ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊರಕೆ ತಯಾರಿಯಲ್ಲಿ ಕೈ ತುಂಬ ಕೆಲಸ; 25 ಮಹಿಳೆಯರಿಗೆ ಉದ್ಯೋಗ ನೀಡಿದ ಯುವಕ

Last Updated 1 ಮೇ 2019, 19:45 IST
ಅಕ್ಷರ ಗಾತ್ರ

ಮುಂಡಗೋಡ:ಸ್ನೇಹಿತನ ಮದುವೆ ಕಾರ್ಡ್‌ ನೀಡಲು ಹೋದಾಗ ಸಿಕ್ಕ ಉದ್ಯೋಗದ ಅವಕಾಶ ಇಂದು ಸ್ವಾವಲಂಬಿ ಬದುಕಿಗೆ ನಾಂದಿ ಹಾಡಿದೆ. ಪ್ರತಿನಿತ್ಯ 20ರಿಂದ 25 ಮಹಿಳೆಯರಿಗೂ ಕೆಲಸ ಸಿಕ್ಕಿದೆ. ಇಲ್ಲಿ ತಯಾರಾಗುವ ಕಸಬರಿಗೆಗಳು (ಝಾಡೂ, ಪೊರಕೆ) ‘555’, ‘999’, ‘ಪ್ರೀಮಿಯರ್‌’ ಹೆಸರಿನಿಂದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ.

ಪಟ್ಟಣದ ಗಾಂಧಿನಗರದಲ್ಲಿ ಯುವಕ ಜಗದೀಶ ಗೌಳಿಒಂಬತ್ತು ವರ್ಷಗಳಿಂದ ಕಸಬರಿಗೆ ತಯಾರಿಕೆ ಘಟಕವನ್ನು ನಡೆಸುತ್ತಿದ್ದಾರೆ. ಇಲ್ಲಿ ಪ್ರತಿನಿತ್ಯ 2,500ರಿಂದ 3,000 ಕಸಬರಿಗೆಗಳು ತಯಾರಾಗುತ್ತಿವೆ. ಹತ್ತಾರು ದುಡಿಯುವ ಕೈಗಳಿಗೂ ಕೆಲಸ ನೀಡುತ್ತ, ತಿಂಗಳಿಗೆ ₹ 15 ಸಾವಿರದಿಂದ ₹ 20 ಸಾವಿರ ಆದಾಯ ಗಳಿಸುತ್ತಿದ್ದಾರೆ.

ಸ್ವಾವಲಂಬಿಗೆ ಅವಕಾಶ:‘ಕೆಲವು ವರ್ಷಗಳ ಹಿಂದೆ ಸ್ನೇಹಿತನ ಮದುವೆ ಕಾರ್ಡ್‌ ಹಂಚಲು ಧಾರವಾಡಕ್ಕೆ ತೆರಳಿದ್ದೆ. ಎದುರಿಗೆ ಇದ್ದವರಿಗೆ ನನ್ನನ್ನುಸ್ನೇಹಿತ ಪರಿಚಯಿಸಿದ್ದ. ಹಾಗೆ ಮಾತನಾಡುತ್ತ ನಿರುದ್ಯೋಗಿಯಾಗಿ ಇರುವುದನ್ನೂತಿಳಿಸಿದ್ದ. ಆಗ ಸ್ನೇಹಿತನ ಪರಿಚಯಸ್ಥರು ಸ್ವಂತ ಕೆಲಸ ಮಾಡುಬಹುದಲ್ಲಾ ಎಂದಿದ್ದರು. ‘ಝಾಡೂ’ ತಯಾರಿಕೆಯ ಬಗ್ಗೆ ನನಗೆ ತಿಳಿಸಿ ಕೊಟ್ಟಿದ್ದರು. ಕಡಿಮೆ ಬಂಡವಾಳದಲ್ಲಿ ಕೆಲಸ ಆರಂಭಿಸು, ಕಚ್ಚಾ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತೇವೆ. ಪ್ರತಿ ಝಾಡೂಗೆ ಇಂತಿಷ್ಟು ಅಂತ ದರ ನಿಗದಿಮಾಡಿ ಖರೀದಿಸುತ್ತೇವೆ ಎಂದು ಭರವಸೆ ನೀಡಿದ್ದರು. ಅಲ್ಲಿಂದ ಸ್ವಂತ ಉದ್ಯೋಗ ಆರಂಭವಾಯಿತು’ ಎಂದು ಜಗದೀಶ ಗೌಳಿ ನೆನಪುಗಳನ್ನು ‘ಪ್ರಜಾವಾಣಿ’ಯೊಂದಿಗೆ ಮೆಲುಕು ಹಾಕಿದರು.

ಹಾನಿಯ ಸಾಧ್ಯತೆ:ಕಸಬರಿಗೆಯಲ್ಲಿ ಬಳಸುವ ‘ಶಿಲ್ಲಾಂಗ್’ (ಹುಲ್ಲುಕಡ್ಡಿ) ಒಣಗಿದಷ್ಟು ತೂಕ ಕಡಿಮೆ ಬರುತ್ತದೆ. ಪೂರೈಕೆ ಮಾಡಿದಾಗ ಹುಲ್ಲುಕಡ್ಡಿ ಸ್ವಲ್ಪ ಹಸಿ ಇರುತ್ತದೆ. ನಿಗದಿತ ದಿನದ ಒಳಗೆ ತಯಾರು ಮಾಡಿದರೆ ತೂಕದಲ್ಲಿ ಅಷ್ಟೇನೂ ವ್ಯತ್ಯಾಸ ಆಗುವುದಿಲ್ಲ. ಕೂಲಿಯವರು ಕೆಲಸದ ವೇಗ ಕಡಿಮೆ ಮಾಡಿದರೆ, ಹುಲ್ಲುಕಡ್ಡಿಯ ತೂಕದಲ್ಲಿಯೂ ವ್ಯತ್ಯಾಸ ಆಗಿ ನಷ್ಟ ಆಗುತ್ತದೆ ಎಂದು ಹೇಳಿದರು.

ಪ್ರತಿ ಪೊರಕೆಗೆ ₹ 1.20 ಕೂಲಿ

‘ಪ್ರತಿ ಝಾಡೂ 360 ಗ್ರಾಂ ಇರುತ್ತದೆ. ಹುಬ್ಬಳ್ಳಿಯಿಂದ ಕಚ್ಚಾ ಸಾಮಗ್ರಿಗಳ ಪೂರೈಕೆ ಆಗುತ್ತದೆ. ಇಲ್ಲಿ ತಯಾರಾಗಿದ್ದನ್ನು ತೆಗೆದುಕೊಂಡು, ಅದಕ್ಕೆ ‘ಬ್ರ್ಯಾಂಡ್‌ ಲೇಬಲ್‌’ ಅಂಟಿಸಿ ಪೂರೈಕೆದಾರರು ಮಾರಾಟ ಮಾಡುತ್ತಾರೆ. ಬೇಡಿಕೆ ಹೆಚ್ಚು ಇರುವಾಗ ಘಟಕದಲ್ಲಿ ಕೂಲಿಯವರ ಸಂಖ್ಯೆಯೂ ಹೆಚ್ಚಿರುತ್ತದೆ. ಸಾಮಾನ್ಯವಾಗಿ 15ರಿಂದ 20 ಮಹಿಳೆಯರು ಪ್ರತಿನಿತ್ಯ ಕೆಲಸ ಮಾಡುತ್ತಾರೆ. ಒಬ್ಬೊಬ್ಬ ಮಹಿಳೆಯೂ ಪ್ರತಿ ದಿನ ಗರಿಷ್ಠ 250 ಝಾಡೂಗಳನ್ನು ತಯಾರಿಸುತ್ತಾರೆ. ಒಂದು ಕಸಬರಿಗೆ ತಯಾರು ಮಾಡಿದರೆ ಕೂಲಿಯವರೆಗೆ ₹ 1.20 ಸಿಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT