ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ‘ಸುಗ್ಗಿ’ ಉಳಿವಿಗೆ ‘ಚಿನ್ನದ ಮೇಳ‌‌’ ಸಜ್ಜು!

ಕುಮಟಾ ತಾಲ್ಲೂಕಿನ ಅಘನಾಶಿನಿಯಲ್ಲಿ ಹತ್ತಾರು ಮಕ್ಕಳಿಂದ ಕಲಿಕೆ
Last Updated 27 ಆಗಸ್ಟ್ 2022, 14:14 IST
ಅಕ್ಷರ ಗಾತ್ರ

ಕುಮಟಾ: ಉತ್ತರ ಕನ್ನಡದ ಜಾನಪದ, ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಗೆ ಹಾಲಕ್ಕಿ ಸಮುದಾಯದ ಕೊಡುಗೆಯೂ ಅಪಾರವಾಗಿದೆ. ಅದರಲ್ಲೂ ಸುಗ್ಗಿ ಕುಣಿತವು ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ಈ ‘ಜಾನಪದ ಸಂಪತ್ತನ್ನು’ ಮುಂದಿನ ಪೀಳಿಗೆಯೂ ನೋಡುವ, ಸಂಭ್ರಮಿಸುವ ಉದ್ದೇಶದಿಂದ ತಾಲ್ಲೂಕಿನ ಅಘನಾಶಿನಿಯ ಅಗಶಿವೆ ಮಹಾಸತಿ ದೇವಸ್ಥಾನ ಆಡಳಿತ ಮಂಡಳಿ ಯೋಜನೆ ರೂಪಿಸಿ ಕಾರ್ಯ ನಿರತವಾಗಿದೆ.

ಆಕರ್ಷಕ, ಸಾಂಪ್ರದಾಯಿಕ ಕಲೆಯಾದ ಹಾಲಕ್ಕಿ ಸುಗ್ಗಿ ಕುಣಿತದ ಬಗ್ಗೆ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಈ ಸಲುವಾಗಿ ‘ಹಾಲಕ್ಕಿ ಚಿನ್ನದ ಸುಗ್ಗಿ ಮೇಳ’ ರಚಿಸಲಾಗಿದೆ.

ಶಾಲೆಗೆ ಹೋಗುವ, ಹಾಲಕ್ಕಿ ಸಮಾಜದ 16 ವರ್ಷ ವಯಸ್ಸಿನವರೆಗಿನ ಆಸಕ್ತ ವಿದ್ಯಾರ್ಥಿಗಳನ್ನು ಸುಗ್ಗಿ ತರಬೇತಿಗಾಗಿ ಆಯ್ಕೆ ಮಾಡಲಾಗಿದೆ. ಸುಮಾರು 30 ವಿದ್ಯಾರ್ಥಿಗಳು ಸುಗ್ಗಿ ಹಾಡು, ಸುಗ್ಗಿ ಕುಣಿತ, ಭಜನೆ, ಕೋಲಾಟದ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆ.

‘ಹಿಂದೆ ಕೋಲು ಆಡುತ್ತಾ ಸುಗ್ಗಿ ಕುಣಿಯುವ ಕಲೆಯನ್ನು ಸಮಾಜದವರು ಅತೀವ ಆಸಕ್ತಿಯಿಂದ ಕಲಿಯುತ್ತಿದ್ದರು. ಅಘನಾಶಿನಿ ಗ್ರಾಮ ಹಾಲಕ್ಕಿ ಸುಗ್ಗಿ ಕುಣಿತದ ಗಂಡುಮೆಟ್ಟಿನ ನೆಲ. ಅಘನಾಶಿನಿ ಗ್ರಾಮದ ಸುಗ್ಗಿ ತಂಡ ದೆಹಲಿಯವರೆಗೆ ಹೋಗಿ ರಾಷ್ಟ್ರಮಟ್ಟದಲ್ಲಿ ಪ್ರದರ್ಶನ ನೀಡಿದ ಹೆಮ್ಮೆ ಹೊಂದಿದೆ. ರಾಜ್ಯ, ರಾಷ್ಟ್ರಮಟ್ಟದ ನಾಯಕರು ಕುಮಟಾಕ್ಕೆ ಬಂದರೆ ಅವರನ್ನು ಸ್ವಾಗತಿಸಲು ಈಗಲೂ ಅಘನಾಶಿನಿ ಸುಗ್ಗಿ ತಂಡ ಕರೆಸುತ್ತಾರೆ’ ಎಂದು ಅಗಶಿವೆ ಮಹಾಸತಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ರವಿ ಗೌಡ ಮಾತು ಆರಂಭಿಸಿದರು.

‘ಹಿಂದೆ ಸುಗ್ಗಿ ಕುಣಿತ ಕಲೆಯ ಬಗ್ಗೆ ಕಲಿಯುವಾಗ ಹಿರಿಯರಿಂದ ಬೈಸಿಕೊಂಡು ಪೆಟ್ಟು ತಿನ್ನುತ್ತಿದ್ದೆವು. ಆ ಕಲೆ ನಶಿಸಬಾರದು ಎನ್ನುವ ಉದ್ದೇಶದಿಂದ ನಮ್ಮ ಸಂಘಟನೆಯಿಂದಲೇ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಅವರು ಹೇಳಿದರು.

‘ವಿದ್ಯಾರ್ಥಿಗಳು ಈ ವರ್ಷದ ಚೌತಿ ಹಬ್ಬದಲ್ಲಿ ಊರ ಮಹಾಗಣಪತಿ ದೇವಾಲಯದಲ್ಲಿ ಸುಗ್ಗಿ ಪ್ರದರ್ಶನ ನೀಡುತ್ತಾರೆ. ಮುಂದೆ ಅವರು ಶಾಲೆ, ಊರಿನ ಕಾರ್ಯಕ್ರಮಗಳಲ್ಲಿ ಈ ಕಲೆಯನ್ನು ಪ್ರದರ್ಶಿಸಬಹುದು. ಊರಿನ ಸುಗ್ಗಿ ಕಲಾವಿದರಾದ ಬೊಮ್ಮಯ್ಯ ಗೌಡ, ಸೋಮನಾಥ ಗೌಡ, ಈಶ್ವರ ಗೌಡ, ಬಾಬು ಗೌಡ, ವಾಸು ಗೌಡ, ಜಿತೇಂದ್ರ ಗೌಡ ತರಬೇತಿ ನೀಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.

‘ಕಲೆ ಮುಂದುವರಿಯುತ್ತದೆ’

‘ಈ ಹಿಂದೆ ಸುಗ್ಗಿ ಕುಣಿತವನ್ನು ಕಲಿಯಲು, ಅಭ್ಯಾಸ ಮಾಡಲು ನಿರ್ದಿಷ್ಟವಾದ ವೇದಿಕೆ ಅಥವಾ ವ್ಯವಸ್ಥೆಯಿರಲಿಲ್ಲ. ಅಂಥದ್ದೊಂದು ಕೊರತೆಯನ್ನು ನೀಗಿಸುವುದು ನಮ್ಮ ಉದ್ದೇಶವಾಗಿದೆ. ನಮ್ಮ ಬಳಿ ತರಬೇತಿ ಪಡೆದ ಮಕ್ಕಳು ಸುಗ್ಗಿ ಕುಣಿತದ ಸಂಭ್ರಮವನ್ನು ಜೀವನ ಪರ್ಯಂತ ಮುಂದುವರಿಸಿಕೊಂಡು ಹೋಗಲಿದ್ದಾರೆ. ಈ ಶ್ರೀಮಂತ ಕಲೆ ಹಾಗೇ ಮುಂದುವರಿಯುತ್ತದೆ’ ಎಂದು ರವಿ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT