ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಸಿಸಿಟಿವಿ ಕ್ಯಾಮೆರಾ ಕಾವಲು

ಭಟ್ಕಳದಲ್ಲಿ 30, ಹಳಿಯಾಳದಲ್ಲಿ 28, ಕಾರವಾರದಲ್ಲಿ 23, ಹೊನ್ನಾವರದಲ್ಲಿ 20 ಕಡೆ ಅಳವಡಿಕೆ
Last Updated 20 ಮಾರ್ಚ್ 2019, 14:12 IST
ಅಕ್ಷರ ಗಾತ್ರ

ಕಾರವಾರ:ಲೋಕಸಭಾ ಚುನಾವಣೆಯ ಅಂಗವಾಗಿ ಜಿಲ್ಲೆಯ 12 ಸ್ಥಳೀಯ ಸಂಸ್ಥೆಗಳಲ್ಲಿ 206 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 30 ಚೆಕ್‌ಪೋಸ್ಟ್‌ಗಳ ಪೈಕಿ 20 ಮಂಗಳವಾರ ಮತ್ತು ಉಳಿದ 10 ಬುಧವಾರ ಕಾರ್ಯಾರಂಭ ಮಾಡಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಲವನ್ನೂ ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಗೆ ಸಂಪರ್ಕಿಸಲಾಗಿದೆ. ನಗರದ ಬಹುತೇಕ ಪ್ರದೇಶಗಳನ್ನು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿಗೆ ಒಳಪಡಿಸಲಾಗಿದೆ. ಚೆಕ್‌ಪೋಸ್ಟ್‌ನಲ್ಲಿರುವ ಸಿಬ್ಬಂದಿಗೆ ಗುರುತಿನ ಚೀಟಿ, ಸೂಚನಾ ಫಲಕ, ಕುಡಿಯುವ ನೀರು, ಬ್ಯಾಟರಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ.ಚುನಾವಣೆಯ ಸಂದರ್ಭದಲ್ಲಿ ಪೊಲೀಸರೂ ಸೇರಿಅಂದಾಜು 7,000 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಸಿ–ವಿಜಿಲ್ ಆ್ಯಪ್: ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗವು ‘ಸಿ–ವಿಜಿಲ್’ (cVIGIL) ಆ್ಯಂಡ್ರಾಯ್ಡ್ ಅಪ್ಲಿಕೇಷನ್‌ ಅನ್ನು ಅಭಿವೃದ್ಧಿ ಪಡಿಸಿದೆ. ಅದರಲ್ಲಿ ಸಾರ್ವಜನಿಕರು ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಫೋಟೊ, ವಿಡಿಯೊಗಳನ್ನು ಸಲ್ಲಿಸಬಹುದು. ದೂರು ಸಲ್ಲಿಸಿ 100 ನಿಮಿಷಗಳ ಮೊದಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಫೋಟೊ ತೆಗೆದ ಸಮಯ ಹಾಗೂ ದಿನಾಂಕ ಅದರಲ್ಲಿ ನಮೂದಾಗುವ ಕಾರಣ ಸಾಕ್ಷ್ಯವನ್ನಾಗಿ ಪರಿಗಣಿಸಲಾಗುತ್ತದೆ. ದೂರು ನೀಡುವವರು ತಮ್ಮ ಹೆಸರನ್ನು ಬಹಿರಂಗಪಡಿಸದೇ ಇರುವ ಆಯ್ಕೆಯೂ ಅದರಲ್ಲಿದೆ. ನಿಯಮದ ಉಲ್ಲಂಘನೆಯಾದ ಸ್ಥಳದಿಂದಲೇ ಹಾಗೂ ತಕ್ಷಣವೇ ಕಳುಹಿಸಬೇಕು. ನಂತರ ಕಳುಹಿಸಲು ಸಾಧ್ಯವಿಲ್ಲ. ಅಂಥ ಸಂದರ್ಭಗಳಲ್ಲಿ ನಿಯಂತ್ರಣ ಕೊಠಡಿ‘1950’ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಹೇಳಿದರು.

‘ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ರ‍್ಯಾಲಿ, ಸಭೆಗಳ ಆಯೋಜನೆ, ಹೆಲಿಕಾಪ್ಟರ್‌ ಇಳಿಸಲು ಅನುಮತಿ ನೀಡುವ ಪ್ರಕ್ರಿಯೆ ವಿಳಂಬವಾಗುತ್ತಿದ್ದ ದೂರುಗಳಿದ್ದವು. ಅದಕ್ಕೆ ಈ ವರ್ಷ ಸುವಿಧಾ ಎಂಬ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಆಯೋಜಕರು ತಮ್ಮ ಅರ್ಜಿಯನ್ನು ಅದರಲ್ಲೇ ಭರ್ತಿ ಮಾಡಿ ಕಳುಹಿಸಿದ 24 ಗಂಟೆಗಳಲ್ಲಿಅವುಗಳ ವಿಲೇವಾರಿ ಆಗುತ್ತದೆ. ಇದು ಕಾಗದ ರಹಿತ ಆಡಳಿತವೂ ಆಗಿದೆ’ ಎಂದು ತಿಳಿಸಿದರು.

ಜಾಲತಾಣಗಳ ಮೇಲೆ ನಿಗಾ:ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಫೇಸ್‌ಬುಕ್, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಲಾಗುತ್ತದೆ. ಅವುಗಳಲ್ಲಿಕೊಡುವ ಜಾಹೀರಾತನ್ನು ಚುನಾವಣಾ ವೆಚ್ಚಕ್ಕೆ ಸೇರಿಸಲಾಗುತ್ತದೆ. ವಾಟ್ಸ್ಆ್ಯಪ್ ಖಾಸಗಿ ವೇದಿಕೆಯಾಗಿದೆ. ಆದರೆ, ಅಲ್ಲಿ ಅವಹೇಳನಕಾರಿ ಸಂದೇಶಗಳು, ನಿಯಮಗಳ ಉಲ್ಲಂಘನೆಯಾಗುವಂಥ ಪೋಸ್ಟ್‌ಗಳ ಬಗ್ಗೆ ದೂರು ಬಂದರೆ ಗಮನ ಹರಿಸಲಾಗುವುದು ಎಂದು ಡಾ.ಹರೀಶಕುಮಾರ್ ಹೇಳಿದರು.

ಚುನಾವಣಾ ವೆಚ್ಚಕ್ಕೆ ಸಂಬಂಧಿಸಿ ದೀನದಯಾಳ್ ಮಂಗಲ್ ಮತ್ತು ಆರ್.ವಿ.ಅರುಣ್ ಪ್ರಸಾದ್ ಎಂಬುವವರು ವೀಕ್ಷಕರಾಗಿದ್ದಾರೆ ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸಿದ್ಧಪಡಿಸಲಾದ ಉತ್ತರ ಕನ್ನಡ ಲೋಕಸಭಾ ಚುನಾವಣೆಯ ಹಿನ್ನೋಟ ಕಿರುಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ಪ್ರೊಬೆಷನರಿ ಐಎಎಸ್ ಅಧಿಕಾರಿ ದಿಲೀಶ್ ಸಸಿ, ನಗರಸಭೆ ಆಯುಕ್ತ ಯೋಗೀಶ್ವರ್, ವಾರ್ತಾಧಿಕಾರಿ ಹಿಮಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT