ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸಂಕಷ್ಟದಲ್ಲೇ ಕೈತಪ್ಪಿದ ಕೆಲಸ

ಅತಂತ್ರರಾಗಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬಿಆರ್‌ಸಿ, ಸಿಆರ್‌ಸಿಗಳು
Last Updated 27 ಏಪ್ರಿಲ್ 2020, 18:30 IST
ಅಕ್ಷರ ಗಾತ್ರ

ಶಿರಸಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಬಿಆರ್‌ಸಿ ಮತ್ತು ಸಿಆರ್‌ಸಿಗಳಾಗಿ ಕೆಲಸ ಮಾಡುತ್ತಿದ್ದ ರಾಜ್ಯ ಸುಮಾರು 200 ಜನರು ಕೆಲಸ ಕಳೆದುಕೊಂಡಿದ್ದಾರೆ. ಕೊರೊನಾ ನಿಯಂತ್ರಿಸಲು ಲಾಕ್‌ಡೌನ್ ಇರುವ ಸಂದರ್ಭದಲ್ಲೇ ಇವರನ್ನು ಕೆಲಸದಿಂದ ತೆಗೆಯುವಂತೆ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ವಿಶ್ವ ಬ್ಯಾಂಕ್ ನೆರವಿನ ಜಲ ನಿರ್ಮಲ ಯೋಜನೆಯಲ್ಲಿ ಗ್ರಾಮ ಪಂಚಾಯ್ತಿ ಸಂಯೋಜಕರಾಗಿ 2010ರಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ಇವರು, ಯೋಜನೆ ಮುಕ್ತಾಯಗೊಂಡ ನಂತರ, 2015ರಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಬಿಆರ್‌ಎಸಿ, ಸಿಆರ್‌ಸಿ ಸಂಯೋಜಕರಾಗಿ ಮುಂದುವರಿದಿದ್ದರು. ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ 14 ಬಿಆರ್‌ಎಸಿ, ಸಿಆರ್‌ಸಿಗಳಿದ್ದರು.

‘ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅಡಿ ಕಾರ್ಯ ನಿರ್ವಹಿಸುತ್ತಿದ್ದ ನಾವು ನೀರು ಸರಬರಾಜು, ಕುಡಿಯುವ ನೀರಿನ ಗುಣಮಟ್ಟ, ಸರ್ವೆ ಕಾರ್ಯಗಳನ್ನು ಮಾಡುತ್ತಿದ್ದೆವು. ಚಾಲ್ತಿಯಲ್ಲಿದ್ದ ಮತ್ತು ಹಾಳಾದ ಕೊಳವೆಬಾವಿ ಮಾಹಿತಿ, ಸ್ಥಳ ಪರಿಶೀಲನೆ, ಕಚೇರಿ ಕೆಲಸಗಳನ್ನು ಸಹ ನಿರ್ವಹಿಸುತ್ತಿದ್ದೆವು. ಈಗ ಯೋಜನೆ ಪೂರ್ಣಗೊಂಡಿರುವ ಕಾರಣ ನೀಡಿ, ಇಲಾಖೆ ಆಯುಕ್ತರು ಮಾರ್ಚ್‌ 30ರಿಂದ ನಮ್ಮನ್ನು ಕೆಲಸದಿಂದ ತೆಗೆಯುವಂತೆ ಆದೇಶ ಹೊರಡಿಸಿದ್ದಾರೆ’ ಎಂದು ಬಿಆರ್‌ಸಿಯೊಬ್ಬರು ಹೇಳಿದರು.

‘ಕೊರೊನಾ ಸೋಂಕಿನಿಂದ ದೇಶದ ಆರ್ಥಿಕತೆ ಕುಸಿದಿರುವಾಗ, ಖಾಸಗಿ ವಲಯದಲ್ಲಿ ಯಾವುದೇ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಸರ್ಕಾರಿ ವ್ಯವಸ್ಥೆಯಲ್ಲಿ ಹೊರಗುತ್ತಿಗೆಯಲ್ಲಿ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದ ನಮ್ಮನ್ನು ಕೆಲಸದಿಂದ ತೆಗೆಯುವ ಆದೇಶ ಬಂದಿದೆ’ ಎಂದು ಅವರು ನೋವಿನಿಂದ ಹೇಳಿದರು.

‘ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡರೂ, ಹೊಸದಾಗಿ ಜಾರಿಯಾಗಲಿರುವ ಜಲ ಜೀವನ್ ಮಿಷನ್ ಯೋಜನೆಯಲ್ಲಿ ನಮ್ಮನ್ನು ಮುಂದುವರಿಸಲು ಸರ್ಕಾರ ಮುಂದಾಗಬೇಕು. 10 ತಿಂಗಳುಗಳಿಂದ ಗೌರವಧನ ಬರದಿದ್ದರೂ ನಾವು ಕೆಲಸ ಮಾಡಿದ್ದರಿಂದ ಸರ್ಕಾರ ಮಾನವೀಯ ನೆಲೆಯಲ್ಲಿ ನಮ್ಮನ್ನು ಆದ್ಯತೆ ಮೇಲೆ ಪರಿಗಣಿಸಬೇಕು’ ಎಂದು ಅವರು ವಿನಂತಿಸಿದರು.

‘ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡಿದೆ. ಈ ಯೋಜನೆ ಅನುಷ್ಠಾನಕ್ಕೆ ಸಿಆರ್‌ಸಿ, ಬಿಆರ್‌ಸಿಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು. ಇವರು ಕಾಯಂ ನೌಕರರಲ್ಲದ ಕಾರಣ ಯೋಜನೆ ಪೂರ್ಣೊಗೊಂಡ ಮೇಲೆ ಇವರ ಕೆಲಸದ ಅವಧಿಯೂ ಮುಗಿದಿದೆ. ಹೊಸ ಜಲ ಜೀವನ್ ಮಿಷನ್ ಯೋಜನೆಯಲ್ಲಿ ಸಿಆರ್‌ಸಿ, ಬಿಆರ್‌ಸಿ ನೇಮಕದ ಬಗ್ಗೆ ನಿರ್ಧಾರವಾಗಿಲ್ಲ’ ಎಂದು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT