ತೋಡೂರಿನ ಪಾಲೇಕರ್ ವಾಡಾ: ಒಂದು ವರ್ಷವಾದರೂ ಕಾಮಗಾರಿ ಅಪೂರ್ಣ

ಭಾನುವಾರ, ಏಪ್ರಿಲ್ 21, 2019
26 °C
ಬಂಡಿ ಹಬ್ಬಕ್ಕೂ ಮೊದಲು ಮುಕ್ತಾಯಗೊಳಿಸಲು ಆಗ್ರಹ

ತೋಡೂರಿನ ಪಾಲೇಕರ್ ವಾಡಾ: ಒಂದು ವರ್ಷವಾದರೂ ಕಾಮಗಾರಿ ಅಪೂರ್ಣ

Published:
Updated:
Prajavani

ಕಾರವಾರ: ತಾಲ್ಲೂಕಿನ ತೋಡೂರು ಗ್ರಾಮ ಪಂಚಾಯ್ತಿಯ ಪಾಲೇಕರ್ ವಾಡಾದಲ್ಲಿ ರಸ್ತೆಗೆ ಕಾಂಕ್ರೀಟ್ ಹಾಕುವ ಕಾಮಗಾರಿ ಶುರುವಾಗಿ ಒಂದು ವರ್ಷವಾದರೂ ಮುಕ್ತಾಯವಾಗಿಲ್ಲ. ರಸ್ತೆಯ ತುಂಬ ಜಲ್ಲಿಕಲ್ಲು ತುಂಬಿದ್ದು, ಮೇ 7ರಿಂದ ನಡೆಯುವ ಬಂಡಿ ಹಬ್ಬದ ಸಂಭ್ರಮಕ್ಕೆ ‘ಕಲ್ಲು’ ಹಾಕಿದಂತಾಗಲಿದೆ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯ ₹ 25 ಲಕ್ಷ ಅನುದಾನದಲ್ಲಿ 350 ಮೀಟರ್ ಉದ್ದದ ಡಾಂಬರು ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕಾಮಗಾರಿ ಮಂಜೂರಾಗಿತ್ತು. ಎರಡನೇ ಹಂತದಲ್ಲಿ ಮತ್ತೆ 100 ಮೀಟರ್ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿತ್ತು. ಚಂದಾವರದ ಅಮ್ಜದ್ ಅಲಿ ಕೋಟೆಬಾಗಿಲು ಎಂಬುವವರು ಇದರ ಗುತ್ತಿಗೆ ಪಡೆದುಕೊಂಡಿದ್ದಾರೆ. ಆರು ತಿಂಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಒಂದು 14 ತಿಂಗಳಾದರೂ ಆಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

‘ಸಣ್ಣಮ್ಮ ದೇವಿ ದೇವಸ್ಥಾನದಿಂದ ಪಾಲೇಕರ್ ವಾಡಾದವರೆಗೆ ರಸ್ತೆಗೆ ಕಡಿ ಹಾಕಿ ಎರಡು ತಿಂಗಳಾಯಿತು. ಈ ರಸ್ತೆಯ ಮೂಲಕ 100ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕವಿದೆ. ಮೇ 7ರಿಂದ ಗ್ರಾಮದಲ್ಲಿ ಬಂಡಿ ಹಬ್ಬವಿದೆ. ಕಳೆದ ವರ್ಷ ಜೆಸಿಬಿ ತರಿಸಿ ತಾತ್ಕಾಲಿಕವಾಗಿ ಬೇರೆ ಮಾರ್ಗ ಮಾಡಿಸಿ ಹಬ್ಬ ಆಚರಿಸಿದ್ದೆವು. ಈ ವರ್ಷ ಹಬ್ಬಕ್ಕೂ ಮೊದಲು ಕಾಮಗಾರಿ ಪೂರ್ಣಗೊಳ್ಳದಿದ್ದರೆ ಜಿಲ್ಲಾ ಪಂಚಾಯ್ತಿ ಕಚೇರಿ ಮುಂದೆ ಗ್ರಾಮಸ್ಥರೊಂದಿಗೆ ಧರಣಿ ಕೂರುವುದು ಅನಿವಾರ್ಯ’ ಎಂದು ಗ್ರಾಮ ಪಂಚಾಯ್ತಿ ಚಂದ್ರಕಾಂತ್ ಚಿಂಚಣಕರ್ ಎಚ್ಚರಿಕೆ ನೀಡಿದ್ದಾರೆ.

‘ಜಲ್ಲಿ ಕಲ್ಲಿನ ರಸ್ತೆಯ ಮೇಲೆ ಬೈಕ್‌ನಲ್ಲಿ ಹೋದ ಒಂದಿಬ್ಬರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಇಲ್ಲಿ ಸಂಚಾರಕ್ಕೆ ದ್ವಿಚಕ್ರ ವಾಹನಗಳು ಅನಿವಾರ್ಯ. ಕಾಮಗಾರಿ ವಿಳಂಬವೇಕೆ ಎಂದು ಗುತ್ತಿಗೆದಾರರನ್ನು ಕೇಳಿದರೆ ಮರಳಿನ ಸಮಸ್ಯೆಯಿದೆ ಎಂಬ ಸಿದ್ಧ ಉತ್ತರ ಕೊಡುತ್ತಾರೆ. ಆದರೆ, ಬೇರೆಲ್ಲ ಕಾಮಗಾರಿಗಳಿಗೆ ಇಲ್ಲದ ಈ ಸಮಸ್ಯೆ ರಸ್ತೆ ಕಾಮಗಾರಿಗೇ ಏಕಿದೆ’ ಎಂದು ಗ್ರಾಮಸ್ಥರಾದ ಉಮೇಶ ನಾಯ್ಕ, ರಾಮದಾಸ ನಾಯ್ಕ ಪ್ರಶ್ನಿಸುತ್ತಾರೆ.

‘ಈ ರಸ್ತೆಯಲ್ಲಿ ಹೋಗಲು ಸಾಧ್ಯವಿಲ್ಲ ಎಂದು ನಾನು ತ್ರಿಚಕ್ರ ವಾಹನವನ್ನು ಮನೆಯಿಂದ ಹೊರಗೆ ತರುವುದೇ ಬಿಟ್ಟಿದ್ದೇನೆ. ಸರ್ಕಾರ ಸೌಲಭ್ಯ ಕೊಟ್ಟಿದ್ದರೂ ಬಳಸಲು ಅಪೂರ್ಣ ಕಾಮಗಾರಿ ಬಿಡುತ್ತಿಲ್ಲ. ರಸ್ತೆಯು ಶೀಘ್ರವೇ ಬಳಕೆಗೆ ಸಿದ್ಧವಾಗಬೇಕು’ ಎಂಬ ಒತ್ತಾಯ ಗ್ರಾಮದ ಅಂಗವಿಕಲ ಯುವಕ ಮಹೇಶ ನಾಯ್ಕ ಅವರದ್ದಾಗಿದೆ. 

‘15 ದಿನದಲ್ಲಿ ಆರಂಭ’: ಮರಳಿನ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಯಿತು. ಇನ್ನು 15 ದಿನಗಳಲ್ಲಿ ಕೆಲಸ ಪುನಃ ಆರಂಭಿಸಲಾಗುತ್ತದೆ. ಒಂದು ತಿಂಗಳ ಒಳಗಾಗಿ ಪೂರ್ಣಗೊಳ್ಳಲಿದೆ. ಈ ಬಗ್ಗೆ ಗುತ್ತಿಗೆದಾರರಿಗೂ ಸೂಚನೆ ನೀಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜೀವ ನಾಯ್ಕ ತಿಳಿಸಿದರು.

‘15 ದಿನದಲ್ಲಿ ಆರಂಭ’

ಮರಳಿನ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಯಿತು. ಇನ್ನು 15 ದಿನಗಳಲ್ಲಿ ಕೆಲಸ ಪುನಃ ಆರಂಭಿಸಲಾಗುತ್ತದೆ. ಒಂದು ತಿಂಗಳ ಒಳಗಾಗಿ ಪೂರ್ಣಗೊಳ್ಳಲಿದೆ. ಈ ಬಗ್ಗೆ ಗುತ್ತಿಗೆದಾರರಿಗೂ ಸೂಚನೆ ನೀಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜೀವ ನಾಯ್ಕ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !