ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಯ ಮೇಲೆ ಶಿಕ್ಷಕರ ಕೃತಿಯ ಬೆಳಕು

‘ಹುಲ್ಕುತ್ರಿ ಸಂಸ್ಕೃತಿ, ಒಂದು ಶೋಧನಾ ಕೃತಿ’ ಪ್ರಕಟಿಸಿದ ದರ್ಶನ ನಾರಾಯಣ ಹರಿಕಾಂತ
Last Updated 20 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಸಿದ್ದಾಪುರ:ತಾನು ಸೇವೆ ಸಲ್ಲಿಸುತ್ತಿರುವ ಶಾಲೆಯ ಸುತ್ತಲಿನ ಪ್ರದೇಶದ ಇತಿಹಾಸ ದಾಖಲಿಸಿ, ಪುಸ್ತಕ ರೂಪದಲ್ಲಿ ಪ್ರಕಟಿಸುವ ಮಹತ್ವದ ಕಾರ್ಯವನ್ನು ತಾಲ್ಲೂಕಿನ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ದರ್ಶನ ನಾರಾಯಣ ಹರಿಕಾಂತ ಮಾಡಿದ್ದಾರೆ.

15 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿರುವ ಅವರು, ಅಂಕೋಲಾ ತಾಲ್ಲೂಕಿನ ಬಿಳಿಹೊಯ್ಗಿ ಗ್ರಾಮದವರು. ಅವರು ಶಿಕ್ಷಕರಾಗಿ ಮೊದಲು ಬಂದಿದ್ದೇ ತಾಲ್ಲೂಕಿನ ಅತ್ಯಂತ ಒಳಹಳ್ಳಿಯಾಗಿರುವ ಹುಲ್ಕುತ್ರಿಗೆ. ಇಲ್ಲಿಗೆ ಬಂದ ನಂತರ ಹಲವು ವರ್ಷ ಕೇವಲ ಕಲಿಸುವಿಕೆಯಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿಯೇ ಈ ಪ್ರದೇಶಕ್ಕೆ ಸಂಬಂಧಿಸಿದ ಹಲವು ಸಂಗತಿಗಳನ್ನು ತಿಳಿದುಕೊಂಡರು. ಈ ಮೂಲಕ ಇಲ್ಲಿನ ಇತಿಹಾಸ, ಸಂಸ್ಕೃತಿಯನ್ನು ದಾಖಲಿಸುವ ಅಗತ್ಯವನ್ನು ಮನಗಂಡರು.

ಈ ಪುಸ್ತಕ ರಚನೆಗಾಗಿ 25ಕ್ಕಿಂತ ಹೆಚ್ಚು ಜನರನ್ನು ಭೇಟಿ ಮಾಡಿ ವಿವರಗಳನ್ನು ಸಂಗ್ರಹಿಸಿದ್ದಾರೆ.ಈ ಊರಿನ ಇತಿಹಾಸದ ಬಗ್ಗೆ ತಿಳಿಯಲು ನಿವೃತ್ತ ಶಿಕ್ಷಕ ಪದ್ಮಾಕರ ಮಡಗಾಂವಕರ್ (‘ಬಿಳಗಿ ಸಂಸ್ಥಾನ’ ಕೃತಿಯ ಲೇಖಕ) ಅವರನ್ನು ಸಂಪರ್ಕಿಸಿದರು. 2018ರ ಬೇಸಿಗೆಯಲ್ಲಿ ಪುಸ್ತಕ ರಚನೆ ಆರಂಭಿಸಿದ ಅವರು, 2019ರ ಜನವರಿಯಲ್ಲಿ ಅದನ್ನು ಪ್ರಕಟಿಸಿದರು. ತಮ್ಮದೇ ಶಾಲೆಯಲ್ಲಿ ನಡೆದ ಚಿಣ್ಣರ ಜಾತ್ರೆಯ ಸಂದರ್ಭದಲ್ಲಿ ಅದನ್ನು ಬಿಡುಗಡೆಗೊಳಿಸಿದರು.

‘ಹುಲ್ಕುತ್ರಿ ಸಂಸ್ಕೃತಿ, ಒಂದು ಶೋಧನಾ ಕೃತಿ’ ಈ ಪುಸ್ತಕದಲ್ಲಿ ಹುಲ್ಲುತ್ರಿ ಹಾಗೂ ಹಾವಿನಬೀಳು ಗ್ರಾಮದ ಗ್ರಾಮೀಣ ಪರಿಸರದ ಸಮಗ್ರ ಚಿತ್ರಣವನ್ನು ದರ್ಶನ ಹರಿಕಾಂತ ಕಟ್ಟಿಕೊಟ್ಟಿದ್ದಾರೆ. ಭೌಗೋಳಿಕ ಪರಿಸರದಿಂದ ಆರಂಭಗೊಂಡು, ಅರಣ್ಯ ಸಂಪತ್ತು, ಉದ್ಯೋಗ, ಹುಲ್ಕುತ್ರಿ ತಲುಪಲು ಮಾರ್ಗಗಳು, ಹತ್ತಿರದ ಸರ್ಕಾರಿ ಕಚೇರಿಗಳು, ಇಲ್ಲಿ ವಾಸಿಸುವ ಸಮುದಾಯಗಳು, ಹುಲ್ಕುತ್ರಿ ಇತಿಹಾಸ, ಹಾವಿನ ಬೀಳು ಗ್ರಾಮದ ಪೌರಾಣಿಕ ಹಿನ್ನೆಲೆ ಇತ್ಯಾದಿ ಭಾಗಗಳಲ್ಲಿ ಮಾಹಿತಿ ನೀಡಲಾಗಿದೆ.

ಕ್ರಿ.ಶ. 1878ರಲ್ಲಿ, ಗೋಪಾಲ ಭೈರ್ಯ ಗೌಡ ಎಂಬವರು ಹೊನ್ನಾವರ ತಾಲ್ಲೂಕಿನ ಯಾವುದೋ ಪುಟ್ಟ ಊರಿನಿಂದ ಇಲ್ಲಿಗೆ ಬಂದಿದ್ದು, ನಂತರ ಅವರ ದಾಯಾದಿಗಳು ಹಾಗೂ ಇತರರು ಬಂದ ವಿವರಗಳನ್ನು ಪುಸ್ತಕದಲ್ಲಿ ನೀಡಲಾಗಿದೆ. ಈ ಪ್ರದೇಶಕ್ಕೂ ಬಿಳಗಿ ಅರಸರಿಗೂ ಇದ್ದ ಆತ್ಮೀಯ ಸಂಬಂಧದ ಬಗ್ಗೆಯೂ ಪುಸ್ತಕ ವಿವರಿಸಿದೆ.

ಈ ಎಲ್ಲ ಐತಿಹಾಸಿಕ ಸಂಗತಿಗಳೊಂದಿಗೆ, ಊರಿನ ಇಂದಿನ ಸ್ಥಿತಿಗತಿಗಳನ್ನು ಲೇಖಕರು ವಿವರಿಸಿದ್ದಾರೆ. ಈ ಭಾಗದ ಸ್ವಾತಂತ್ರ್ಯ ಯೋಧ ಹಾವಿನಬೀಳಿನ ರಾಮಚಂದ್ರ ಸೀತಾರಾಮ ಭಟ್ಟ ಅವರ ಕುರಿತು ಹೇಳಿರುವ ಲೇಖಕರು, ತಾವು ಕೆಲಸ ಮಾಡುತ್ತಿರುವ ಶಾಲೆಯ ಇತಿಹಾಸವನ್ನೂ ಕಟ್ಟಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT