ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಕ್ಷೇತ್ರ: ಮೋದಿ ಅಲೆಯಲ್ಲಿ ಬಿಜೆಪಿಗೆ ಗೆಲುವು

ಮೈತ್ರಿ ಅಭ್ಯರ್ಥಿಗೆ ನಿರೀಕ್ಷಿತ ಸೋಲು: ಅನಂತಕುಮಾರ್ ಹೆಗಡೆಗೆ ದಾಖಲೆಯ ಜಯ
Last Updated 24 ಮೇ 2019, 10:33 IST
ಅಕ್ಷರ ಗಾತ್ರ

ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನಿರೀಕ್ಷಿತ ಗೆಲುವು ಸಾಧಿಸಿದೆ. ಇಡೀ ಕ್ಷೇತ್ರವನ್ನು ವ್ಯಾಪಿಸಿರುವ ಮೋದಿ ಗುಂಗು, ಅನಂತಕುಮಾರ್ ಹೆಗಡೆ ಅವರಿಗೆ ಗೆಲುವನ್ನು ತಂದುಕೊಟ್ಟಿದೆ.

ಚುನಾವಣೆಗೆ ಮೂರು ತಿಂಗಳು ಮೊದಲೇ ಬಿಜೆಪಿ ಕಾರ್ಯಕರ್ತರು ನಡೆಸಿದ ವ್ಯವಸ್ಥಿತ ಕಾರ್ಯಚಟುವಟಿಕೆ, ಆರ್‌ಎಸ್‌ಎಸ್ ಕಾರ್ಯಕರ್ತರ ಮನೆ–ಮನೆ ಭೇಟಿ, ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪೇಜ್ ಪ್ರಮುಖರ ನೇಮಕ ಬಿಜೆಪಿ ವಿಜಯಕ್ಕೆ ಸಹಕಾರಿಯಾಗಿದೆ. ಅಭ್ಯರ್ಥಿ ಅನಂತಕುಮಾರ್ ವಿರೋಧಿ ಅಲೆ ಮೀರಿದ ಮೋದಿ ಅಲೆ, ಹಿಂದುತ್ವದ ಗಾಳಿಯು ಪರ ಊರುಗಳಲ್ಲಿರುವ ಮತದಾರರು ಕೂಡ, ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಿತ್ತು.

ತುರುಸಿಲ್ಲದ ಚುನಾವಣೆ:

ಬಿಜೆಪಿ ಸಾಕಷ್ಟು ಮುಂಚಿತವಾಗಿ ಅಭ್ಯರ್ಥಿ ಘೋಷಣೆ ಮಾಡಿತ್ತು. ಐದು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಕೆಲಸ ಮಾಡಿರುವ ಅನಂತಕುಮಾರ್ ಹೆಗಡೆ ಟಿಕೆಟ್ ಘೋಷಣೆಗೂ ಪೂರ್ವದಲ್ಲೇ ಚುನಾವಣೆ ಸಿದ್ಧತೆ ಆರಂಭಿಸಿದ್ದರು. ಆದರೆ, ಮೀನಮೇಷ ಎಣಿಸುತ್ತಿದ್ದ ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟವು ಕೊನೆಯ ಕ್ಷಣದಲ್ಲಿ, ಕ್ಷೇತ್ರದಲ್ಲಿ ಬಲವೇ ಇಲ್ಲದ ಜೆಡಿಎಸ್‌ಗೆ ಟಿಕೆಟ್ ನೀಡಿತು.

ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದು, ಅಲ್ಲಿಂದ ಜೆಡಿಎಸ್‌ ಗೂಡಿಗೆ ಸೇರಿದ್ದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರವಾರದ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಅಭ್ಯರ್ಥಿ ಕೊರತೆ ಕಾಡುತ್ತಿದ್ದ ಜೆಡಿಎಸ್‌ನಲ್ಲಿ, ಸಾಕಷ್ಟು ವಿರೋಧಿಗಳನ್ನು ಹೊಂದಿರುವ ಆನಂದ ಅಸ್ನೋಟಿಕರ್‌ಗೆ ಟಿಕೆಟ್ ನೀಡಿದಾಗಲೇ, ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತವೆಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದರು.

ತೋರಿಕೆಯ ಬೆಂಬಲ:

2014ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಶಿವಾನಂದ ನಾಯ್ಕ ಕೊನೆಯ ಕ್ಷಣದಲ್ಲಿ ಕಣದಿಂದ ಹಿಂದಕ್ಕೆ ಸರಿದಿದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಒಟ್ಟು ಮತಗಳಲ್ಲಿ ಬಿಜೆಪಿಯ ಅನಂತಕುಮಾರ್ ಹೆಗಡೆ ಶೇ 54.64 ಮತ ಪಡೆದಿದ್ದರೆ, ಕಾಂಗ್ರೆಸ್‌ನ ಪ್ರಶಾಂತ ದೇಶಪಾಂಡೆ 40.58 ಮತ ಗಳಿಸಿದ್ದರು. 2009ರ ಚುನಾವಣೆಯಲ್ಲಿ ಬಿಜೆಪಿಯ ಅನಂತಕುಮಾರ್ ಹೆಗಡೆ ಶೇ 44.63, ಕಾಂಗ್ರೆಸ್‌ ಅಭ್ಯರ್ಥಿ ಮಾರ್ಗರೆಟ್ ಆಳ್ವ ಶೇ 41.63 ಹಾಗೂ ಜೆಡಿಎಸ್‌ನ ವಿ.ಡಿ.ಹೆಗಡೆ ಶೇ 6.43 ಮತ ಪಡೆದಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲೂ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಮೂರನೇ ಸ್ಥಾನದಲ್ಲಿತ್ತು. ಆದರೆ, ಈ ಬಾರಿ ಮೈತ್ರಿ ಅಭ್ಯರ್ಥಿ ಆಗಿದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮತಗಳನ್ನು ಒಗ್ಗೂಡಿಸಿದರೆ, ಅಸ್ನೋಟಿಕರ್‌ಗೆ ಗೆಲುವು ಕಠಿಣವಾಗಿರಲಿಲ್ಲ. ಟಿಕೆಟ್ ಕೈತಪ್ಪಿರುವ ಅಸಮಾಧಾನವನ್ನು ಕೊನೆಯ ತನಕವೂ ಉಳಿಸಿಕೊಂಡು ಬಂದ ಕಾಂಗ್ರೆಸ್, ಮೈತ್ರಿ ಅಭ್ಯರ್ಥಿಗೆ ತೋರಿಕೆ ಬೆಂಬಲ ಕೊಟ್ಟಿದ್ದು, ಅಸ್ನೋಟಿಕರ್ ಹೀನಾಯ ಸೋಲಿಗೆ ಕಾರಣವಾಯಿತು.

ಜೆಡಿಎಸ್‌ಗೆ ಟಿಕೆಟ್ ಘೋಷಣೆಯಾದಾಕ್ಷಣ ಅಸಮಾಧಾನ ಹೊರ ಹಾಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಕೆಲವು ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರೂ, ಅಂತರವನ್ನು ಕಾಯ್ದುಕೊಂಡಿದ್ದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಹಾಗೂ ಕಾರ್ಯಕರ್ತರು ಪ್ರತ್ಯೇಕತೆಯನ್ನು ಉಳಿಸಿಕೊಂಡೇ, ಪ್ರಚಾರದಲ್ಲಿ ಭಾಗಿಯಾಗಿದ್ದರು. ಚುನಾವಣೆ ಪೂರ್ವದ ಕೊನೆಯ ರೋಡ್ ಶೊದಲ್ಲಿ ಸಹ ಭೀಮಣ್ಣ ಹಾಗೂ ಅಸ್ನೋಟಿಕರ್ ನಡುವಿನ ಕಚ್ಚಾಟವನ್ನು ಸಾರ್ವಜನಿಕರು ಕಂಡಿದ್ದರು.

ರಾಜ್ಯ ನಾಯಕರಿಂದಲೂ ನಿರ್ಲಕ್ಷ್ಯ:

ಕಾಂಗ್ರೆಸ್‌ ಮುಖಂಡರನ್ನು ಭೇಟಿಯಾಗಿ ಓಲೈಸುವ ಭರದಲ್ಲಿ ಆನಂದ ಅಸ್ನೋಟಿಕರ್, ಜೆಡಿಎಸ್ ಸ್ಥಳೀಯ ನಾಯಕರನ್ನು ಭೇಟಿ ಮಾಡಲು ಮರೆತಿದ್ದರು. ಇದರಿಂದ ಮುನಿಸಿಕೊಂಡ ಜೆಡಿಎಸ್ ಪ್ರಮುಖರು ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ. ಅಲ್ಲದೇ, ಮಂಡ್ಯದ ಚುನಾವಣೆ ಮುಗಿದ ಮೇಲೆ, ಕೊನೆಕ್ಷಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಟ್ಟರೆ, ಜೆಡಿಎಸ್ ರಾಜ್ಯ ನಾಯಕರು, ಕಾಂಗ್ರೆಸ್‌ನ ತಾರಾ ಪ್ರಚಾರಕರು ಈ ಕ್ಷೇತ್ರದ ಪ್ರಚಾರಕ್ಕೆ ಬರಲಿಲ್ಲ. ರಾಜ್ಯ ನಾಯಕರಿಂದಲೂ ನಿರ್ಲಕ್ಷಕ್ಕೆ ಒಳದಾದ ಕ್ಷೇತ್ರದಲ್ಲಿ, ಅಭ್ಯರ್ಥಿಯೊಬ್ಬರೇ, ಹಿಂಬಾಲಕರ ಜೊತೆಗೂಡಿ ಪ್ರಚಾರ ಮಾಡುವ ಅನಿವಾರ್ಯತೆ ಬಂತು.

ಒಲಿದ ಅದೃಷ್ಟ:

‘ಐದು ಬಾರಿ ಸಂಸದರಾಗಿರುವ ಅನಂತಕುಮಾರ್ ಹೆಗಡೆ ಅವರಿಂದ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ. ಪಕ್ಷದ ಕಾರ್ಯಕರ್ತರು, ಸಾರ್ವಜನಿಕರ ಭೇಟಿಗೆ ಸಿಗುವುದಿಲ್ಲ. ಚುನಾವಣೆ ಹತ್ತಿರ ಬಂದಾಗ ಮಾತ್ರ ಜನರ ಬಳಿ ಬರುತ್ತಾರೆ’ ತೀವ್ರ ಅಸಮಾಧಾನ ಕ್ಷೇತ್ರದಲ್ಲಿದೆ. ಆದರೆ, ಸಮರ್ಥ ವಿರೋಧಿ ಅಭ್ಯರ್ಥಿಯ ಕೊರತೆ, ಬಿಜೆಪಿ ಅಲೆ, ಮೋದಿ ಅಲೆ ಅವರಿಗೆ ಪ್ರತಿ ಬಾರಿ ಅನಾಯಾಸ ಗೆಲುವನ್ನು ತಂದುಕೊಡುತ್ತಿದೆ. ಈ ಬಾರಿ ಕೂಡ ಅವರ ಮೇಲೆ ಅಸಮಾಧಾನಗೊಂಡಿದ್ದ ಕಾರ್ಯಕರ್ತರು ಮೋದಿ ಪರ ಮತಯಾಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT