ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳದ ಮುಟ್ಟಳ್ಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ: ಪರಿಹಾರ ವಿತರಣೆ

ಅಪಾಯದಲ್ಲಿರುವ ಕುಟುಂಬ ಸ್ಥಳಾಂತರಕ್ಕೆ ಆದೇಶ
Last Updated 3 ಆಗಸ್ಟ್ 2022, 15:44 IST
ಅಕ್ಷರ ಗಾತ್ರ

ಮುಟ್ಟಳ್ಳಿ (ಕಾರವಾರ): 'ಭೂಕುಸಿತವಾದ ಪ್ರದೇಶಗಳಲ್ಲಿ ಜಿಯಾಲಾಜಿಕಲ್ ಸರ್ವೆ ಮಾಡಿಸಲಾಗುತ್ತದೆ. ಭೂಕುಸಿತದಿಂದ ಅಪಾಯದಲ್ಲಿರುವ ಕುಟುಂಬದವರ ಸ್ಥಳಾಂತರಕ್ಕೂ ಆದೇಶಿಸಲಾಗಿದೆ. ಭಟ್ಕಳದಲ್ಲಿ ಅತಿವೃಷ್ಟಿಯಿಂದ ₹ 30 ಕೋಟಿಯಿಂದ ₹ 40 ಕೋಟಿ ಹಾನಿಯಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ಅಂದಾಜಿಸಲಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ತಿಳಿಸಿದರು.

ಭಟ್ಕಳ ತಾಲ್ಲೂಕಿನ ಮುಟ್ಟಳ್ಳಿ ಗ್ರಾಮದಲ್ಲಿ ಭೂಕುಸಿತವಾಗಿ ನಾಲ್ವರು ಮೃತಪಟ್ಟ ಪ್ರದೇಶಕ್ಕೆ ಬುಧವಾರ ಸಂಜೆ ಭೇಟಿ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇದೇ ವೇಳೆ, ಮೃತರ ಸಂಬಂಧಿಕರಿಗೆ ಒಟ್ಟು ₹ 5 ಲಕ್ಷ ಪರಿಹಾರ ಹಾಗೂ ಆಹಾರ ವಸ್ತುಗಳ ಕಿಟ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

'ಮುಟ್ಟಳ್ಳಿಯಲ್ಲಿ ಲ್ಯಾಟರೈಟ್ ಮಣ್ಣಿನ ಮೇಲೆ ನಿರಂತರವಾಗಿ ಮಳೆ ಬಿದ್ದು ಸಡಿಲವಾಗಿದೆ. ಮೇಘಸ್ಫೋಟವಾಗಿ ಒಂದೇ ರಾತ್ರಿಯೊಳಗೆ 53 ಸೆಂ.ಮೀ ಮಳೆ ಬಿದ್ದ ಕಾರಣ ಗುಡ್ಡ ಕುಸಿದು ದುರಂತ ನಡೆದಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ಅಂದಾಜು ಮಾಡಲಾಗಿದೆ' ಎಂದರು.

'19 ಜಾನುವಾರು ಮೃತಪಟ್ಟಿವೆ. 9 ಮನೆಗಳಿಗೆ ಸಂಪೂರ್ಣವಾಗಿ ಹಾನಿಯಾಗಿದೆ. 50 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 2175 ಮನೆಗಳಿಗೆ ನೀರು ನುಗ್ಗಿದೆ. ಸುಮಾರು 2 ಸಾವಿರ ವಾಣಿಜ್ಯ ಮಳಿಗೆಗಳು ಜಲಾವೃತವಾಗಿವೆ. ಬೆಳೆ ಹಾನಿ, ಮೀನುಗಾರಿಕಾ ದೋಣಿಗಳಿಗೆ, ಶಾಲಾ ಕಟ್ಟಡಗಳೂ ಸೇರಿದಂತೆ ಮೂಲ ಸೌಕರ್ಯಗಳಿಗೂ ಭಾರಿ ಹಾನಿಯಾಗಿದೆ' ಎಂದು ಹೇಳಿದರು.

ವರದಿ ಸಲ್ಲಿಕೆಗೆ ಆದೇಶ:
ಮಳೆಯಿಂದ ಹಾನಿಯಾಗಿರುವ ಪ್ರದೇಶಗಳ ಪ್ರಾಥಮಿಕ ವರದಿಯನ್ನು ಆ.4ರಂದೇ ನೀಡಲು ಜಿಲ್ಲಾಧಿಕಾರಿಗೆ ಆದೇಶಿಸಲಾಗಿದೆ' ಎಂದು ಮುಖ್ಯಮಂತ್ರಿ ತಿಳಿಸಿದರು.

'ಜಿಲ್ಲಾಧಿಕಾರಿ ಖಾತೆಯಲ್ಲಿ ₹ 38 ಕೋಟಿ ಈಗಾಗಲೇ ಇದೆ. ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ಪರಿಹಾರ ನೀಡಲು ಸಮಸ್ಯೆಯಿಲ್ಲ. ಅಂಗಡಿಗಳಿಗೆ ಆಗಿರುವ ಹಾನಿಯ ಬಗ್ಗೆ ಆ.4ರಂದೇ ವರದಿ ಕಳುಹಿಸಿದರೆ ಪರಿಹಾರ ಬಿಡುಗಡೆ ಮಾಡಲಾಗುವುದು' ಎಂದು ತಿಳಿಸಿದರು.

ಮೀನುಗಾರಿಕಾ ದೋಣಿಗಳಿಗೆ ಆಗಿರುವ ಹಾನಿಯ ಬಗ್ಗೆ ವಿವರವಾದ ವರದಿ ಸಲ್ಲಿಸಿದರೆ, ವಿಶೇಷ ಅನುದಾನ ನೀಡಲಾಗುವುದು. ಬಂದರಿನಲ್ಲಿ ಹೂಳು ತುಂಬಿದ್ದರೆ ಸರಿಪಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

'8-10 ದಿನಗಳಲ್ಲಿ ಭೇಟಿ':
ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆ ಸಂಬಂಧ‌ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 'ವೈದ್ಯಕೀಯ ಮೂಲಸೌಕರ್ಯಕ್ಕೆ ಮತ್ತಷ್ಟು ಆದ್ಯತೆ ನೀಡಲಾಗುತ್ತದೆ. ಜಿಲ್ಲೆಗೆ ಆರೋಗ್ಯವ ಸೇವೆ ನೀಡಲು, ಒಂದು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆಯ ಕುರಿತು ಪರಿಶೀಲಿಸಲು 8-10 ದಿನಗಳಲ್ಲಿ ಆಗಮಿಸುತ್ತೇನೆ. ಬಳಿಕ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗುವುದು' ಎಂದರು.

'ಆ ಸಂದರ್ಭದಲ್ಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಸಾಧ್ಯತಾ ವರದಿಯನ್ನು ತರಿಸಿಕೊಂಡು, ಕೂಡಲೇ ತೀರ್ಮಾನ ಮಾಡಲಾಗುತ್ತದೆ' ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿ ಜೊತೆ ಕಂದಾಯ ಸಚಿವ ಆರ್.ಅಶೋಕ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಶಾಸಕರಾದ ಸುನೀಲ ನಾಯ್ಕ, ರೂಪಾಲಿ ನಾಯ್ಕ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ ಸಿ.ಇ.ಒ ಪ್ರಿಯಾಂಗಾ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT