಕೆ

ಸೋಮವಾರ, ಮೇ 27, 2019
24 °C

ದೇಶ ವಿರೋಧಿಗಳಿಗೆ ಬಿಜೆಪಿ ಮಣೆ: ಬಿ.ಕೆ.ಹರಿಪ್ರಸಾದ್ ಟೀಕೆ

Published:
Updated:
Prajavani

ಶಿರಸಿ: ದೇಶದಾದ್ಯಂತ ಚುನಾವಣಾ ಪ್ರಚಾರ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘ಅಚ್ಛೇ ದಿನ್ ಆಯೇಗಾ’ ಹೇಳುತ್ತಿದ್ದಾರೆಯೇ ವಿನಾ ‘ಅಚ್ಛೇ ದಿನ್ ಆಗಯಾ’ ಎನ್ನುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಟೀಕಿಸಿದರು.

ಶನಿವಾರ ಇಲ್ಲಿ ಪಕ್ಷದ ಕಾರ್ಯಕರ್ತರ ಜತೆ ಮಾತುಕತೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2014ರಲ್ಲಿ ಭಾಷಣ ಮಾಡುವಾಗ ಒಳ್ಳೆಯ ದಿನಗಳು ಬರುತ್ತವೆ ಎನ್ನುತ್ತಿದ್ದ ಮೋದಿ, ಈಗ ಇನ್ನೊಂದು ಚುನಾವಣೆಯ ಎದುರಿನಲ್ಲೂ ಒಳ್ಳೆಯ ದಿನಗಳು ಬಂದಿವೆ ಎಂದು ಎಲ್ಲೂ ಹೇಳುತ್ತಿಲ್ಲ. ಈ ಬಾರಿಯ ಚುನಾವಣೆ ಹಿಂದಿನ ಆರೂವರೆ ದಶಕಗಳಿಗಿಂತ ಭಿನ್ನವಾಗಿದೆ. ಈ ಚುನಾವಣೆಯಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆಯಾಗುತ್ತಿಲ್ಲ’ ಎಂದರು.

ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರ, ಕೋಮುವಾದ ಮತ್ತು ಜಾತ್ಯತೀತ, ಸಂವಿಧಾನ ಪಾಲಿಸುವವರು ಮತ್ತು ಸಂವಿಧಾನ ವಿರೋಧಿಸುವವರ ನಡುವಿನ ಚುನಾವಣೆ ಇದಾಗಿದೆ. ಸಂವಿಧಾನದ ಆಧಾರದ ಮೇಲೆ ಸಂಸತ್ ಪ್ರದೇಶಿಸುವ ಬಿಜೆಪಿ ಸಂಸದರು, ಅದೇ ಸಂವಿಧಾನ ಬದಲಾವಣೆಯ ಮಾತನಾಡುತ್ತಾರೆ. ಇಂಥವರಿಗೆ ಮಾತನಾಡುವ ನೈತಿಕತೆಯಿಲ್ಲ. ಪ್ರಧಾನಿಗೆ ಸಂವಿಧಾನದ ಬಗ್ಗೆ ಗೌರವಿದ್ದಿದ್ದರೆ ಅಂಥ ಸಂಸದರನ್ನು ತಕ್ಷಣ ಸಂಪುಟದಿಂದ ಕಿತ್ತು ಹಾಕಬೇಕಿತ್ತು. ಆದರೆ ಹಾಗೆ ಮಾಡಿಲ್ಲ. ದೇಶವಿರೋಧಿ ಚಟುವಟಿಕೆ ಮಾಡುತ್ತಿರುವವರಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂದು ಆರೋಪಿಸಿದರು.

ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಬಿಜೆಪಿಗರಿಗೆ ಧೈರ್ಯವಿಲ್ಲ. ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆಯೇ ವಿನಾ ಅಭಿವೃದ್ಧಿ ಚರ್ಚೆಯಾಗುತ್ತಿಲ್ಲ. ಕರ್ನಾಟಕದಲ್ಲಿ ಧರ್ಮ ವಿಭಜನೆ ಪ್ರಯತ್ನ ನಡೆಯುತ್ತಿದೆ ಎಂದು ಮೋದಿ ಟೀಕಿಸಿದ್ದರು. ಮನುಷ್ಯ ಧರ್ಮವನ್ನೇ ನಾಶ ಮಾಡಿರುವ ಮೋದಿಗೆ ಧರ್ಮದ ಬಗ್ಗೆ ಮಾತನಾಡುವ ಹಕ್ಕಿಲ್ಲ.

ರಾಫೆಲ್ ವಿಮಾನ ಖರೀದಿಯ ಕಡತವೇ ನಾಪತ್ತೆಯಾಗಿದೆ. ರಾಫೆಲ್ ಹಗರಣ, ಹಸಿವಿನಿಂದ ಸಾವು ಇಂತಹ ಗಂಭೀರ ವಿಷಯಗಳ ಕುರಿತು ಲಕ್ಷ್ಯವನ್ನು ಬೇರೆಡೆಗೆ ತಿರುಗಿಸಲು ಸಾಕ್ಷಿ ಮಹಾರಾಜ್, ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಮುನ್ನೆಲೆಗೆ ತಂದಿದ್ದಾರೆ. ಒಬ್ಬ ಚೌಕಿದಾರರಿಗೆ ಕಡತವನ್ನೇ ಕಾಪಾಡಲು ಆಗಲಿಲ್ಲ, ಇನ್ನು ದೇಶವನ್ನು ಹೇಗೆ ಕಾಪಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೈತ್ರಿಕೂಟವು ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ. ಚುನಾವಣೆ ಫಲಿತಾಂಶದ ನಂತರ ರಾಜ್ಯ ಸರ್ಕಾರ ಪತನವಾಗಲಿದೆ ಎಂಬುದು ಬಿಜೆಪಿಯವರ ಕನಸು. ಯಡಿಯೂರಪ್ಪ ಅವರ ತಿರುಕನ ಕನಸು ಅದು ಎಂದು ಲೇವಡಿ ಮಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ನಾಯ್ಕ, ಪ್ರಮುಖರಾದ ವಿ.ಎಸ್.ಆರಾಧ್ಯ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !