ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳುಮೆಣಸು: ‘ಕಪ್ಪು ಬಂಗಾರ’ಕ್ಕೆ ಅರ್ಧ ಲಕ್ಷ ಬೆಲೆ

ಕಳೆದ ವರ್ಷಕ್ಕಿಂತ ಪ್ರತಿ ಕ್ವಿಂಟಲ್‍ಗೆ ₹10 ಸಾವಿರಕ್ಕಿಂತ ಹೆಚ್ಚು ಏರಿಕೆ
Last Updated 11 ನವೆಂಬರ್ 2021, 4:20 IST
ಅಕ್ಷರ ಗಾತ್ರ

ಶಿರಸಿ: ಆರು ವರ್ಷದ ಹಿಂದೆ ಪ್ರತಿ ಕ್ವಿಂಟಲ್‍ ಕಾಳುಮೆಣಸಿಗೆ ₹70 ಸಾವಿರಕ್ಕೂ ಹೆಚ್ಚಿನ ದರ ಸಿಕ್ಕಿದ್ದು ಇತಿಹಾಸ. ಇದೇ ಇತಿಹಾಸ ಮತ್ತೆ ಮರುಕಳಿಸುವ ಕನಸು ಬೆಳೆಗಾರರ ಮೊಗದಲ್ಲಿ ಮೂಡಿದೆ. ಹೊಸ ಬೆಳೆ ಮಾರುಕಟ್ಟೆಗೆ ಬರುವ ಹೊಸ್ತಿನಲ್ಲಿ ಅರ್ಧ ಲಕ್ಷ ಬೆಲೆ ಕಂಡಿದ್ದು ಇದಕ್ಕೆ ಕಾರಣ.

ನಗರದ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಕಾಳುಮೆಣಸು ಸರಾಸರಿ ₹46 ಸಾವಿರದಿಂದ 48 ಸಾವಿರ ದರಕ್ಕೆ ಖರೀದಿಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರತಿ ಕ್ವಿಂಟಲ್‍ಗೆ ₹10 ಸಾವಿರಕ್ಕೂ ಹೆಚ್ಚು ದರ ಈ ಬಾರಿ ಲಭಿಸಿದೆ.

ಅಕ್ಟೋಬರ್ ಮಧ್ಯಂತರದಲ್ಲಿ ದರ ಏರಿಕೆಯ ಲಕ್ಷಣ ಗೋಚರಿಸಿತ್ತು. ಕೊನೆಯ ವಾರದಲ್ಲಿ ದರ ಅರ್ಧ ಲಕ್ಷಕ್ಕೆ ತಲುಪಿದ್ದು ಬೆಳೆಗಾರರಲ್ಲಿ ಅಚ್ಚರಿಯ ಜತೆಗೆ ಸಂತಸ ಮೂಡಿಸಿದೆ. ಅವಧಿ ಮುಗಿಯುತ್ತಿದ್ದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಆವಕ ಪ್ರಮಾಣವೂ ಇಳಿಮುಖವಾಗಿತ್ತು. ಹೆಚ್ಚಿನ ದರ ಲಭಿಸಿದ್ದರಿಂದ ಪ್ರತಿನಿತ್ಯ ಸರಾಸರಿ 70 ಕ್ವಿಂಟಲ್‍ಗೂ ಅಧಿಕ ಪ್ರಮಾಣದ ಕಾಳುಮೆಣಸು ಮಾರಾಟಕ್ಕೆ ತರಲಾಗುತ್ತಿದೆ.

ಕಾಳುಮೆಣಸು ಹೆಚ್ಚು ಬೆಳೆಯುವ ಸಕಲೇಶಪುರ, ದಕ್ಷಿಣ ಕನ್ನಡದ ಮಾರುಕಟ್ಟೆಗಿಂತಲೂ ಉತ್ತಮ ದರ ಶಿರಸಿ ಮಾರುಕಟ್ಟೆಯಲ್ಲಿ ಲಭಿಸುತ್ತಿದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

ದರ ಏರಿಕೆಗೆ ಕಾರಣವೇನು?;

‘ಕಡಿಮೆ ದರಕ್ಕೆ ವಿಯೆಟ್ನಾಂ ಕಾಳುಮೆಣಸು ದೊರೆಯುತ್ತಿದ್ದ ಕಾರಣ ಅದನ್ನು ಕಳ್ಳಮಾರ್ಗದಲ್ಲಿ ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ತರಲಾಗುತ್ತಿತ್ತು. ಈ ಕಾರಣಕ್ಕೆ ಸ್ಥಳೀಯ ಕಾಳುಮೆಣಸಿಗೆ ಬೇಡಿಕೆ ಕುಸಿದು, ದರವೂ ಕಡಿಮೆಯಾಗಿತ್ತು. ಆದರೆ ಈಗ ವಿಯೆಟ್ನಾಂ ಕಾಳುಮೆಣಸು ತರಲು ಅವಕಾಶ ಸಿಗದಿರುವುದು ದರ ಹೆಚ್ಚಳಕ್ಕೆ ಕಾರಣ ಇರಬಹುದು’ ಎಂದು ವಿಶ್ಲೇಷಿಸುತ್ತಾರೆ ಮಾರುಕಟ್ಟೆ ತಜ್ಞರು.

‘ಶ್ರೀಲಂಕಾ ಮಾರ್ಗವಾಗಿ ವಿಯೆಟ್ನಾಂ ಮತ್ತಿತರ ದೇಶದ ಕಾಳುಮೆಣಸನ್ನು ಭಾರತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಅಲ್ಲಿನ ರಾಜಕೀಯ ಸ್ಥಿತ್ಯಂತರದ ಕಾರಣ ಈ ಪ್ರಯತ್ನಕ್ಕೆ ಅಡ್ಡಿಯಾಗಿದೆ. ಹೀಗಾಗಿ ದರದಲ್ಲಿ ನಿರಂತರ ಏರಿಳಿತ ಕಾಣುತ್ತಿದೆ’ ಎಂಬ ವಿಶ್ಲೇಷಣೆ ಮುಂದಿಡುತ್ತಾರೆ ವ್ಯಾಪಾರಿ ತಬ್ರೇಜ್.

‘ಜನವರಿ ಬಳಿಕ ಹೊಸ ಫಸಲು ಮಾರುಕಟ್ಟೆಗೆ ಬರಲಿದ್ದು ಈಗಿನಕ್ಕಿಂತ ಹೆಚ್ಚು ದರ ಲಭಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ’ ಎನ್ನುತ್ತಾರೆಕದಂಬ ಮಾರ್ಕೆಟಿಂಗ್ ಸಂಸ್ಥೆಯ ಅಧಿಕಾರಿವಿಶ್ವೇಶ್ವರ ಭಟ್.

––––––––––

ಅಂಕಿ–ಅಂಶ

ದಿನಾಂಕ;ಗರಿಷ್ಠ ದರ (ಪ್ರತಿ ಕ್ವಿಂಟಲ್‍ಗೆ)

ಅ.25;₹50,170

ಅ.26;₹48,196

ಅ.27;₹51,869

ಅ.28;₹51,399

ಅ.29;₹51,499

ಅ.30;₹51,099

ನ.2;₹50,475

ನ.8;₹49,689

ನ.9;₹48,999

ನ.10;₹50,899

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT