ಕೂರ್ಮಗಡ ಬಳಿ ದೋಣಿ ದುರಂತ ಪ್ರಕರಣ: ನಾಲ್ಕನೇ ದಿನವೂ ಸಿಗದ ಬಾಲಕನ ಸುಳಿವು

7
ಘಟನಾ ಸ್ಥಳದಿಂದ ದೂರದಲ್ಲೂ ಹುಡುಕಾಟ

ಕೂರ್ಮಗಡ ಬಳಿ ದೋಣಿ ದುರಂತ ಪ್ರಕರಣ: ನಾಲ್ಕನೇ ದಿನವೂ ಸಿಗದ ಬಾಲಕನ ಸುಳಿವು

Published:
Updated:
Prajavani

ಕಾರವಾರ: ಕೂರ್ಮಗಡದಲ್ಲಿ ದುರಂತಕ್ಕೀಡಾದ ದೋಣಿಯಲ್ಲಿದ್ದ ಬಾಲಕ ಸಂದೀಪ ಪರಸಪ್ಪ (10) ಪತ್ತೆಗಾಗಿ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಅವಘಡ ನಡೆದ ನಾಲ್ಕನೇ ದಿನವಾದ ಗುರುವಾರವೂ ಆತನ ಸುಳಿವು ಸಿಗಲಿಲ್ಲ. 

ಕಾರವಾರದಿಂದ ಬೇಲೆಕೇರಿ, ಅಂಕೋಲಾ ಭಾಗದಲ್ಲೂ ರಕ್ಷಣಾ ತಂಡಗಳ ಸದಸ್ಯರು ಹುಡುಕಾಟ ನಡೆಸಿದವು. ಆದರೆ, ಸಂದೀಪ ಪತ್ತೆಯಾಗಲಿಲ್ಲ. ದೋಣಿಯಲ್ಲಿ ಅವನ ಜತೆಗೇ ಇದ್ದ ಬಾಲಕಿ ಕೀರ್ತಿಯ ಶವ ಘಟನಾ ಸ್ಥಳದಿಂದ ಸುಮಾರು 25 ಕಿಲೋಮೀಟರ್ ದೂರದ ಬೇಲೆಕೇರಿ ಬಳಿ ಬುಧವಾರ ಪತ್ತೆಯಾಗಿತ್ತು. ಹೀಗಾಗಿ ದಕ್ಷಿಣದ ಭಾಗಗಳಲ್ಲಿ ಕೂಡ ಗಮನ ಕೇಂದ್ರೀಕರಿಸಲಾಗಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವುದೂ ರಕ್ಷಣಾ ತಂಡಗಳ ಸುಗಮ ಕಾರ್ಯಾಚರಣೆಗೆ ಅಡಚಣೆಯಾಗಿದೆ. 

ಕಾರ್ಯಾಚರಣೆಗೆ ಐದು ತಂಡಗಳನ್ನು ರಚಿಸಲಾಗಿದ್ದು, 200ಕ್ಕೂ ಹೆಚ್ಚಿನ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕಂದಾಯ ಇಲಾಖೆ, ಕರಾವಳಿ ಕಾವಲು ಪೊಲೀಸ್, ಕೋಸ್ಟ್ ಗಾರ್ಡ್, ಪೊಲೀಸ್ ಇಲಾಖೆ, ನೌಕಾನೆಲೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿವಿಧ ತಂಡಗಳಲ್ಲಿದ್ದಾರೆ. 

ಎರಡು ಹೆಲಿಕಾಪ್ಟರ್‌ಗಳು ಹಾಗೂ 10ಕ್ಕೂ ಹೆಚ್ಚು ದೋಣಿಗಳನ್ನೂ ಬಳಕೆ ಮಾಡಿಕೊಳ್ಳಲಾಗಿದೆ. ಸೀಬರ್ಡ್‌ ನೌಕಾನೆಲೆಯ ತಿಲಾಂಚಾಂಗ್ ಹಾಗೂ ಕೋಸ್ಟ್ ಗಾರ್ಡ್ ನೌಕೆಗಳ ಸಿಬ್ಬಂದಿ ಹಗಲು ರಾತ್ರಿ ಎನ್ನದೇ ಶೋಧಕಾರ್ಯದಲ್ಲಿದ್ದಾರೆ. ಗೋವಾ ಭಾಗದ ಸಮುದ್ರ, ಕಾಳಿನದಿಯ ಅಂಚಿನಲ್ಲಿ, ಅರಬ್ಬಿ ಸಮುದ್ರದ ತೀರದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ.

ಬೈತಖೋಲ್‌ನ ಅಲೆ ತಡೆಗೋಡೆ ಸಮೀಪ ಒಂದು ಶವ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿತ್ತು. ಆದರೆ, ಅಲ್ಲಿ ಒಂದೆಡೆ ಟೈರ್ ಮತ್ತೊಂದೆಡೆ ಯಾವುದೋ ಬಟ್ಟೆ ಕಂಡುಬಂದಿದೆ ಎಂದು ಖಚಿತವಾಯಿತು. 

‘ಸಂಖ್ಯೆ ಸ್ಪಷ್ಟವಾಗಿಲ್ಲ’

ದುರಂತಕ್ಕೀಡಾದ ದೋಣಿಯಲ್ಲಿ ಸಾಗರ ಮತ್ಸ್ಯಾಲಯದ ಇಬ್ಬರು ಸಿಬ್ಬಂದಿ ಕೂಡ ಇದ್ದರು. ಅವರು ಬಚಾವಾಗಿ ಬಂದಿದ್ದಾರೆ. ಆ ಪ್ರಕಾರ ದೋಣಿಯಲ್ಲಿ 37 ಜನರಿದ್ದರು ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ‘ಈ ಬಗ್ಗೆ ಸ್ಪಷ್ಟವಾಗಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ತಿಳಿಸಿದರು. 

‘ಬಾಲಕನ ಪತ್ತೆಯಾಗುವವರೆಗೂ ಕಾರ್ಯಾಚರಣೆ ಮುಂದುವರಿಸುವ ಯೋಚನೆಯಲ್ಲಿದ್ದೇವೆ. ಕಾರ್ಯಾಚರಣೆಗೆ ನೌಕಾದಳದ ಸಹಾಯ ಮುಂದುವರಿಸುವ ಬಗ್ಗೆ ಅಲೆಗಳ ಉಬ್ಬರ, ಇಳಿತವನ್ನು ಆಧರಿಸಿ ನಿರ್ಧರಿಸಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !