ಮತಗಟ್ಟೆ ಮಾಹಿತಿಗೆ ‘ಚುನಾವಣಾ’ ಆ್ಯಪ್

ಶುಕ್ರವಾರ, ಏಪ್ರಿಲ್ 26, 2019
28 °C
ಮತದಾನಕ್ಕೆ ಸಾಲಿನಲ್ಲಿರುವ ಮತದಾರರ ಮಾಹಿತಿಯೂ ಅಂಗೈಯಲ್ಲೇ ಲಭ್ಯ

ಮತಗಟ್ಟೆ ಮಾಹಿತಿಗೆ ‘ಚುನಾವಣಾ’ ಆ್ಯಪ್

Published:
Updated:
Prajavani

ಕಾರವಾರ: ಈ ಬಾರಿಯ ಚುನಾವಣೆಯಲ್ಲಿ ಮತದಾರರು ತಮ್ಮ ಮತಗಟ್ಟೆಗಳಲ್ಲಿ ಎಷ್ಟು ಜನರಿದ್ದಾರೆ, ಸಾಲು ದೊಡ್ಡದಾಗಿದೆಯೇ ಅಥವಾ ಚಿಕ್ಕದಾಗಿದೆಯೇ ಎಂಬುದನ್ನು ತಾವು ಇರುವಲ್ಲಿಂದಲೇ ತಿಳಿದುಕೊಳ್ಳಬಹುದು. ರಾಜ್ಯ ಚುನಾವಣಾ ಆಯೋಗವು ಅಭಿವೃದ್ಧಿ ಪಡಿಸಿರುವ ‘ಚುನಾವಣಾ’ (Chunavana) ಮೊಬೈಲ್ ಅಪ್ಲಿಕೇಷನ್‌ನಿಂದ ಇದು ಸಾಧ್ಯವಾಗಲಿದೆ.

ಆ್ಯಂಡ್ರಾಯ್ಡ್ ಮೊಬೈಲ್ ಫೋನ್‌ಗಳ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯವಿದ್ದು, ಮತದಾರರು ಉಚಿತವಾಗಿ ಬಳಕೆ ಮಾಡಬಹುದು. ಇಡೀ ರಾಜ್ಯದ ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು (ಜಿಐಎಸ್) ಇದರಲ್ಲಿ ಅಳವಡಿಸಲಾಗಿದೆ. ಎಲ್ಲ ಮತಗಟ್ಟೆಗಳು ಹಾಗೂ ಲೋಕಸಭಾ ಕ್ಷೇತ್ರಗಳ ನಕ್ಷೆಗಳೂ ಇದರಲ್ಲಿದೆ. ಮತದಾರರಿಗೆ ತಮ್ಮ ಮತಗಟ್ಟೆಯನ್ನು ಕಂಡುಹಿಡಿಯುವಲ್ಲಿ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಇದು ನೆರವಾಗಲಿದೆ. 

ವೈಶಿಷ್ಟ್ಯವೇನು: ಮತದಾರರ ಚೀಟಿಯಲ್ಲಿರುವ ಸಂಖ್ಯೆಯನ್ನು ಈ ಅಪ್ಲಿಕೇಷನ್‌ನಲ್ಲಿ ನಮೂದಿಸಿದಾಗ ಯಾವ ಮತಗಟ್ಟೆಯ ವ್ಯಾಪ್ತಿ ಹಾಗೂ ಅಲ್ಲಿನ ಸಂಪೂರ್ಣ ವಿಳಾಸವನ್ನು ನೋಡಬಹುದು. ಮತದಾನ ಸಂದರ್ಭದಲ್ಲಿ ಪ್ರತಿ ಹಂತದ ಮಾಹಿತಿಯನ್ನೂ ಸಂಬಂಧಿಸಿದ ಅಧಿಕಾರಿಗಳು ನಮೂದಿಸುತ್ತಾರೆ. ಅದರಲ್ಲಿ ಮತಗಟ್ಟೆಯಲ್ಲಿ ಸಾಲಿನಲ್ಲಿ ನಿಂತಿರುವ ಮತದಾರರೆಷ್ಟು ಎಂಬ ಮಾಹಿತಿಯೂ ಒಳಗೊಂಡಿರುತ್ತದೆ. ಇದನ್ನು ಆ್ಯಪ್‌ನ ಮೂಲಕ ಅರಿತುಕೊಳ್ಳಲು ಸಾಧ್ಯವಿದೆ. ಇದರಿಂದ ಮತದಾರರು ಸಾಲಿನಲ್ಲಿ ಹೆಚ್ಚು ಕಾಲ ನಿಲ್ಲುವುದು ಹಾಗೂ ಒಂದೇ ಸಮಯಕ್ಕೆ ಹೆಚ್ಚಿನ ಸಂಖ್ಯೆಯ ಮತದಾರರು ಬರುವುದನ್ನು ನಿಯಂತ್ರಿಸಲು ಅನುಕೂಲವಾಗಲಿದೆ. 

ಮತದಾರರು ತಮ್ಮ ಮತಗಟ್ಟೆಗೆ ಸಂಬಂಧಿಸಿದ ವಿವಿಧ ಅಧಿಕಾರಿಗಳು ಯಾರು ಎಂಬುದನ್ನೂ ಇದರ ಮೂಲಕ ತಿಳಿಯಬಹುದು. ಅಲ್ಲದೇ, ಅಂಗವಿಕಲ ಮತದಾರರಿಗೆ ಹಾಗೂ ಹಿರಿಯ ನಾಗರಿಕರಿಗೆ ಈ ಆ್ಯಪ್ ಅನ್ನು ಬಳಸಿ ಮತಗಟ್ಟೆಗಳಲ್ಲಿ ಗಾಲಿ ಕುರ್ಚಿಗಳನ್ನು ಕಾಯ್ದಿರಿಸಲು ಸಾಧ್ಯವಾಗಲಿದೆ. ಅದೇ ರೀತಿ, ಹತ್ತಿರದ ಪೊಲೀಸ್ ಠಾಣೆ ಹಾಗೂ ಆರೋಗ್ಯ ಕೇಂದ್ರಗಳ ಮಾಹಿತಿಯನ್ನೂ ಇದು ಒಳಗೊಂಡಿರುತ್ತದೆ.

ಬಹುಪಯೋಗಿ ತಂತ್ರಜ್ಞಾನ: ‘ಚುನಾವಣಾ’ ಮೊಬೈಲ್ ಅಪ್ಲಿಕೇಷನ್‌ ಅನ್ನು ಚುನಾವಣೆಯ ಸಂದರ್ಭದಲ್ಲಿ ಮಾತ್ರವಲ್ಲದೇ ಮತದಾರರ ಪಟ್ಟಿಗೆ ಹೊಸ ಮತದಾರರ ಹೆಸರು ಸೇರ್ಪಡೆಗೂ ಬಳಸಬಹುದು. ಅಲ್ಲದೇ ಅಪಾಯದ ಸಂದರ್ಭಗಳಲ್ಲಿ ಸಮೀಪದ ಪೊಲೀಸ್ ಠಾಣೆ ಮತ್ತು ಆರೋಗ್ಯ ಕೇಂದ್ರಕ್ಕೆ ಮಾಹಿತಿ ರವಾನಿಸಲೂ ಬಳಸಬಹುದಾಗಿದೆ. ಅದರಲ್ಲಿ ಅಧಿಕಾರಿಗಳ ದೂರವಾಣಿ ಸಂಖ್ಯೆಗಳಿದ್ದು, ನೀತಿ ಸಂಹಿತೆಯ ಪಾರದರ್ಶಕ ಮತ್ತು ಪರಿಣಾಮಕಾರಿ ಜಾರಿಗೆ ಸಹಕಾರಿಯಾಗಲಿದೆ ಎಂಬುದು ಅಧಿಕಾರಿಗಳ ಅಭಿಮತವಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !