ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಒದಗಿಲು ಆಗ್ರಹ

ರಾಜ್ಯ ಕಟ್ಟಡ, ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸದಸ್ಯರಿಂದ ಪ್ರತಿಭಟನೆ
Last Updated 22 ಸೆಪ್ಟೆಂಬರ್ 2022, 15:43 IST
ಅಕ್ಷರ ಗಾತ್ರ

ಕಾರವಾರ: ‘ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ನಿಧಿಯಿಂದ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಫಲಾನುಭವಿಗಳಿಗೆ ಮನೆ ನಿರ್ಮಿಸಬಾರದು. ಕಟ್ಟಡ ಕಾರ್ಮಿಕರಿಗೆ ಸೂಕ್ತ ಸೌಲಭ್ಯ ಒದಗಿಸಬೇಕು’ ಎಂದು ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿ.ಐ.ಟಿ.ಯು ಸಂಯೋಜಿತ) ಸದಸ್ಯರು ನಗರದ ಕಾರ್ಮಿಕ ಇಲಾಖೆ ಕಚೇರಿಯ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಬಳಿಕ ಜಿಲ್ಲಾ ಕಾರ್ಮಿಕ ಕಲ್ಯಾಣ ಅಧಿಕಾರಿ ಅಕ್ಬರ್ ಮುಲ್ಲಾ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ‘2018– 19ನೇ ಸಾಲಿನ ನಂತರ ಕೊಳೆಗೇರಿ ಅಭಿವೃದ್ಧಿ ಮಂಡಳಿಯಡಿ 5,129 ಫಲಾನುಭವಿಗಳಿಗೆ ₹ 76 ಕೋಟಿ ಬಿಡುಗಡೆ ಮಾಡಲಾಗಿದೆ. 2017ರಲ್ಲೇ ಕಟ್ಟಡ ಕಾರ್ಮಿಕರಿಗೆ ವಸತಿ ನಿರ್ಮಾಣಕ್ಕೆಂದು ಸಾಲ ಅಥವಾ ಮುಂಗಡ ಹಣ ಪಾವತಿ ಯೋಜನೆಯನ್ನು ಘೋಷಿಸಲಾಗಿದೆ. ಆದರೆ, ಸೂಕ್ತ ನಿಯಮಾವಳಿಗಳನ್ನು ಮಾಡಿಲ್ಲ. ಇದರಿಂದ ಹಲವು ಫಲಾನುಭವಿಗಳಿಗೆ ಸೌಲಭ್ಯ ಸಿಗುತ್ತಿಲ್ಲ’ ಎಂದು ಆರೋಪಿಸಿದರು.

‘ಕಟ್ಟಡ ಕಾರ್ಮಿಕರಿಗೆ ಆರೋಗ್ಯ ಸಂಜೀವಿನಿ ಮಾದರಿಯಲ್ಲಿ ನಗದು ರಹಿತ ಸೇವೆ ನೀಡಬೇಕು. ವಿವಿಧ ಸೌಲಭ್ಯಗಳನ್ನು ಪಡೆಯಲು ಎಸ್‌.ಎಸ್‌.ಪಿ ಪೋರ್ಟಲ್‌ನಲ್ಲಿ 60 ಸಾವಿರ ಅರ್ಜಿಗಳು ಬಾಕಿಯಿವೆ. ಅವುಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು. ನೈಜ ಕಟ್ಟಡ ಕಾರ್ಮಿಕರಿಗೆ ಆದ್ಯತೆ ಸಿಗಬೇಕು’ ಎಂದು ಒತ್ತಾಯಿಸಿದರು.

‘ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಮೂಲಕ ಮನೆಗಳ ನಿರ್ಮಾಣಕ್ಕೆಂದು ಅರ್ಜಿ ಸಲ್ಲಿಸಿದವರಿಗೆ ಹಲವು ವರ್ಷಗಳಾದರೂ ಮಂಜೂರಾಗಿಲ್ಲ. ಆದರೆ, ಇತ್ತೀಚೆಗೆ ಹೆಸರು ನೋಂದಾಯಿಸಿದವರಿಗೆ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಅನುದಾನ ನೀಡಲಾಗಿದೆ. ಈ ಮೂಲಕ ಕಟ್ಟಡ ಕಲ್ಯಾಣ ಮಂಡಳಿಯ ಅನುದಾನ ಪೋಲಾಗುತ್ತಿದೆ’ ಎಂದು ದೂರಿದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್‌ನ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ ನಾಯ್ಕ, ಪ್ರಧಾನ ಕಾರ್ಯದರ್ಶಿ ತಿಲಕ್ ಗೌಡ, ಉಪಾಧ್ಯಕ್ಷ ಶಾಂತಾರಾಮ ನಾಯಕ, ಸಿ.ಐ.ಟಿ.ಯು ಮುಖಂಡರಾದ ಯಮುನಾ ಗಾಂವ್ಕರ್, ಕೃಷ್ಣ ಭಟ್, ಪ್ರಭಾಕರ ಅಮ್ಚೇಕರ್, ತಿಮ್ಮಪ್ಪ ಗೌಡ, ಕರುಣಾ ಹಣಬರ್, ಸುನೀಲ ನಾಯ್ಕ, ಜ್ಯೋತಿ ನಾರ್ವೇಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT