ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದಲ್ಲಿ ಹಿಡಿತ ಬಿಗಿಗೊಳಿಸಿಕೊಂಡ ‘ಕೇಸರಿ’

ಒಂಬತ್ತು ಬಾರಿ ಪ್ರತಿನಿಧಿಸಿದ್ದ ‘ಕೈ’ ಪಡೆಯ ಸೋಲು, ಅರಳಿದ ‘ಕಮಲ’ ಪಕ್ಷದ ಯಶಸ್ಸಿನ ವಿಶ್ಲೇಷಣೆ
Last Updated 23 ಮೇ 2019, 15:56 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರವೆಂದರೆ ಸಾಕು, ‘ಅದು ಕಾಂಗ್ರೆಸ್‌ನ ಭದ್ರ ಕೋಟೆ’ ಎಂಬ ಭಾವನೆ ಇತ್ತು. ಅಂದಿನ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಬೇರೆ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಅವಕಾಶವೇ ಇಲ್ಲ ಎಂಬಂಥ ವಾತಾವರಣವಿತ್ತು. ಆದರೆ, 1996ರಿಂದ ನಂತರ ಆ ಚಿತ್ರಣ ಬದಲಾಗಿದೆ. ಇಲ್ಲಿ ಈಗ ಬಿಜೆಪಿ ಅಭ್ಯರ್ಥಿಯನ್ನು ಹೊರತು ಮತ್ಯಾರನ್ನೂ ಮತದಾರರು ಆಯ್ಕೆ ಮಾಡುತ್ತಿಲ್ಲ.

1952ರ ಮೊದಲ ಲೋಕಸಭಾ ಚುನಾವಣೆಯಿಂದ ಮೊದಲಾಗಿ 1991ರಲ್ಲಿ ನಡೆದ 10ನೇ ಚುನಾವಣೆಯವರೆಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಒಂಬತ್ತು ಬಾರಿ ಜಯಭೇರಿ ಬಾರಿಸಿತ್ತು. 1967ರಲ್ಲಿ ಮಾತ್ರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕವಿ ದಿನಕರ ದೇಸಾಯಿ ಗೆದ್ದಿದ್ದರು. ನಂತರ 1996 ಹಾಗೂ 1998ರಲ್ಲಿ ನಡೆದ ಮತದಾನದಲ್ಲಿ ಮತದಾರರು ಆಯ್ಕೆ ಮಾಡಿದ್ದು ಬಿಜೆಪಿಯ ಯುವ ಅಭ್ಯರ್ಥಿ ಅನಂತಕುಮಾರ ಹೆಗಡೆ ಅವರನ್ನು.

ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ಗೆ ತುಸು ಚೇತರಿಕೆ ನೀಡಿದ್ದು 1999ರ ಚುನಾವಣೆ. ಆ ಸಲ ಕೈ ಪಾಳಯದಿಂದ ಕಣಕ್ಕಿಳಿದಿದ್ದ ಮಾರ್ಗರೆಟ್ ಆಳ್ವ ಅವರು ಅನಂತಕುಮಾರ ಹೆಗಡೆ ಅವರನ್ನು ಪರಾಜಯಗೊಳಿಸಿದರು. ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ, ಅನಂತಕುಮಾರ ಹೆಗಡೆ ಅವರನ್ನೇ ಕಣಕ್ಕಿಳಿಸಿತು. ಪಕ್ಷದ ವಿಶ್ವಾಸವನ್ನು ಅವರು ಹುಸಿಗೊಳಿಸದ ಅವರು 1,72,226 ಮತಗಳ ಅಂತರದಿಂದ ಗೆದ್ದು ಬೀಗಿದರು.

ರಾಷ್ಟ್ರೀಯತೆ ವಿಚಾರ: 1990ರ ದಶಕದಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ಬಳಿಕ ಅನಂತಕುಮಾರ ಹೆಗಡೆ ಈ ಭಾಗದಲ್ಲಿಹೆಚ್ಚು ಪ್ರಚಲಿತರಾದರು. ಹಿಂದುತ್ವದ ವಿಚಾರವನ್ನೂ ಅವರು ಜೊತೆಯಾಗಿಸಿದ್ದು ಹಿಂದೂ ಯುವಕರನ್ನು ಭಾರಿ ಸಂಖ್ಯೆಯಲ್ಲಿ ಅವರತ್ತ ಸೆಳೆಯಿತು.

ಹೊನ್ನಾವರದ ಮೀನುಗಾರ ಕುಟುಂಬದ ಯುವಕ ಪರೇಶ ಮೇಸ್ತನ ಸಾವು ಪ್ರಕರಣವ ಬಿಜೆಪಿಗೆ ಅನುಕೂಲವನ್ನೇ ಮಾಡಿದೆ. ಗಲಭೆ ನಡೆದು ಹಲವು ವರ್ಷಗಳಾದರೂ ಇನ್ನೂ ಅದರ ಪ್ರಭಾವ ಬಿಜೆಪಿಗೆ ಲಾಭ ಮಾಡಿಕೊಡುತ್ತಿದೆ.

ಉಳಿದಂತೆ, ಪಕ್ಷದ ಸಂಘಟನೆ, ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ನಡೆದ ನಿರ್ದಿಷ್ಟ ದಾಳಿ ಹಾಗೂ ವಾಯು ದಾಳಿ, ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿಯ ಕಾರಣದಿಂದ ಕೂಡ ಮತದಾರರು ಬಿಜೆಪಿಯನ್ನು ಬೆಂಬಲಿಸಿರುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಹತ್ತಾರು ಕಾರಣಗಳಿಂದ ಕಮಲ ಪಕ್ಷವು ಸತತ ಗೆಲುವನ್ನು ದಾಖಲಿಸುತ್ತಿದೆ. ಆದರೆ, ಕಾಂಗ್ರೆಸ್ ಮಾತ್ರ ಇನ್ನೂ ತನ್ನ ಹಳೆಯ ಪರಂಪರೆಯ ನೆನಪಲ್ಲೇ ದಿನಕಳೆಯುತ್ತಿದೆ.

ಕಾಂಗ್ರೆಸ್‌ನ ಬಣ ರಾಜಕೀಯ: ಕಾಂಗ್ರೆಸ್ ಮುಖಂಡರು ಮೇಲ್ನೋಟಕ್ಕೆ ಎಷ್ಟೇ ಒಗ್ಗಟ್ಟು ಪ್ರದರ್ಶಿಸಿದರೂ ಜಿಲ್ಲೆಯಲ್ಲಿ ಇಂದಿಗೂ ಬಣಗಳಾಗಿ ಪಕ್ಷ ನಲುಗುತ್ತಿದೆ. ಹಿರಿಯ ಮುಖಂಡರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮತ್ತು ಮಾಜಿ ಸಚಿವೆ ಮಾರ್ಗರೇಟ್ ಆಳ್ವ ಅವರ ಬಣ ರಾಜಕೀಯದ ಹೊಗೆ ಆಗಾಗ ಹೊರಬರುತ್ತಿರುತ್ತದೆ.

ಮಾರ್ಗರೇಟ್ ಆಳ್ವ ಜಿಲ್ಲೆಯ ರಾಜಕೀಯದಲ್ಲಿ ನೇರವಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಅವರ ಛಾಯೆ ಪದೇ ಪದೇ ಕಾಣುತ್ತಿರುತ್ತದೆ. ಇತ್ತ ಇಡೀ ಜಿಲ್ಲೆಯಲ್ಲಿ ಪಕ್ಷವನ್ನು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲೇ ಇಟ್ಟುಕೊಳ್ಳುವ ಹಂಬಲ ದೇಶಪಾಂಡೆ ಅವರಿಗೆ. ಅದೇ ಬಿಜೆಪಿಯಲ್ಲಿ ಏನೇ ವೈಮನಸ್ಸು ಕಂಡುಬಂದರೂ ಚುನಾವಣೆಯ ವೇಳೆಗೆ ಒಟ್ಟಾಗುತ್ತಾರೆ. ಅವರ ಹೈಕಮಾಂಡ್ ಹೇಳಿದಂತೆ ಕೆಲಸ ಮಾಡುತ್ತಾರೆ ಎನ್ನುವುದು ಜಿಲ್ಲೆಯ ಪ್ರಮುಖ ಕಾಂಗ್ರೆಸಿಗರೊಬ್ಬರ ವಿಶ್ಲೇಷಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT