ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ಡಿ ಬಿಜೆಪಿಯ ಎಲೆಕ್ಷನ್ ಡಿಪಾರ್ಟಮೆಂಟ್: ಹರಿಪ್ರಸಾದ್ ಟೀಕೆ

Last Updated 22 ಜುಲೈ 2022, 5:33 IST
ಅಕ್ಷರ ಗಾತ್ರ

ಶಿರಸಿ: 'ಜಾರಿ ನಿರ್ದೇಶನಾಲಯ (ಇ.ಡಿ.) ಬಿಜೆಪಿ ಪಾಲಿನ ಎಲೆಕ್ಷನ್ ಡಿಪಾರ್ಟಮೆಂಟ್ ಆಗಿ ಪರಿವರ್ತನೆಯಾಗಿದೆ' ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಟೀಕಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಸರ್ಕಾರದ ನಡೆ ಖಂಡಿಸುವ ಪ್ರಬಲ ನಾಯಕರನ್ನು ಗುರಿಯಾಗಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸೋನಿಯಾ ಗಾಂಧಿ ಅವರ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರ ತಪ್ಪಾಗಿ ನಡೆದುಕೊಂಡಿದೆ' ಎಂದರು.

'ಮೋದಿ ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಮಾಡಿದ್ದ ಸರ್ಕಾರಿ ಆಸ್ತಿಯನ್ನು ಖಾಸಗಿ ಉದ್ಯಮಿಗಳಿಗೆ ಮಾರಿ ಸರ್ಕಾರ ನಡೆಸುತ್ತಿದ್ದಾರೆ. ನ್ಯಾಶನಲ್ ಹೆರಾಲ್ಡ್ ಮಾರಾಟಕ್ಕೆ ಪರೋಕ್ಷ ಒತ್ತಡ ಹೇರಲು ಸೋನಿಯಾ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಲು ಮೋದಿ ಮುಂದಾಗಿದ್ದಾರೆ' ಎಂದರು.

'ಅಮಿತ್ ಶಾ ಮಗ ಜಯ್ ಶಾ ಅವರನ್ನು ಬಿಜೆಪಿ ಮೊದಲು ಇ.ಡಿ.ತನಿಖೆಗೆ ಒಳಪಡಿಸಲಿ. 2015ರಲ್ಲಿ ₹50 ಲಕ್ಷ ಆದಾಯ ಹೊಂದಿದ್ದ ಅವರು ಐಪಿಎಲ್ ವಹಿವಾಟಿನ ಮೂಲಕ ನೂರಾರು ಕೋಟಿ ಗಳಿಸಿದ್ದು ಹೇಗೆ ಎಂಬುದರ ಪತ್ತೆಯಾಗಲಿ' ಎಂದ ಒತ್ತಾಯಿಸಿದರು.

'ಅಧಿಕಾರಿಗಳು ಬಿಜೆಪಿ ಐದುನೂರು ವರ್ಷ ಅಧಿಕಾರದಲ್ಲಿರುತ್ತದೆ ಎಂಬ ಭ್ರಮೆಯಲ್ಲಿ ಇದ್ದರೆ ಅದು ತಪ್ಪು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅವರ ಸ್ಥಿತಿ ಏನಾಗಬಹುದು ಎಂಬುದನ್ನೂ ಮನದಲ್ಲಿಟ್ಟುಬೇಕು' ಎಂದು ಎಚ್ಚರಿಸಿದರು.

'ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಭಿನ್ನಾಭಿಪ್ರಾಯವಿಲ್ಲ. ಇಬ್ಬರೂ ಆಗಾಗ ಒಟ್ಟಿಗೆ ಕುಳಿತು ನಾಟಿ ಕೋಳಿ ಸಾರು, ಮುದ್ದೆ ಊಟ ಮಾಡುತ್ತಾರೆ' ಎಂದರು.

'ಈಶ್ವರಪ್ಪ ಮಾಡಿರುವ ಅನಾಹುತಗಳಿಗೆ ಕಾಲಾಪಾನಿ ಕುಡಿಸಬೇಕು. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರದಲ್ಲಿ ಸೂಕ್ತ ತನಿಖೆ ನಡೆಸಬೇಕು' ಎಂದರು.

'ಅಪರಾಧ, ಭ್ರಷ್ಟಾಚಾರ ವೈಭವೀಕರಣ, ಹಗರಣದಲ್ಲಿ ರಾಷ್ಟ್ರದಲ್ಲೇ ಕೆ.ಎಸ್.ಈಶ್ವರಪ್ಪ ನಂಬರ್ ಒನ್ ಆಗಿದ್ದಾರೆ. ಅವರ ಮೇಲೆ ಸರಿಯಾದ ತನಿಖೆ ನಡೆಸಬೇಕು' ಎಂದು ಒತ್ತಾಯಿಸಿದರು.

'ಕಸ್ತೂರಿ ರಂಗನ್ ಇಸ್ರೋ ಅಧ್ಯಕ್ಷರಾಗಿದ್ದವರು. ಸ್ಯಾಟಲೈಟ್ ಮೂಲಕ ಸರ್ವೆ ಮಾಡಿ ಪಶ್ಚಿಮ ಘಟ್ಟ ಪೂರ್ತಿ ಕಾಡು ಎಂಬ ತಪ್ಪು ವರದಿ ನೀಡಿದ್ದಾರೆ. ಈ ಅವೈಜ್ಞಾನಿಕ ವರದಿಯನ್ನು ತಿರಸ್ಕರಿಸಬೇಕು' ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗವತ, ನಾಗರಾಜ ನಾರ್ವೇಕರ್, ಜಗದೀಶ ಗೌಡ, ಅಬ್ಬಾಸ್ ತೊನ್ಸೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT