ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕುಸಿತ ಪ್ರದೇಶಕ್ಕೆ ಸಚಿವ ಸಿ.ಸಿ.ಪಾಟೀಲ್ ಭೇಟಿ: ಅಹವಾಲು ಸ್ವೀಕಾರ

Last Updated 30 ಆಗಸ್ಟ್ 2021, 9:17 IST
ಅಕ್ಷರ ಗಾತ್ರ

ಯಲ್ಲಾಪುರ: ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳಕೇಬೈಲ್‌ನಲ್ಲಿ ಭೂ ಕುಸಿತದಿಂದಾಗಿ ರಾಜ್ಯ ಹೆದ್ದಾರಿ ಕುಸಿದ ಹಾಗೂ ಕಳಚೆಯಲ್ಲಿ ಭೂ ಕುಸಿತದಿಂದಾಗಿ ತೋಟ, ಮನೆ ಕಳೆದುಕೊಂಡ ಪ್ರದೇಶಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಸೋಮವಾರ ಭೇಟಿ ನೋಡಿ ಪರಿಶೀಲನೆ ನಡೆಸಿದರು. ಕಳಚೆಯಲ್ಲಿ ಸಭೆ ನಡೆಸಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.

ತಳಕೇಬೈಲಿನಲ್ಲಿ ಕುಸಿದು ಹೋದ ರಾಜ್ಯ ಹೆದ್ದಾರಿ ವೀಕ್ಷಿಸಿ, ಮಲವಳ್ಳಿ ಭಾಗದ ಜನರ‌ ಮನವಿ ಸ್ವೀಕರಿಸಿದರು.

'ಹೆದ್ದಾರಿ ಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿದು ಹೋಗಿದ್ದು, ತಾತ್ಕಾಲಿಕ ರಸ್ತೆಯಲ್ಲಿ ಬಸ್, ಭಾರಿ ವಾಹನ ಸಂಚರಿಸಲು ಅಸಾಧ್ಯವಾಗಿದೆ. ಭವಿಷ್ಯದಲ್ಲಿ ಇಲ್ಲಿ ರಸ್ತೆ ನಿರ್ಮಿಸಿದರೂ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಹೀಗಾಗಿ ಮಲವಳ್ಳಿಯಿಂದ ಪದ್ಮಾಪುರ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯನ್ನು ಸರ್ವ ಋತು ರಸ್ತೆಯನ್ನಾಗಿ ಪರಿವರ್ತಿಸಬೇಕು. ಈ ರಸ್ತೆ ಅಂಕೋಲಾ ಮತ್ತು ಯಲ್ಲಾಪುರದ ಲಿಂಕ್ ರಸ್ತೆಯಾಗಿ ಮಾರ್ಪಡಿಸಿ, ತುರ್ತಾಗಿ ಹುಟ್ಟರ್ತೆ, ಬಾಸಲದ ಬಳಿ ರಸ್ತೆಯ ಪರ್ಯಾಯ ರಸ್ತೆಯನ್ನು ಶೀಘ್ರವಾಗಿ ನಿರ್ಮಿಸಿ ಬಸ್ ಸಂಚಾರಕ್ಕೆ ಅನುಕೂಲ ಮಾಡಿಕೊಡಿ' ಎಂದು ಮನವಿ ಸಲ್ಲಿಸಿದರು.

ಇದಕ್ಕೆ ಪೂರಕವಾಗಿ ಸಚಿವ ಶಿವರಾಮ ಹೆಬ್ಬಾರ ಕೂಡ ಮನವರಿಕೆ ಮಾಡಿದರು. ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಪಾಟೀಲ್, 'ಸಚಿವ ಹೆಬ್ಬಾರ್ ಈಗಾಗಲೇ ಪರಿಸ್ಥಿತಿಯ ಮನವರಿಕೆ ಮಾಡಿಕೊಟ್ಟಿದ್ದಾರೆ. ಮುಖ್ಯಮಂತ್ರಿ ಕೂಡ ಈ ಭಾಗದ ಅಭಿವೃದ್ಧಿಯ ಕುರಿತು ಗಮನ ಹರಿಸಿದ್ದಾರೆ. ನೀವು ಹೇಳಿದ ಅಭಿವೃದ್ಧಿ ಕಾರ್ಯವನ್ನು ಮಾಡುತ್ತೇವೆ' ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಲವಳ್ಳಿ ಗ್ರಾಮ‌ಪಂಚಾಯ್ತಿ ಉಪಾಧ್ಯಕ್ಷ ಸುಬ್ಬಣ್ಣ ಕುಂಟೆಗಾಳಿ, ಸದಸ್ಯ ದೀಪಕ್ ಭಟ್ಟ, ಪ್ರಮುಖರಾದ ಸುಬ್ಬಣ್ಣ ಬೋಳ್ಮನೆ, ಸದಾನಂದ ಭಟ್ಟ, ಮಹಾಬಲೇಶ್ವರ ಹಲಗುಮನೆ, ನಾರಾಯಣ ಭಟ್ಟ, ನರಸಿಂಹ ಭಟ್ಟ, ಸೀತಾರಾಮ ಭಟ್ಟ ಇದ್ದರು.

ನಂತರ ಕಳಚೆ ಭೂಕುಸಿತ ಪ್ರದೇಶಕ್ಕೆ ತೆರಳಿದ ಸಚಿವರು, ಭೂಕುಸಿತ ಪ್ರದೇಶಗಳನ್ನು ಪರಿಶೀಲಿಸಿ ಕಳಚೆಯ ಅನಂತ ಗಾಂವ್ಕರ್ ಮಾನಿಗದ್ದೆ ಇವರ ಮನೆಯಲ್ಲಿ ಗ್ರಾಮಸ್ಥರ ಸಭೆ ನಡೆಸಿ, ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.

'ಪುನರ್ವಸತಿ ಕಲ್ಪಿಸುವುದಾದರೆ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಿ. ಹಾಗಿದ್ದರೆ ಮಾತ್ರ ನಾವು ಈ ಸ್ಥಳ ಬಿಟ್ಟು ಬರುತ್ತೇವೆ. ಇಲ್ಲವಾದರೆ ಇಲ್ಲಿಯೇ ಬದುಕುತ್ತೇವೆ, ಇಲ್ಲಿಯೇ ಸಾಯುತ್ತೇವೆ' ಎಂದು ಗ್ರಾಮಸ್ಥರು ಭಾವುಕರಾಗಿ ಹೇಳಿದರು.

'ಇಲ್ಲಿನ ಎಲ್ಲ ಪರಿಸ್ಥಿತಿಯ ಅರಿವು ಮುಖ್ಯಮಂತ್ರಿಗಳಿಗಿದೆ. ಇಲ್ಲಿನ ಜನರ ಪುನರ್ ವಸತಿ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಯಾವ ರೀತಿ ಮಾಡಬೇಕೆಂಬುದನ್ನು ಸರ್ಕಾರ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತದೆ' ಎಂದು ಸಚಿವರು ತಿಳಿಸಿದರು.

ವಜ್ರಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವೀಣಾ ಗಾಂವ್ಕರ್, ಉಪಾಧ್ಯಕ್ಷೆ ರತ್ನಾ ಬಾಂದೇಕರ್, ಪ್ರಮುಖರಾದ ಉಮೇಶ್ ಭಾಗ್ವತ್, ಗಜಾನನ ಭಟ್ಟ, ಸುಬ್ರಹ್ಮಣ್ಯ ಭಾಗಿನಕಟ್ಟಾ, ವೆಂಕಟ್ರಮಣ ಬೆಳ್ಳಿ, ಶಿರಸಿ ಉಪ ವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT