ಶನಿವಾರ, ಜೂಲೈ 4, 2020
22 °C

ಉತ್ತರ ಕನ್ನಡ | ಬಾಲಕಿಗೆ ವಿವಾಹ ತಡೆದ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ತಾಲ್ಲೂಕಿನ ಶೇಜವಾಡದ ಸಭಾಂಗಣವೊಂದರಲ್ಲಿ ಮಂಗಳವಾರ ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಡೆದಿದ್ದಾರೆ. ಬಾಲಕಿಗೆ 18 ವರ್ಷವಾಗುವವರೆಗೆ ಮದುವೆ ಮಾಡಿಸದಂತೆ ಪಾಲಕರ ಮನವೊಲಿಸಿದ್ದಾರೆ.

ಬಾಲಕಿಗೆ ಮದುವೆ ಮಾಡಿಸಲು ಸಿದ್ಧತೆ ನಡೆದಿರುವ ಬಗ್ಗೆ ಬಂದ ಅನಾಮಿಕ ಕರೆಯನ್ನು ಆಧರಿಸಿ ಅಧಿಕಾರಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮದುವೆ ಮಂಟಪ ಶೃಂಗರಿಸಿ, ವಧು ವರರ ಕಡೆಯವರು ಸೇರಿದ್ದು ಕಂಡುಬಂತು. ಅಧಿಕಾರಿಗಳು ಬಾಲಕಿಯ ವಯಸ್ಸಿನ ಬಗ್ಗೆ ದಾಖಲೆ ಕೇಳಿದಾಗ ಪಾಲಕರು ಆಧಾರ್ ಕಾರ್ಡ್ ನೀಡಿದರು. ಅದರ ಬದಲು ಶಾಲಾ ದಾಖಲಾತಿಯ ದಾಖಲೆಯನ್ನು ನೀಡುವಂತೆ ಸೂಚಿಸಿದರು.

ಅದರಂತೆ ಪಾಲಕರು ಬಾಲಕಿಯ ಶಾಲಾ ಅಂಕಪಟ್ಟಿ ನೀಡಿದರು. ಆಕೆಗೆ 18 ವರ್ಷವಾಗದಿರುವುದು ಅದರಲ್ಲಿ ದೃಢಪಟ್ಟಿತು. ಹಾಗಾಗಿ ಮದುವೆ ನಿಲ್ಲಿಸಲು ಅಧಿಕಾರಿಗಳು ಪಾಲಕರ ಮನವೊಲಿಸಿದರು.

ಬಾಲಕಿಯ ಆಧಾರ್ ಕಾರ್ಡ್‍ನಲ್ಲಿ ಆಕೆಯ ಜನ್ಮ ವರ್ಷ 2002 ಎಂದು ನಮೂದಾಗಿದೆ. ಆದ್ದರಿಂದ ಆಕೆಗೆ 18 ವರ್ಷವಾಗಿದೆ ಎಂದು ಭಾವಿಸಿದ ವರನ ಕಡೆಯವರು, ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ವಧುವಿನ ಕಡೆಯವರು ಕಡು ಬಡವರಾದ ಕಾರಣ ಮಗಳಿಗೆ ಬೇಗನೆ ಮದುವೆ ಮಾಡಿಸುವ ಹಂಬಲದಲ್ಲಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ದೇವಿದಾಸ್, ‘ದಾಖಲೆಗಳನ್ನು ಪರಿಶೀಲಿಸಿದಾಗ ಬಾಲಕಿಗೆ 17 ವರ್ಷ 2 ತಿಂಗಳು ಪ್ರಾಯವಾಗಿದ್ದು ದೃಢಪಟ್ಟಿತು. ಹಾಗಾಗಿ 18 ವರ್ಷವಾಗುವವರೆಗೂ ಆಕೆಗೆ ಮದುವೆ ಮಾಡಿಸುವುದಿಲ್ಲ. ತಪ್ಪಿದರೆ ಕ್ರಮ ಕೈಗೊಳ್ಳಬಹುದು ಎಂದು ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಮಕ್ಕಳ ರಕ್ಷಣ ಘಟಕದ ಸ್ಮಿತಾ ನಾಯಕ, ಕಂದಾಯ ಅಧಿಕಾರಿ ಹಬ್ಬು, ಗ್ರಾಮೀಣ ಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು