ಶುಕ್ರವಾರ, ಮಾರ್ಚ್ 5, 2021
17 °C

ದೇವಾಲಯಗಳಲ್ಲಿ ಕ್ಷಾತೃತ್ವ ಪ್ರತಿಪಾದನೆಯಾಗಲಿ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ದೇವಾಲಯಗಳಲ್ಲಿ ಭಜನೆ, ಮಂತ್ರ ಮಾತ್ರ ಪಠಣವಾಗುವ ಬದಲು ಶಕ್ತಿಯ ಆರಾಧನೆ ಹಾಗೂ ಕ್ಷಾತೃತ್ವದ ಪ್ರತಿಪಾದನೆ ಆಗಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.

ತಾಲ್ಲೂಕಿನ ಒಕ್ಕಲಕೊಪ್ಪದಲ್ಲಿ ಸೋಮವಾರ ನಡೆದ ಜಗದೀಶ್ವರ ಹಾಗೂ ನಾಗಪ್ರತಿಷ್ಠೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಒಳ್ಳೆಯ ಸಂಪ್ರದಾಯ ಬೆಳೆಸಿದ್ದು ಇಲ್ಲಿನ ಧರ್ಮವಾಗಿದೆ. ಜೀವನದ ಆದರ್ಶ ನಡವಳಿಕೆಗಳ ಒಟ್ಟು ಮೊತ್ತ ಧರ್ಮವಾಗಿದ್ದು, ದೇವಾಲಯಗಳಿಂದ ಈ ನಡವಳಿಕೆ ವಿಸ್ತರಿಸಿದೆ. ಪ್ರತಿಯೊಂದು ಕಡೆ ದೇವಾಲಯಗಳು ಹೆಚ್ಚಬೇಕು. ಆ ಮೂಲಕ ಆದರ್ಶ ನಡವಳಿಕೆ ಬೆಳೆಯಬೇಕು ಎಂದರು.

ಧರ್ಮವು ಎಂದಿಗೂ ಷಂಡತನ ಬೋಧಿಸುವುದಿಲ್ಲ. ಅದೇ ರೀತಿ ದೇವಾಲಯಗಳು ಇರುವುದು ಕೇವಲ ಭಜನೆಗಲ್ಲ. ಬ್ರಹ್ಮತ್ವ ಹಾಗೂ ಕ್ಷಾತೃತ್ವ ಇವೆರಡೂ ಅಂಶಗಳು ದೇವಾಲಯದಲ್ಲಿ ಮೈದಳೆಯಬೇಕು. ದೇವಾರಾಧನೆಯ ಜೊತೆಗೆ ಶಕ್ತಿಯ ಉಪಾಸನೆ ಕೂಡ ನಡೆಯಬೇಕು. ದೇವಾಲಯಗಳು ನಿತ್ಯ ನಿರಂತರವಾಗಬೇಕು. ಜಾತಿ ವ್ಯವಸ್ಥೆ ಸಮಾಜಕ್ಕೆ ಅಂಟಿದ ಅನಿಷ್ಟವಾಗಿದೆ. ಅರ್ಹತೆ ಮತ್ತು ಯೋಗ್ಯತೆ ನೋಡಿರುವ ಹಿಂದೂ ಧರ್ಮವು ಜಾತಿಗೆ ಎಂದಿಗೂ ಮಣೆ ಹಾಕಿಲ್ಲ. ಆದರೆ ಜಾತಿಯ ಕನ್ನಡಕ ಹಾಕಿಕೊಂಡ ಕೆಲವರು ಮಾತ್ರ ಶ್ರೀರಾಮನ, ಶ್ರೀಕೃಷ್ಣನ ಜಾತಿ ಯಾವುದೆಂದು ಕೇಳುವ ಮೂರ್ಖತನ ಪ್ರದರ್ಶಿಸುತ್ತಾರೆ. ಒಳ್ಳೆಯತನದ ಸಾಕಾರ ರೂಪ ಶಿವನಾಗಿದ್ದಾನೆ. ಮನಸ್ಸು ಅಧ್ಯಾತ್ಮದತ್ತ ಸಾಗಿದಾಗ ಮಾತ್ರ ಶಿವನ ಸಾಕ್ಷಾತ್ಕಾರವಾಗುತ್ತದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಘಟಕದ ರಾಜ್ಯ ಹಿಂದುಳಿದ ವರ್ಗ ಮೋರ್ಚಾ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಮಾತನಾಡಿ, ‘ಧರ್ಮದ ಆಧಾರದಲ್ಲಿ ನೆಲೆನಿಂತ ದೇಶ ಭಾರತ. ಇದಕ್ಕೆ ಪ್ರಮುಖ ಕಾರಣ ದೇವಾಲಯಗಳು. ಶಿಥಿಲಾವಸ್ಥೆಯಲ್ಲಿರುವ ದೇವಾಲಯಗಳ ಪುನರುಜ್ಜೀವನದ ಮೂಲಕ ಧರ್ಮದ ಪುನರುತ್ಥಾನ ಆಗಲಿದೆ’ ಎಂದರು. ರಾಷ್ಟ್ರೀಯ ಕಬ್ಬಡ್ಡಿ ಆಟಗಾರ ರಿಷಾಂಕ ದೇವಾಡಿಗ, ಬಾರ್ಕೂರ್ ಏಕನಾಥೇಶ್ವರ ದೇವಾಲಯದ ಧರ್ಮದರ್ಶಿ ನರಸಿಂಹ ಪೂನಾ, ಊರ ಪ್ರಮುಖ ಕೆರಿಯಾ ಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯೆ ಪ್ರಭಾವತಿ ಗೌಡ, ಕರೆಒಕ್ಕಲಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ ಗೌಡ, ಪ್ರಮುಖ ಕೃಷ್ಣ ಎಸಳೆ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಮಹಾಲಕ್ಷ್ಮಿ ಗೌಡ ಇದ್ದರು. ಸ್ವಾಗತ ಸಮಿತಿ ಸದಸ್ಯ ಬಸವರಾಜ ಉಪ್ಪಿನ್ ಸ್ವಾಗತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.