ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ: ಸ್ಥಳೀಯ ಅಧಿಕಾರಿಗಳೂ ಹೊಣೆ

ಪ್ರಕರಣ ನಡೆದರೆ ಅಧಿಕಾರಿಗಳ ಕರ್ತವ್ಯಲೋಪವೆಂದು ಪರಿಗಣನೆ: ಜಿಲ್ಲಾಧಿಕಾರಿ
Last Updated 26 ಜೂನ್ 2019, 18:02 IST
ಅಕ್ಷರ ಗಾತ್ರ

ಕಾರವಾರ: ಬಾಲ್ಯ ವಿವಾಹವನ್ನು ತಡೆಗಟ್ಟಲೇಬೇಕು. ಒಂದುವೇಳೆ ವಿಫಲವಾದರೆ ಸ್ಥಳೀಯ ಸಮಿತಿಯ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.

ಬಾಲ್ಯವಿವಾಹ ತಡೆ ಕಾಯ್ದೆ, ಕೌಟುಂಬಿಕ ಹಿಂಸೆ, ಮಹಿಳೆಯರ ಸಂರಕ್ಷಣಾ ಅಧಿನಿಯಮ, ಲಿಂಗತ್ವ ಅಲ್ಪಸಂಖ್ಯಾತರ ಜೀವನ ಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸೇರಿದಂತೆ ವಿವಿಧ 14 ಸಮಿತಿಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಸ್ಥಳೀಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಆದರೂ ಪ್ರಕರಣಗಳು ನಡೆದರೆ ಸ್ಥಳೀಯ ಹಂತದ ಅಧಿಕಾರಿಗಳ ಕರ್ತವ್ಯಲೋಪ ಎಂದು ಪರಿಗಣಿಸಲಾಗುವುದು ಎಂದರು.

ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಶಿಶು ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಶಾಲಾ ಶಿಕ್ಷಕರನ್ನೊಳಗೊಂಡು ಸ್ಥಳೀಯ ಹಂತದಲ್ಲಿ ಬಾಲ್ಯ ವಿವಾಹ ತಡೆ ಸಮಿತಿ ರಚಿಸಲಾಗಿದೆ. ಯಾವುದೇ ವಿವಾಹ ನಡೆಯುವುದಾದರೆ ಕನಿಷ್ಠ ಮಾಹಿತಿ ಇವರಿಗೆ ಇರುತ್ತದೆ. ಇಂತಹ ಮದುವೆಗಳಿಗೆ ವಾರಗಟ್ಟಲೆ ಕಾಲಾವಕಾಶ ಇರುತ್ತದೆ. ಮಾಹಿತಿ ತಿಳಿದ ತಕ್ಷಣವೇ ಪ್ರಾಥಮಿಕ ಹಂತದಲ್ಲಿಯೇ ಮದುವೆ ಪ್ರಕ್ರಿಯೆ ನಿಲ್ಲಿಸಬೇಕುಎಂದು ಸೂಚಿಸಿದರು.

ಶಾಲೆಗಳಲ್ಲಿನಿರ್ದಿಷ್ಟವಾಗಿ ಒಬ್ಬಳು ಬಾಲಕಿ ಗೈರಾಗುತ್ತಿರುವುದು ಕಂಡುಬಂದರೆ ಮುಖ್ಯ ಶಿಕ್ಷಕರು ಈ ಬಗ್ಗೆ ಎಚ್ಚೆತ್ತುಕೊಂಡು ಗಮನ ಹರಿಸಬೇಕು ಎಂದೂ ಅವರು ತಿಳಿಸಿದರು.

ಪ್ರತ್ಯೇಕ ಅಧಿಕಾರಿ ನೇಮಕ: ಮಹಿಳಾ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮನ್ವಯ ಮಾಡಲು ಒಬ್ಬ ಪ್ರತ್ಯೇಕ ಅಧಿಕಾರಿಯನ್ನು ನೇಮಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಯಾವುದೇ ಮಹಿಳಾ ದೌರ್ಜನ್ಯಗಳು ನಡೆದು ಗಾಯಾಳು ಆಸ್ಪತ್ರೆಗೆ ಬಂದಾಗ ಅವರಿಗೆ ನಿಯಮಾನುಸಾರ ಚಿಕಿತ್ಸೆ ಹಾಗೂ ಸಂರಕ್ಷಣೆ ಅಗತ್ಯವಿರುತ್ತದೆ. ಪ್ರಕರಣದ ಗಾಯಾಳುವೇ ಪರದಾಡುವಂತೆ ಆಗಬಾರದು ಎಂದು ಜಿಲ್ಲಾಧಿಕಾರಿ ಹೇಳಿದರು.

ದಮನಿತ ಮಹಿಳೆಯರ ಸಬಲೀಕರಣ ಮತ್ತು ಪುನರ್ವಸತಿ ಯೋಜನೆಯಡಿ ಸದ್ಯ ಅನುದಾನ ಲಭ್ಯವಿದೆ. ಇದರಲ್ಲಿಚಿಕ್ಕಿ ಮಾಡುವ ಯಂತ್ರ ಖರೀದಿಸಲಾಗುವುದು. ಬಾಕಿ ಅನುದಾನವನ್ನು ಅವರ ಅಭಿವೃದ್ಧಿಗೆ ಪೂರಕವಾಗಿ ವ್ಯಯಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಅಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಗೋವಿಂದಯ್ಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಗೋಪಾಲ ಬ್ಯಾಕೋಡ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರಾಜೇಶ್ವರಿ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜೇಂದ್ರ ಬೇಕಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT