ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾ ಸಿನಿಮಾ ಕನಸು

Last Updated 14 ಜೂನ್ 2018, 14:10 IST
ಅಕ್ಷರ ಗಾತ್ರ

’ಪುಟ್ಟಗೌರಿ ಮದುವೆ’ ಧಾರಾವಾಹಿಯ ಹಿಮಾ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಟಿ ನಮ್ರತಾ ಗೌಡ ಚಿಕ್ಕ ವಯಸ್ಸಿನಲ್ಲಿಯೇ ಸಕತ್ ಫೇಮಸ್ ಆಗಿದ್ದಾರೆ. ನೇರನುಡಿ, ಮತ್ತೊಬ್ಬರ ಕಷ್ಟಕ್ಕೆ ಮಿಡಿಯುವ ಮನ, ಪ್ರೀತಿಯೇ ಜೀವಾಳ ಎಂದು ನಂಬಿರುವ ಹಿಮಾ ಪಾತ್ರಕ್ಕೆ ಜೀವ ತುಂಬಿ, ಕನ್ನಡಿಗರ ಮನಸ್ಸನ್ನು ಆವರಿಸಿಕೊಂಡಿರುವ ಇವರು ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿ, ಅಲ್ಲಿಯೇ ಬೆಳೆದು ಆರ್ಕಿಟೆಕ್ಚರ್ ವಿಷಯದಲ್ಲಿ ಪದವಿ ಓದುತ್ತಿರುವ ಅವರು ಈ ಬಿಳಿಕೆನ್ನೆ ಬೆಡಗಿ ತನ್ನ ಪಾತ್ರಗಳನ್ನು ಆಯ್ದುಕೊಳ್ಳುವುದರಲ್ಲಿ ಬಹಳ ಚ್ಯೂಸಿ. ಎಂಟು ವರ್ಷದವಳಿದ್ದಾಗಲೇ ಕನ್ನಡ ಚಿತ್ರರಂಗಕ್ಕೆ ಬಾಲನಟಿಯಾಗಿ ಪದಾರ್ಪಣೆ ಮಾಡಿದ ಇವರು ಬಾಲ್ಯದಲ್ಲಿ ‘ಮಿಲನ’, ‘ಎಕ್ಸ್‌ಕ್ಯೂಸ್ ಮೀ’, ‘ಗೇಮ್’, ‘ತುತ್ತೂರಿ’ ಮುಂತಾದ ಸಿನಿಮಾಗಳಲ್ಲಿ ಮತ್ತು ‘ನಾಕುತಂತಿ’, ‘ಅಪಾರ್ಟ್‌ಮೆಂಟ್’, ‘ಆಕಾಶದೀಪ’, ‘ವಾತ್ಸಲ್ಯ’, ‘ಚೆಲುವಿ’, ‘ಸಿಲ್ಲಿ ಲಲ್ಲಿ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹತ್ತನೇ ತರಗತಿಯ ಹೊಸ್ತಿಲಲ್ಲಿರುವಾಗ ಕಿರುತೆರೆ ಮತ್ತು ಹಿರಿತೆರೆಗೆ ಅಲ್ಪವಿರಾಮ ನೀಡಿ ಓದಿನೆಡೆಗೆ ಗಮನ ಹರಿಸಿದ ನಂತರ ಮತ್ತೆ ಮೂರು ವರ್ಷ ಅಂದರೆ ಪಿಯುಸಿ ಮುಗಿಯುವವರೆಗೆ ಮತ್ತೇ ಅಭಿನಯದತ್ತ ಮುಖ ಮಾಡಲಿಲ್ಲ.

ದ್ವಿತೀಯ ಪಿಯುಸಿ ಮುಗಿದ ಮೇಲೆ ಮತ್ತೆ ಅಭಿನಯಕ್ಕೆ ವಾಪಸ್ಸಾಗಲು, ಸಂಬಂಧಿಕರು, ಸ್ನೇಹಿತರ ಮತ್ತು ಪರಿಚಯದವರ ಒತ್ತಡಕ್ಕೆ ಮಣಿದು ಮರಳಿದರು. ಕಿರುತೆರೆಗೆ ಬಂದ ಮೇಲೆ ಸಿಕ್ಕ ಅವಕಾಶ ಎಂದರೆ ಕಲರ್ಸ್ ಕನ್ನಡ ವಾಹಿನಿಯ ಪುಟ್ಟಗೌರಿ ಮದುವೆ. ಪಾತ್ರ ಒಪ್ಪಿಕೊಳ್ಳುವಲ್ಲಿ ತುಂಬಾ ಯೋಚಿಸುವ ಇವರಿಗೆ ಮೊದಮೊದಲು ಹಿಮಾ ಎಂದರೆ ಧಾರಾವಾಹಿಯ ನೆಗೆಟಿವ್ ಪಾತ್ರ ಎಂದುಕೊಂಡಿದ್ದರಂತೆ. ಆದರೆ ನಿರ್ದೇಶಕರು ಇವರ ಮನವೊಲಿಸಿದ ನಂತರವಷ್ಟೇ ಒಪ್ಪಿಕೊಂಡರು. ಅಂದುಕೊಂಡಿದ್ದಕ್ಕಿಂತ ಜಾಸ್ತಿಯೇ ಜನಪ್ರಿಯತೆ ಪಡೆದ ಧಾರಾವಾಹಿಯಿಂದ ನಮ್ರತಾ ಮತ್ತಷ್ಟು ಜನಪ್ರಿಯರಾಗಿದ್ದಾರೆ.

ನಮ್ರತಾ ನೃತ್ಯಗಾರ್ತಿ ಕೂಡ. ಇವರು ಕ್ಲಾಸಿಕ್ ಮತ್ತು ವೆಸ್ಟರ್ನ್ ಡಾನ್ಸ್‌ಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಇವರು ಬ್ಲಾಕ್ ಬೆಲ್ಟ್ ಕರಾಟೆಪಟು ಕೂಡ.

ಧಾರಾವಾಹಿಯ ಹಿಮಾ ಪಾತ್ರಕ್ಕೂ, ನೈಜ ಬದುಕಿನ ನಮ್ರತಾಗೂ ಎಳ್ಳಷ್ಟು ವ್ಯತ್ಯಾಸವಿಲ್ಲ ಎನ್ನುತ್ತಾರೆ. ಹಿಮಾ ನೇರನುಡಿಯ, ಸೌಮ್ಯ ಸ್ವಭಾವದ, ಮುಗ್ಧ ಹುಡುಗಿ. ನಿಜ ಜೀವನದಲ್ಲೂ ಅಷ್ಟೇ ಸೌಮ್ಯವಾಗಿರುವ ನಮ್ರತಾಗೆ ಮನೆಯಿಂದ ಹೊರಗಡೆ ಕಾಲ ಕಳೆಯುವುದು, ಪಾರ್ಟಿ, ಪಬ್‌ಗಳೆಂದರೆ ಅಷ್ಟಕ್ಕಷ್ಟೇ. ಹೆಚ್ಚಾಗಿ ಮನೆಯಲ್ಲಿ ಇರೋಕೆ ಇಷ್ಟ ಪಡುವ ಇವರು ತಮ್ಮ ಬಿಡುವಿನ ವೇಳೆಯನ್ನು ನೃತ್ಯ ಮಾಡುವುದರಲ್ಲಿ ಕಳೆಯುತ್ತಾರೆ. ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಯ ಸಿರಿಯಲ್‌ ನೋಡುವುದು ಇವರಿಗೆ ಅಚ್ಚುಮೆಚ್ಚು. ಇದೆಲ್ಲದರ ಹೊರತಾಗಿ, ತಮ್ಮ ವೃತ್ತಿಯನ್ನೂ, ಪದವಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ನಮ್ರತಾ ಕ್ರಿಯಾಶೀಲ ವ್ಯಕ್ತಿತ್ವದವರು.

ಕಿರುತೆರೆಯ ಜೊತೆ ಜೊತೆಗೆ ಚಂದನವನದಲ್ಲಿ ನಟಿಸೋಕೆ ಹಲವಾರು ಅವಕಾಶಗಳು ಇವರನ್ನು ಅರಸುತ್ತ ಬಂದರೂ ಇವರು ಸದ್ಯಕ್ಕೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಒಂದು ಒಳ್ಳೆಯ ಬ್ಯಾನರ್ ಅಡಿಯಲ್ಲಿ ಮೂಡುವ ನೈಜ ಅಭಿನಯಕ್ಕೆ ಪ್ರಾಶಸ್ತ್ಯ ಕೊಡುವ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಡಬೇಕೆನ್ನುವುದು ಇವರ ಕನಸು.

ಅವರ ಸಿನಿಮಾ ಲಾಂಚ್ ಪ್ರೊಜೆಕ್ಟ್ ಬಗ್ಗೆ ತಮ್ಮದೇ ಧಾಟಿಯಲ್ಲಿ ವಿವರಿಸುವ ನಮ್ರತಾಗೆ ನಟಿ ಅನುಷ್ಕಾ ಶರ್ಮಾ ಅಭಿನಯಿಸಿದ ಅರುಂಧತಿ ಚಿತ್ರದ ಮಾದರಿಯ ಸಿನಿಮಾ, ಎರಡು ಶೇಡ್‌ಗಳಿರುವ, ಸ್ವತಂತ್ರ ಪೂರ್ವದ ಕಥಾನಕಗಳನ್ನು ಬಿಂಬಿಸುವ ಸಿನಿಮಾಗಳಲ್ಲಿ ನಟಿಸಿ ಜನರ ಮನ್ನಣೆ ಗಳಿಸುವ ತವಕ. ತಮ್ಮ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಜೊತೆ ತೆರೆ ಹಂಚಿಕೊಳ್ಳುವ ಕನಸು ಇವರದು. ಒಳ್ಳೆಯ ಅವಕಾಶಗಳು ಸಿಕ್ಕರೆ ಎಲ್ಲ ಭಾಷೆಯ ಸಿನಿಮಾಗಳನ್ನು ಮಾಡಲು ಸದಾ ಸನ್ನದ್ಧ.

‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಮೂಲಕ ಸಮಾಜಕ್ಕೆ ಬಾಲ್ಯವಿವಾಹದ ವಿರುದ್ಧ ಒಂದು ಉತ್ತಮ ಸಂದೇಶವನ್ನು ನಮ್ಮ ತಂಡ ನೀಡುತ್ತ ಬರುತ್ತಿದೆ. ಅದಕ್ಕೆ ಯಾವುದೇ ಪಾಲಕರು, ಮನೆಯ ಹಿರಿಯರು ಕಟ್ಟುಪಾಡುಗಳಿಗೆ ಬಿದ್ದು ಬಾಲ್ಯವನ್ನು ಸೊಗಸಾಗಿ ಕಳೆಯಬೇಕಾದ ಮಕ್ಕಳನ್ನು ಮದುವೆ ಮಾಡಿ ಸಂಸಾರದ ಬಂಡಿ ದೂಡುವಂತೆ ಮಾಡುವುದು ಸರಿಯಲ್ಲ. ಸಮಾಜ ಬದಲಾಗಬೇಕು, ಜನರ ಮನಸ್ಥಿತಿ ಬದಲಾಗಬೇಕು ಎನ್ನುವ ಅಭಿಲಾಷೆ ಇವರದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT