ಶುಕ್ರವಾರ, ಸೆಪ್ಟೆಂಬರ್ 18, 2020
24 °C
ಕಾಳಿ ನದಿ ನೀರಿನ ತಿರುವು ವಿರೋಧಿಸಿ ಜೊಯಿಡಾ ಬಂದ್ ವೇಳೆ ಪ್ರತಿಭಟನಾಕಾರರ ಒತ್ತಾಯ

‘ಸ್ಥಳೀಯರಿಗೆ ಮೊದಲು ಅಗತ್ಯ ನೀರು ಕೊಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೊಯಿಡಾ: ಕಾಳಿ ನದಿಯ ನೀರನ್ನು ಬೇರೆ ಜಿಲ್ಲೆಗಳಿಗೆ ಹರಿಸುವುದನ್ನು ವಿರೋಧಿಸಿ ಗ್ರಾಮ ಕೇಂದ್ರದಲ್ಲಿ ಸೋಮವಾರ ಬಂದ್ ಆಚರಿಸಲಾಯಿತು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ ವರ್ತಕರು ಬೆಂಬಲ ಸೂಚಿಸಿದರು. ಶಾಲಾ ಕಾಲೇಜುಗಳು ಎಂದಿನಂತೆ ತೆರೆದಿದ್ದವು.

ಕಾಳಿ ಬ್ರಿಗೇಡ್, ವ್ಯಾಪಾರಸ್ಥರ ಸಂಘ ಹಾಗೂ ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳ ನೇತೃತ್ವದಲ್ಲಿ ‘ಕಾಳಿ ನದಿ ರಕ್ಷಿಸಿ, ಜೊಯಿಡಾ ತಾಲ್ಲೂಕು ಉಳಿಸಿ‍’ ಎಂಬ ಘೋಷವಾಕ್ಯದಲ್ಲಿ ಬಂದ್ ಕರೆ ನೀಡಲಾಗಿತ್ತು. ಶಿವಾಜಿ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿದ ನೂರಾರು ಪ್ರತಿಭಟನಾಕಾರರು, ತಹಶೀಲ್ದಾರ್ ಸಂಜಯ ಕಾಂಬಳೆ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಳಿ ಬ್ರಿಗೇಡ್‌ನ ಸಂಚಾಲಕ ರವಿ ರೇಡ್ಕರ್, ‘ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಆದರೂ ಕಾಳಿ ನದಿಯ ನೀರನ್ನು ಹೊರಜಿಲ್ಲೆಗಳಿಗೆ ಕೊಂಡೊಯ್ಯುವ ಹುನ್ನಾರ ನಡೆದಿದೆ. ಇದರ ಹಿಂದೆ ಸಕ್ಕರೆ ಕಾರ್ಖಾನೆಗಳ ಮಾಲೀಕರ ಲಾಭಿ ಕಾಣುತ್ತಿದೆ’ ಎಂದು ದೂರಿದರು.

‘ಹಲವಾರು ಯೋಜನೆಗಳಿಂದ ಸಂತ್ರಸ್ತರಾಗಿರುವ ನಮ್ಮ ಜನರಿಗೆ ಮಾಡುವ ಮತ್ತೊಂದು ದ್ರೋಹ ಇದಾಗಿದೆ. ಇನ್ನು ಒಂದೇ ಒಂದು ಯೋಜನೆಯನ್ನೂ ಇಲ್ಲಿ ಮಾಡಲು ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಹೋರಾಟಗಾರ ಹಳಿಯಾಳದ ಕುಮಾರ ಬೋಬಾಟೆ ಮಾತನಾಡಿ, ‘ಕಾಳಿ ನದಿ ಪಾತ್ರದ ಜನರಿಗೆ ಮೊದಲು ಕುಡಿಯುವ ನೀರು ಮತ್ತು ಕೃಷಿಗೆ ನೀಡುವಂತಾಗಬೇಕು. ಇದಕ್ಕಾಗಿ ಸರ್ಕಾರ ಯೋಜನೆ ರೂಪಿಸಬೇಕು’ ಎಂದು ಒತ್ತಾಯಿಸಿದರು. 

ಜೊಯಿಡಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಫೀಕ್ ಖಾಜಿ ಮಾತನಾಡಿ, ‘ಸೂಪಾ ನಿರಾಶ್ರಿತರಿಗೆ ಸರಿಯಾದ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯವನ್ನು ಇಂದಿಗೂ ಒದಗಿಸಿಲ್ಲ. ಕೋಟಿ ರೂಪಾಯಿಗಳ ಲೆಕ್ಕದಲ್ಲಿ ಕುಡಿಯುವ ನೀರಿಗೆ ಹಣ ಖರ್ಚು ಮಾಡಲಾಗಿದೆ. ಆದರೂ ರಾಮನಗರದಲ್ಲಿ 15 ದಿನ, ಜೊಯಿಡಾದಲ್ಲಿ ವಾರಕ್ಕೆ ಒಂದು ಸಲ ನೀರು ಬರುತ್ತದೆ. ಕಾಳಿ ನದಿಯ ನೀರನ್ನು ಮೊದಲು ನಮ್ಮ ಜನರಿಗೆ ಕೊಡಬೇಕು’ ಎಂದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ತುಕಾರಾಂ ಮಾಂಜ್ರೇಕರ್ ಮಾತನಾಡಿ, ‘ಸೂಪಾ ನಿರಾಶ್ರಿತರ ಕೇಂದ್ರದಲ್ಲಿ ಕುಡಿಯುವ ನೀರಿನ ಹಾಹಾಕಾರ ಇದ್ದರೂ ಎಲ್ಲವೂ ಸರಿಯಿದೆ ಎಂದು ಕೆ.ಪಿ.ಸಿ ಮತ್ತು ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡುತ್ತಾರೆ’ ಎಂದು ಆರೋ‍ಪಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ನಾಯ್ಕ, ತಾಲ್ಲೂಕು ಪಂಚಾಯ್ತಿ ಸದಸ್ಯ ಸುರೇಶ ಬಂಗಾರಿ, ಜೊಯಿಡಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೈಲಾ ನಾಯ್ಕ, ಉಪಾಧ್ಯಕ್ಷ ಶ್ಯಾಮ ಪೋಕಳೆ, ದಾಂಡೇಲಿ ಕಾಳಿ ಹೋರಾಟ ಸಮಿತಿಯ ವಾಸುದೇವ ಪ್ರಭು, ಕುಂಬಾರವಾಡಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪುರುಷೋತ್ತಮ ಕಾಮತ್, ಉಳವಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಮೊಕಾಶಿ, ಶಿವಾಜಿ ಗೋಸಾವಿ, ಪ್ರೇಮಾನಂದ ವೇಳಿಪ, ದೇವಿದಾಸ ವೇಳಿಪ ಇದ್ದರು. ಜೊಯಿಡಾ ಸರ್ಕಲ್ ಇನ್‌ಸ್ಪೆಕ್ಟರ್ ರಮೇಶ ಹೂಗಾರ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು