ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಬಾಕಿ ಬಿಲ್ ಮೊತ್ತ ಪಾವತಿಸಲು ಗುತ್ತಿಗೆದಾರರ ಆಗ್ರಹ

ಕಾರವಾರದಲ್ಲಿ ಗುತ್ತಿಗೆದಾರ ಸಂಘದಿಂದ ಪ್ರತಿಭಟನೆ: ಬೇಡಿಕೆಗಳ ಮಂಡನೆ
Last Updated 26 ಆಗಸ್ಟ್ 2022, 15:39 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಬಾಕಿಯಿರುವ ವಿವಿಧ ಇಲಾಖೆಗಳ ನೂರಾರು ಕೋಟಿ ರೂಪಾಯಿಗಳ ಬಿಲ್‌ ಪಾವತಿಸುವುದು, ಟೆಂಡರ್ ಗುತ್ತಿಗೆ ಪದ್ಧತಿಯನ್ನು ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಉತ್ತರ ಕನ್ನಡ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಗುತ್ತಿಗೆದಾರರು, ಸರ್ಕಾರದ ನಡೆಯನ್ನು ಖಂಡಿಸಿದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಮೂಲಕ ರಾಜ್ಯಪಾಲ, ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

‘ನಗರೋತ್ಥಾನ ಯೋಜನೆಯಡಿ ಸಣ್ಣ ಮೊತ್ತದ ಬೇರೆ ಬೇರೆ ಕಾಮಗಾರಿಗಳನ್ನು ಕ್ರೋಢೀಕರಿಸಿ ಬಹುಕೋಟಿ ಮೊತ್ತದ ಟೆಂಡರ್ ಕರೆಯಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿರುವ ಸಾವಿರಾರು ಮಂದಿ ನೋಂದಾಯಿತ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಅಲ್ಲದೇ ಭ್ರಷ್ಟಾಚಾರಕ್ಕೂ ದಾರಿ ಮಾಡಿಕೊಟ್ಟಂತಾಗುತ್ತದೆ. ಕಾಮಗಾರಿಗಳು ವಿಳಂಬವಾಗಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ’ ಎಂದು ದೂರಿದರು.

‘ಇದನ್ನು ಮನಗಂಡು ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್‌ ಅವರು, ಪ್ಯಾಕೇಜ್ ಟೆಂಡರ್‌ ಮೊತ್ತವು ₹ 1 ಕೋಟಿಗೆ ಮೀರಬಾರದು ಎಂದು ಸುತ್ತೋಲೆ ಹೊರಡಿಸಿದ್ದಾರೆ. ಆದರೂ ಆದೇಶವನ್ನು ಉಲ್ಲಂಘಿಸಿ ನಗರೋತ್ಥಾನ ಕಾಮಗಾರಿಗಳ ಗುತ್ತಿಗೆಯನ್ನು ವಿವಿಧ ತಾಲ್ಲೂಕುಗಳಲ್ಲಿ ಪ್ಯಾಕೇಜ್ ಪದ್ಧತಿಯಲ್ಲಿ ಕರೆಯಲಾಗಿದೆ. ಈ ಬಹುಕೋಟಿ ರೂಪಾಯಿಗಳ ಗುತ್ತಿಗೆಯನ್ನು ರದ್ದುಗೊಳಿಸಬೇಕು. ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ಸಿಗುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ನಿರ್ಮಿತಿ ಕೇಂದ್ರ ಮತ್ತು ಕೆ.ಆರ್‌.ಐ.ಡಿ.ಎಲ್, ಕೆ.ಆರ್‌.ಆರ್‌.ಡಿ.ಎಲ್ ಸಂಸ್ಥೆಗಳಿಗೆ ನೀಡಿದ ಕಾಮಗಾರಿಗಳ ಆದೇಶವನ್ನು ರದ್ದುಪಡಿಸಬೇಕು. ಪಾರದರ್ಶಕವಾದ ಗುತ್ತಿಗೆ ಮೂಲಕ ಕಾಮಗಾರಿ ನೀಡಬೇಕು. ಈ ಸಂಸ್ಥೆಗಳಲ್ಲಿ ಸೂಕ್ತ ಯಂತ್ರೋಪಕರಣ ಮತ್ತು ಸಾಕಷ್ಟು ಸಿಬ್ಬಂದಿ ಇಲ್ಲದಿದ್ದರೂ ಸರ್ಕಾರದಿಂದ ಮುಂಗಡವಾಗಿ ಬಂಡವಾಳ ನೀಡಿ ಕಾಮಗಾರಿ ನೀಡಲಾಗುತ್ತಿದೆ’ ಎಂದು ದೂರಿದರು.

‘ಕಾಮಗಾರಿ ಪೂರ್ಣಗೊಂಡ ಮೂರು ತಿಂಗಳಲ್ಲಿ ಅದರ ಪೂರ್ಣ ಮೊತ್ತ ಪಾವತಿಸಬೇಕು. ಇಲ್ಲದಿದ್ದರೆ ವಾರ್ಷಿಕ ಶೇ 18ರಷ್ಟು ಹೆಚ್ಚುವರಿ ಮೊತ್ತ ಸೇರಿಸಿ ಹಣ ಪಾವತಿಸಬೇಕು. ಇಲ್ಲವೇ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಪೂರ್ಣಗೊಂಡ ಕಾಮಗಾರಿಗಳ ಮೊತ್ತ ಪಾವತಿಸಬೇಕು. ಆ ಮೊತ್ತಕ್ಕೆ ಸರ್ಕಾರವೇ ಬಡ್ಡಿಯನ್ನು ತುಂಬುವಂತಾಗಬೇಕು’ ಎಂದು ಒತ್ತಾಯಿಸಿದರು.

ಒಟ್ಟು ಆರು ಬೇಡಿಕೆಗಳ ಮನವಿಯನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಮಾಧವ ನಾಯಕ, ಪ್ರಧಾನ ಕಾರ್ಯದರ್ಶಿ ಜಿ.ಎಸ್.ಹಿರೇಮಠ, ತಾಂತ್ರಿಕ ಸಲಹೆಗಾರ ವೈ.ಜೀನರಾಜ್ ಸೇರಿದಂತೆ ಹತ್ತಾರು ಗುತ್ತಿಗೆದಾರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT