ಸೋಮವಾರ, ಅಕ್ಟೋಬರ್ 21, 2019
21 °C
ಯಲ್ಲಾಪುರದ ದೇಶಪಾಂಡೆ ನಗರ ಸಮೀಪ ಸರಣಿ ಅಪಘಾತ

ಬಸ್‍ಗಳ ಮುಖಾಮುಖಿ ಡಿಕ್ಕಿ: ಚಾಲಕ ಸಾವು

Published:
Updated:
Prajavani

ಯಲ್ಲಾಪುರ: ತಾಲ್ಲೂಕಿನ ದೇಶಪಾಂಡೆ ನಗರದ ಸಮೀಪ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಬುಧವಾರ ರಾಜ್ಯ ರಸ್ತೆ ಸಾರಿಗೆಯ ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿವೆ. ಇದರ ಪರಿಣಾಮ ಒಬ್ಬ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

15 ಜನರಿಗೆ ಗಾಯಗಳಾಗಿವೆ. ಅಪಘಾತವಾದ ಬಸ್‌ನ ಹಿಂಬದಿಗೆ ಬೊಲೇರೊ ವಾಹನವೊಂದು ಕೂಡ ಡಿಕ್ಕಿ ಹೊಡೆದಿದೆ. 

ಕಾರವಾರದಿಂದ ನರಗುಂದಕ್ಕೆ ಹೋಗುತ್ತಿದ್ದ ಹಾಗೂ ಹುಬ್ಬಳ್ಳಿಯಿಂದ ಕಾರವಾರಕ್ಕೆ ಬರುತ್ತಿದ್ದ ಬಸ್‌ಗಳು ಮುಖಾಮುಖಿ ಡಿಕ್ಕಿಯಾದವು. ಇದರ ಪರಿಣಾಮ, ಕಾರವಾರದತ್ತ ಬರುತ್ತಿದ್ದ ಬಸ್‌ ಚಾಲಕ ಯಮನಪ್ಪ ಮಾದರ ಬಿಜಾಪುರ ಸ್ಥಳದಲ್ಲೇ ಮೃತಪಟ್ಟರು. ಇನ್ನೊಂದು ಬಸ್‌ನ ಚಾಲಕ ರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಲ್ಲಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಕೆಲವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಆಂಬುಲೆನ್ಸ್ ಅಪಘಾತ: ಅಪಘಾತದಲ್ಲಿ ಗಾಯಗೊಂಡವರನ್ನು ಕರೆದುಕೊಂಡು ಬರಲು ಹೋಗುತ್ತಿದ್ದ ತಾಲ್ಲೂಕು ಆಸ್ಪತ್ರೆಯ ನಗು–ಮಗು ಆಂಬುಲೆನ್ಸ್ ಹಳಿಯಾಳ ಕ್ರಾಸ್ ಬಳಿ ಮರಕ್ಕೆ ಗುದ್ದಿದೆ. ಇದರಿಂದ ವಾಹನದ ಮುಂಭಾಗ ಜಖಂಗೊಂಡಿದೆ. 

ಅಪಘಾತದ ಮಾಹಿತಿ ಸಿಕ್ಕಿದ ತಕ್ಷಣ ಮಾಜಿ ಶಾಸಕ ಶಿವರಾಮ ಹೆಬ್ಬಾರ, ಪೊಲೀಸ್ ಹಾಗೂ ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಬದಲಿ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮತ್ತು ರಸ್ತೆ ಸಂಚಾರ ಸುಗಮಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಸುಮಾರು ಎರಡು ಗಂಟೆ ವಾಹನ ಸಂಚಾರಕ್ಕೆ ತೊಂದರೆಯಾಯಿತು.

Post Comments (+)