ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಉಪ ನಗರದಂತೆ ಬೆಳೆಯುತ್ತಿದೆ ಚಿತ್ತಾಕುಲಾ

ಜಿಲ್ಲಾ ಕೇಂದ್ರ ಕಾರವಾರದ ಸಮೀಪದಲ್ಲೇ ಇರುವ ದೊಡ್ಡ ಗ್ರಾಮ ಪಂಚಾಯಿತಿ
Last Updated 12 ಏಪ್ರಿಲ್ 2022, 20:00 IST
ಅಕ್ಷರ ಗಾತ್ರ

ಕಾರವಾರ: ಕಾಳಿ ನದಿಯ ಮತ್ತೊಂದು ದಡದಲ್ಲಿರುವ ಚಿತ್ತಾಕುಲಾ ಗ್ರಾಮವು ಈಗ ಜಿಲ್ಲಾ ಕೇಂದ್ರ ಕಾರವಾರಕ್ಕೆ ಉಪ ನಗರ ಎಂಬಂತೆ ಬೆಳೆಯುತ್ತಿದೆ. ಜನವಸತಿ ಸೌಕರ್ಯಗಳಲ್ಲಿ ಕಾರವಾರಕ್ಕೆ ಉತ್ತಮ ‍ಪೈಪೋಟಿ ನೀಡುತ್ತಿದ್ದು, ಹಲವು ಅಭಿವೃದ್ಧಿ ಕಾರ್ಯಗಳಲ್ಲೂ ಮುಂದಿದೆ.

ಕಾರವಾರದಿಂದ ಕೇವಲ ಏಳು ಕಿಲೋಮೀಟರ್ ದೂರದಲ್ಲಿರುವ ಚಿತ್ತಾಕುಲಾ, ರಾಷ್ಟ್ರೀಯ ಹೆದ್ದಾರಿ 66ರ ಮಗ್ಗುಲಲ್ಲೇ ಇದೆ. 2011ರ ಜನಗಣತಿಯ ಪ್ರಕಾರ ಗ್ರಾಮದಲ್ಲಿ 12,060 ಜನಸಂಖ್ಯೆಯಿದೆ. ಪ್ರಸ್ತುತ ಗ್ರಾಮ ಪಂಚಾಯಿತಿಯಲ್ಲಿ 36 ಸದಸ್ಯರಿದ್ದು, ಜಿಲ್ಲೆಯ ಅತಿ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿದೆ. ಈ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಸದ್ಯದಲ್ಲೇ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆಯಿದೆ.

ಗ್ರಾಮದಲ್ಲಿ ಕಡಲತೀರ ಸಮೀಪದ ವಸತಿ ಪ್ರದೇಶಗಳಲ್ಲಿ ಅಲ್ಲಲ್ಲಿ ಬೇಸಿಗೆಯ ಆರಂಭದಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಮನೆಗಳ ಆವರಣದಲ್ಲಿರುವ ತೆರೆದ ಬಾವಿಗಳಲ್ಲಿ ಉಪ್ಪು ನೀರು ತುಂಬಿಕೊಳ್ಳುತ್ತದೆ. ಹಾಗಾಗಿ, ನೀರಿಗೆ ಕೆಲವೆಡೆ ಟ್ಯಾಂಕರ್‌ಗಳನ್ನು ಅವಲಂಬಿಸಬೇಕಾಗುತ್ತದೆ.

‘ರಾಷ್ಟ್ರೀಯ ಹೆದ್ದಾರಿ 66ರಿಂದ ಗ್ರಾಮ ಪಂಚಾಯಿತಿ ತನಕ ಬರುವ ರಸ್ತೆಯನ್ನು ವಿಸ್ತರಿಸುವ ಕಾರ್ಯ ಆರಂಭವಾಗಿದೆ. ತಲಾ ಐದೂವರೆ ಮೀಟರ್ ವಿಸ್ತೀರ್ಣದ ಎರಡು ರಸ್ತೆಗಳು ನಿರ್ಮಾಣವಾಗಲಿವೆ. ಅವುಗಳ ಮಧ್ಯ ಭಾಗದಲ್ಲಿ ವಿಭಜಕ ನಿರ್ಮಿಸಲಾಗುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಪೇವರ್‌ಗಳನ್ನು ಅಳವಡಿಸಿ, ಪ್ರತಿ ಭಾನುವಾರದ ಸಂತೆಗೆ ಅಲ್ಲಿ ಅವಕಾಶ ಮಾಡಿಕೊಡಲು ಉದ್ದೇಶಿಸಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಾತಿ ಸೂರಜ್ ದೇಸಾಯಿ ಹೇಳುತ್ತಾರೆ.

ಗ್ರಾಮದಲ್ಲಿ ಬಾಪೂಜಿ ಮತ್ತು ಶಿವಾಜಿ ವಿದ್ಯಾಸಂಸ್ಥೆಗಳ ಎರಡು ಕಾಲೇಜುಗಳಿವೆ. ಶಿವಾಜಿ ಪ್ರೌಢಶಾಲೆ ಮತ್ತು ಸದಾಶಿವಗಡ ಸರ್ಕಾರಿ ಪ್ರೌಢಶಾಲೆಗಳು ಕನ್ನಡ ಮಾಧ್ಯಮದಲ್ಲಿವೆ. ಅಮ್ಮ ಇಂಟರ್‌ನ್ಯಾಶನಲ್ ಸ್ಕೂಲ್ ಮತ್ತು ಸೇಕ್ರೆಡ್ ಹಾರ್ಟ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಗಳಿವೆ. ಉಳಿದಂತೆ, ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಂಥಾಲಯ, ಪೊಲೀಸ್ ಠಾಣೆಯಿದೆ.

‘ಕೆರೆ ಅಭಿವೃದ್ಧಿಗೊಳಿಸಿ’:

‘ಗ್ರಾಮದಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿರುವ ಕಾಕರ್ ಕೆರೆ ಹೊಲಸಿನಿಂದ ನಾರುತ್ತಿದೆ. ಅದನ್ನು ಸ್ವಚ್ಛಗೊಳಿಸಿ ಅಭಿವೃದ್ಧಿ ಪಡಿಸಬೇಕು’ ಎಂದು ಗ್ರಾಮಸ್ಥ ಸುರೇಶ್ ಒತ್ತಾಯಿಸುತ್ತಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷೆಸ್ವಾತಿ ಸೂರಜ್ ದೇಸಾಯಿ, ‘ಕಾಕರ್ ಕೆರೆಗೆ ತ್ಯಾಜ್ಯ ಸುರಿಯದಂತೆ ಹೇಳಿದರೂ ಕೆಲವರು ಕೇಳುತ್ತಿಲ್ಲ. ಕೆರೆಯ ಪ್ರದೇಶವನ್ನು ಅಭಿವೃದ್ಧಿಗೊಳಿಸಿ ಉದ್ಯಾನ ಮಾಡುವ ಉದ್ದೇಶವಿದೆ. ಉದ್ಯೋಗ ಖಾತ್ರಿಯಡಿ ಅಭಿವೃದ್ಧಿ ಮಾಡಲು ಕೂಲಿಯಾಳುಗಳ ಸಮಸ್ಯೆಯಿದೆ. ಈ ಭಾಗದಲ್ಲಿ ₹ 300 ಕೂಲಿಗೆ ಯಾರೂ ಬರುತ್ತಿಲ್ಲ. ಯೋಜನೆಯಡಿ ಯಂತ್ರಗಳ ಬಳಕೆಗೆ ಅವಕಾಶವಿಲ್ಲ’ ಎಂದರು.

––––

ಗ್ರಾಮದ ಪ್ರವಾಸಿ ತಾಣಗಳು

* ಸದಾಶಿವಗಡ ಕೋಟೆ‌

* ರಾಮನಾಥ ದೇವಸ್ಥಾನ

* ದುರ್ಗಾ ದೇವಸ್ಥಾನ

* ದೇವಬಾಗ ಕಡಲತೀರ

* ಕಾಳಿ ನದಿ ಸಮುದ್ರ ಸಂಗಮ

* ಕಣಸಗಿರಿ ಮಹಾಮಾಯಾ ದೇಗುಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT