ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಡಿಯುವ ನೀರಿಗೆ ₹ 119 ಕೋಟಿ: ಸಂಪುಟ ಸಭೆ ಅನುಮೋದನೆ’

Last Updated 9 ಫೆಬ್ರುವರಿ 2022, 15:13 IST
ಅಕ್ಷರ ಗಾತ್ರ

ಕಾರವಾರ: ‘ಕಾರವಾರ – ಅಂಕೋಲಾ ವಿಧಾನಸಭಾ ಕ್ಷೇತ್ರದ ಕುಡಿಯುವ ನೀರಿನ ಮೂರು ಯೋಜನೆಗಳಿಗೆ ರಾಜ್ಯ ಸರ್ಕಾರ ₹ 119 ಕೋಟಿ ನೀಡಲು ಸಮ್ಮತಿಸಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ’ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

‘ಕಾರವಾರ ತಾಲ್ಲೂಕಿನ ಗೋಟೆಗಾಳಿ, ಕೆರವಡಿ ಹಾಗೂ ಅಂಕೋಲಾ ತಾಲ್ಲೂಕಿನ ವಾಸರಕುದ್ರಿಗಿಯಲ್ಲಿ ಜಲ ಜೀವನ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಾಮಗಾರಿ ನಡೆಯಲಿದೆ. ಈ ಯೋಜನೆಯಿಂದ ಕಾಳಿ ನದಿಯ ಎರಡೂ ದಂಡೆಗಳಲ್ಲಿರುವ ಹಾಗೂ ಗಂಗಾವಳಿ ನದಿ ತೀರದ ಊರುಗಳ ಕುಡಿಯುವ ನೀರಿನ ಸಮ್ಯಸೆ ಪರಿಹಾರವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಗೋಟೆಗಾಳಿ ಮತ್ತು ಇತರ 22 ಗ್ರಾಮಗಳ 43 ಜನವಸತಿ ಪ್ರದೇಶಗಳಿಗೆ, ಕೆರವಡಿ ಮತ್ತು ಇತರ 17 ಗ್ರಾಮಗಳ 42 ಜನವಸತಿ ಪ್ರದೇಶಗಳಿಗೆ ಜಲ ಜೀವನ ಮಿಷನ್ ಅಡಿಯಲ್ಲಿ ಹಾಗೂ ಸಂಯೋಜಿತ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ಒಟ್ಟು ₹ 88.50 ಕೋಟಿ ನೀಡಲು ಸಂಪುಟ ಸಭೆ ಸಮ್ಮತಿಸಿದೆ. ವಾಸರಕುದ್ರಿಗಿ ಮತ್ತು ಇತರ ಐದು ಗ್ರಾಮಗಳ 23 ಜನವಸತಿ ಪ್ರದೇಶಗಳಿಗೆ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗೆ ₹ 30.27 ಕೋಟಿ ಬಿಡುಗಡೆಯಾಗಲಿದೆ’ ಎಂದು ಹೇಳಿದ್ದಾರೆ.

ಗೋಟೆಗಾಳಿ ಹಾಗೂ ಇತರ ಒಂಬತ್ತು ಗ್ರಾಮಗಳು ಯೋಜನೆಯ ವ್ಯಾಪ್ತಿಯಲ್ಲಿವೆ. ಈಗಾಗಲೇ ಅಸ್ತಿತ್ವದಲ್ಲಿರುವ ಪೈಪ್‌ಲೈನ್, ಪಂಪಿಂಗ್ ಯಂತ್ರೋಪಕರಣಗಳು, ಘಟಕಗಳ ದುರಸ್ತಿ, ಗುಣಮಟ್ಟ ಹಾಗೂ ಸಾಮರ್ಥ್ಯ ಹೆಚ್ಚಿಸಲಾಗುವುದು. ಈ ಹಿಂದಿನ ಯೋಜನೆಯು ಪ್ರತಿ ವ್ಯಕ್ತಿಗೆ ಪ್ರತಿದಿನ 40 ಲೀಟರ್ ನೀರು ನೀಡುವ ಸಾಮರ್ಥ್ಯ ಹೊಂದಿತ್ತು. ಆದರೆ, ಜಲಜೀವನ್ ಮಿಷನ್ ಯೋಜನೆಯಲ್ಲಿ ಕನಿಷ್ಠ 55 ಲೀಟರ್ ನೀಡುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

ಗೋಟೆಗಾಳಿ ಹಾಗೂ ಕೆರವಡಿ ಯೋಜನೆಯಲ್ಲಿ ವಿರ್ಜೆಯಿಂದ ಮಾಜಾಳಿ ಹಾಗೂ ವಿರ್ಜೆಯಿಂದ ಮಖೇರಿ ತನಕ ನೀರು ಸರಬರಾಜು ಆಗಲಿದೆ. ಕಾಳಿ ನದಿಯ ಎರಡೂ ಕಡೆಗಳಲ್ಲಿ ಕುಡಿಯುವ ನೀರು ಲಭ್ಯವಾಗಲಿದೆ.

‘ವಾಸರಕುದ್ರಿಗಿ ಯೋಜನೆಯಡಿ ಗಂಗಾವಳಿ ನದಿಯಿಂದ ಉಳಗದ್ದೆ ಕ್ರಾಸ್ ಬಳಿ ನೀರನ್ನು ಎತ್ತಿ ಪೂರೈಕೆ ಮಾಡಲಾಗುತ್ತದೆ. ವಾಸರಕುದ್ರಿಗಿ, ಬೆಳಸೆ, ಶೆಟಗೇರಿ, ವಂದಿಗೆ, ಹೊನ್ನೆಬೈಲ್, ಬೆಳಂಬಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಪ್ರಯೋಜನವಾಗಲಿದೆ. ಇಲ್ಲಿನ ಹಳೆಯ ಪೈಪ್‌ಗಳನ್ನು ಬದಲಿಸಿ, ಗುಣಮಟ್ಟ ಹಾಗೂ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT