ಶನಿವಾರ, ಡಿಸೆಂಬರ್ 14, 2019
24 °C
ಅಕ್ರಮ ಚಟುವಟಿಕೆಗಳು ನಡೆಯದಂತೆ ನಿಗಾ ವಹಿಸಲು ಕ್ರಮ

‘ಲೇಡೀಸ್ ಬೀಚ್‌’ಗೆ ಕ್ಯಾಮೆರಾ: ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಇಲ್ಲಿನ ಲೇಡೀಸ್ ಬೀಚ್‌ನಲ್ಲಿ ವೈರ್‌ಲೆಸ್ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಅಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ನಿಗಾ ವಹಿಸಲು ಇದರಿಂದ ಅನುಕೂಲವಾಗಲಿದೆ’ ಎಂದು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ನಾಗರಾಜು ತಿಳಿಸಿದ್ದಾರೆ. 

ಕಪ್ಪೆ ಬೊಂಡಾಸ್ ಮೀನುಗಾರಿಕೆಗೆ ತೆರಳುವ ದೋಣಿಗಳ ಮಾಲೀಕರೊಂದಿಗೆ ಸಭೆ ನಡೆಸಿದ್ದ ಅವರು, ಕಡಲತೀರದ ಮರಳನ್ನು ತೆಗೆಯುವುದು, ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವಂತಹ ಕೃತ್ಯಗಳನ್ನು ಮಾಡಬಾರದು. ಸಮುದ್ರಕ್ಕೆ ಹಾಗೂ ಕಡಲದಂಡೆಗೆ ಹಾನಿಯಾಗುವಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಯಾರನ್ನೂ ಬೆಂಬಲಿಸಬಾರದು ಎಂದು ಸೂಚಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಇಂತಹ ಪ್ರಕರಣಗಳು ಪುನರಾವರ್ತನೆಯಾದರೆ ಕಪ್ಪೆ ಬೊಂಡಾಸ್ ಮೀನುಗಾರಿಕೆಯನ್ನು ಕಾಯಂ ಆಗಿ ನಿಷೇಧಿಸುವಂತೆ ಸರ್ಕಾರಕ್ಕೆ ವರದಿ ಕೊಡಬೇಕಾಗುತ್ತದೆ. ಆ ರೀತಿಯಾದರೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವರೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದೇನೆ’ ಎಂದು ಹೇಳಿದರು.

ಇದನ್ನೂ ಓದಿ: ಕಾರವಾರ: ‘ಕಪ್ಪೆ ಬೊಂಡಾಸ್‌’ ಬೇಟೆಗೆ ಕರಗಿತು ಲೇಡೀಸ್ ಬೀಚ್!

ಕಡಲತೀರ ಸ್ವಚ್ಛತೆ:  ಲೇಡೀಸ್ ಬೀಚ್ ಕಡಲತೀರವನ್ನು ಸ್ಥಳೀಯ ಮೀನುಗಾರರು ಬುಧವಾರ ಸ್ವಚ್ಛಗೊಳಿಸಿದರು. ಕಪ್ಪೆ ಬೊಂಡಾಸ್ ಮೀನುಗಳನ್ನು ಅವೈಜ್ಞಾನಿಕವಾಗಿ ಹಿಡಿಯಲು ಹೊರ ರಾಜ್ಯಗಳ ಮೀನುಗಾರರು ಇಲ್ಲಿ ಎಸೆದಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಕ್ಕಿ ತೆಗೆದರು. ಕಡಲತೀರಕ್ಕೆ ಭೇಟಿ ನೀಡಿದ ಹತ್ತಾರು ಮಂದಿ, ಅಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಗೋಣಿಗಳು, ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು.

ಕಡಲತೀರದಿಂದ ಲೋಡ್‌ಗಟ್ಟಲೆ ಮರಳು ತೆಗೆದಿರುವ ಮತ್ತು ಮಾಲಿನ್ಯ ಮಾಡಿರುವ ಬಗ್ಗೆ ‘ಪ್ರಜಾವಾಣಿ’ಯ ನ.12ರ ಸಂಚಿಕೆಯಲ್ಲಿ, ‘ಕಪ್ಪೆ ಬೊಂಡಾಸ್‌ಗೆ ಕರಗಿದ ಲೇಡೀಸ್ ಬೀಚ್’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು