ಮೃತ ಮಾರಿಕೋಣದ ಅಂತ್ಯಕ್ರಿಯೆ

7

ಮೃತ ಮಾರಿಕೋಣದ ಅಂತ್ಯಕ್ರಿಯೆ

Published:
Updated:

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಿಯ ಈ ಹಿಂದಿನ ಪಟ್ಟದ ಕೋಣ ವೃದ್ಧಾಪ್ಯದ ಕಾರಣದಿಂದ ಗುರುವಾರ ಮೃತಪಟ್ಟಿದೆ.

1996ರಿಂದ ನಿರಂತರ 22 ವರ್ಷಗಳ ಕಾಲ ಪಟ್ಟದ ಕೋಣವೆಂಬ ವಿಶೇಷ ಭಕ್ತಿಗೆ ಪಾತ್ರವಾಗಿದ್ದ ಈ ಕೋಣವನ್ನು ಮೂರು ವರ್ಷಗಳ ಹಿಂದೆ ಪಟ್ಟದಿಂದ ಇಳಿಸಿ, ಬೇರೆ ಕೋಣವೊಂದಕ್ಕೆ ಪಟ್ಟ ಕಟ್ಟಲಾಗಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ದೇವಿ ಜಾತ್ರೆ ಹಾಗೂ ದೇವಿಯ ವಿವಾಹ ಮಹೋತ್ಸವದಲ್ಲಿ ಪಟ್ಟಣ ಕೋಣಕ್ಕೆ ವಿಶೇಷ ಪ್ರಾಧಾನ್ಯತೆಯಿದೆ. 1930ರಿಂದ ಜಾತ್ರೆಯಲ್ಲಿ ಕೋಣನ ಬಲಿ ರದ್ದುಗೊಂಡ ಪಟ್ಟವೇರಿದ್ದ 5ನೇ ಕೋಣ ಇದಾಗಿತ್ತು.

‘ವೃದ್ಧಾಪ್ಯದಿಂದಾಗಿ ಕೋಣನ ಹಲ್ಲು ಉದುರಿದ್ದವು. ನಿತ್ಯ ಗಂಜಿರೂಪದ ಆಹಾರವನ್ನು ಅದಕ್ಕೆ ನೀಡಲಾಗುತ್ತಿತ್ತು. ವಯಸ್ಸಾಗಿದ್ದರೂ, ಯಾವುದೇ ಕಾಯಿಲೆಗೆ ತುತ್ತಾಗದೇ, ದೇವಾಲಯದ ವ್ಯವಸ್ಥೆಗೆ ಯಾವುದೇ ತೊಂದರೆ ಆಗದಂತೆ ಅದು ಮೃತಪಟ್ಟಿರುವುದು ವಿಶೇಷವಾಗಿದೆ’ ಎನ್ನುತ್ತಾರೆ ಧರ್ಮದರ್ಶಿ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ.

ದೇವಿಯ ದರ್ಶನಕ್ಕೆ ಬರುವವರು ಕೋಣನ ದರ್ಶನವನ್ನೂ ಮಾಡಿಕೊಂಡು ಹೋಗುವುದು ಇಲ್ಲಿನ ವಿಶೇಷತೆ. ದೇವಸ್ಥಾನದ ಸಂಪ್ರದಾಯದಂತೆ ಮೇತ್ರಿ ಕುಟುಂಬದವರು ಕೋಣನ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಅದೇ ರೀತಿ ಶಾಂತವ್ವ ಹಾಗೂ ಕುಟುಂಬದವರು ಬನವಾಸಿ ರಸ್ತೆಯಲ್ಲಿರುವ ಜಾತ್ರಾ ವಿಸರ್ಜನಾ ಪೀಠದ ಸ್ಥಳದಲ್ಲಿ ಎಲ್ಲ ವಿಧಿ– ವಿಧಾನಗಳೊಂದಿಗೆ ಕೋಣನ ಅಂತ್ಯ ಸಂಸ್ಕಾರ ನಡೆಸಿದರು. ಧರ್ಮದರ್ಶಿ ಮಂಡಳಿ ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿಗಳಾದ ಲಕ್ಷ್ಮಣ ಕಾನಡೆ, ಶಶಿಕಲಾ ಚಂದ್ರಾಪಟ್ಟಣ, ಬಾಬುದಾರ ಮುಖ್ಯಸ್ಥರಾದ ವಿಜಯ ನಾಡಿಗ್, ಜಗದೀಶ ಗೌಡ, ರಮೇಶ ದಬ್ಬೆ, ದೇವಾಲಯದ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !