ಮುರ್ಡೇಶ್ವರದ ಪುಷ್ಕರಣಿ ನವೀಕರಣ

7
ಭಟ್ಕಳ: ತಂದೆಯ ಜನ್ಮದಿನಕ್ಕೆ ಕೊಡುಗೆ ನೀಡಲು ಪುತ್ರನ ಸಿದ್ಧತೆ

ಮುರ್ಡೇಶ್ವರದ ಪುಷ್ಕರಣಿ ನವೀಕರಣ

Published:
Updated:
Deccan Herald

ಭಟ್ಕಳ: ಶಿವನ ಪಂಚಕ್ಷೇತ್ರಗಳಲ್ಲಿ ಒಂದಾದ ಪುರಾಣ ಪ್ರಸಿದ್ಧ ಮುರ್ಡೇಶ್ವರದಲ್ಲಿರುವ ಪುಷ್ಕರಣಿಯನ್ನು ಉದ್ಯಮಿ ಆರ್‌.ಎನ್.ಶೆಟ್ಟಿ ಅವರ ಪುತ್ರ ಸುನೀಲ್‌, ತಮ್ಮ ತಂದೆಯ ಜನ್ಮದಿನದ ಅಂಗವಾಗಿ ನವೀಕರಣ ಮಾಡಿಸುತ್ತಿದ್ದಾರೆ. ಅದನ್ನು ಇದೇ 15ರಂದು ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಸಿದ್ದಾರೆ.

ಸುತ್ತಲೂ ಸಮುದ್ರ, ನಡುವೆ ಗುಡ್ಡ, ಅದರೊಳಗೆ ಶಿವನ ದೇವಸ್ಥಾನ, ಏಷ್ಯಾದಲ್ಲೇ ಎರಡನೇ ಅತಿ ಎತ್ತರದ ಎಂದು ಹೇಳಲಾಗುವ ಶಿವನಮೂರ್ತಿ, ಎದುರು ರಾಜಗೋಪುರ. ಇದರಿಂದ ಮುರ್ಡೇಶ್ವರ ಇಂದು ವಿಶ್ವವಿಖ್ಯಾತ ಪ್ರವಾಸಿ ಹಾಗೂ ಧಾರ್ಮಿಕ ತಾಣವಾಗಿದೆ. ಇದರಲ್ಲಿ ಉದ್ಯಮಿ ಆರ್‌.ಎನ್‌.ಶೆಟ್ಟಿ ಅವರ ಕೊಡುಗೆ ಬಹುದೊಡ್ಡದು.

‘ಅವರು ಇದೇ 15ರಂದು 91ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅಂದು ಏನಾದರೂ ಸಮಾಜಮುಖಿಯಾದ ಕೊಡುಗೆ ನೀಡಲು ಚಿಂತಿಸಿದ ಪುತ್ರ ಸುನೀಲ್, ಹಲವಾರು ವರ್ಷಗಳಿಂದ ಪಾಳುಬಿದ್ದಿದ್ದ ಈ ಪುಷ್ಕರಣಿಯ (ಕಲ್ಯಾಣಿ) ನವೀಕರಣ ಕಾರ್ಯ ಕೈಗೊಂಡಿದ್ದಾರೆ. ಈ ಮೂಲಕ ತಂದೆಗೆ ನೀಡಿದ ಉಡುಗೊರೆಯನ್ನು ಸ್ಥಳೀಯರು, ಪ್ರವಾಸಿಗರು ಪ್ರತಿನಿತ್ಯ ಸ್ಮರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ’ ಎಂದು ಮುರ್ಡೇಶ್ವರ ದೇವಸ್ಥಾನದ ಮೊಕ್ತೇಸರ ಶ್ರೀಪಾದ ಕಾಮತ್ ಹೇಳಿದರು.

ಹಂಪೆ ಮಾದರಿ: ಕಳೆದ ವರ್ಷ ಗಣೇಶನ ವಿಸರ್ಜನೆ ಸಂದರ್ಭದಲ್ಲಿ ಇದರಲ್ಲಿ ಇಳಿದಿದ್ದ ಯುವಕನೊಬ್ಬ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದ. ಈ ಹಿಂದೆಯೂ ಇಬ್ಬರು ಯುವಕರು ಇಲ್ಲಿ ಮೃತಪಟ್ಟಿದ್ದಾರೆ. ಇಂತಹ ಕಹಿ ಘಟನೆಗಳು ಮರುಕಳಿಸದಂತೆ ಇದಕ್ಕೊಂದು ನೂತನ ಸ್ಪರ್ಶ ನೀಡಲಾಗುತ್ತಿದೆ.

‘ಕಲ್ಯಾಣಿಯನ್ನು ಹಂಪೆಯಲ್ಲಿರುವ ಕೆರೆಯ ಮಾದರಿಯಲ್ಲಿ ಐತಿಹಾಸಿಕ ಶೈಲಿಯಲ್ಲಿ ನವೀಕರಣಗೊಳಿಸಲಾಗುತ್ತಿದೆ’ ಎಂದು ಸುನೀಲ್ ಶೆಟ್ಟಿ ಹೇಳುತ್ತಾರೆ.

‘ಬೆಲೆ ಬಾಳುವ ಸಂಗ ಮರ್ಮರ್ ಕಲ್ಲುಗಳನ್ನು ಬಳಸಲಾಗುತ್ತಿದೆ. ಸುತ್ತಲೂ ದೀಪಾಲಂಕಾರ ಮಾಡಲಾಗುತ್ತಿದೆ. ಈ ಹಿಂದೆ ಇದ್ದ ಮಂಟಪದ ಬಳಿ ನಂದಿಯ ಮುಖದಿಂದ ಜಲಧಾರೆ ಧುಮುಕುವಂತೆ ಮಾಡಲಾಗುತ್ತಿದೆ’ ಎಂದು ಅವರು ವಿವರಿಸಿದರು.

ಮುರ್ಡೇಶ್ವರ ಪಟ್ಟಣದ ಮಧ್ಯೆ ಇರುವ ವಿಶಾಲವಾದ ಈ ಪುಷ್ಕರಣಿಗೆ ಬರುವ ಪ್ರವಾಸಿಗರಿಗೆ ತೀರ್ಥ ಪ್ರೋಕ್ಷಣೆಗೂ ಅನುಕೂಲ ಮಾಡಿಕೊಡುವ ಉದ್ದೇಶವಿದೆ. ಈಗಾಗಲೇ ನವೀಕರಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಸುನೀಲ್ ಅವರೇ ಮುತುವರ್ಜಿ ವಹಿಸಿ ಕೆಲಸ ಮಾಡಿಸುತ್ತಿದ್ದಾರೆ ಎಂದು ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !