ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಸಜ್ಜಿತ ಆಸ್ಪತ್ರೆ: ಸಿ.ಎಂ.ರಿಂದ ಘೋಷಣೆ ಸಾಧ್ಯತೆ’

ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ರೂಪಾಲಿ ನಾಯ್ಕ ಮಾಹಿತಿ
Last Updated 24 ಜುಲೈ 2022, 11:46 IST
ಅಕ್ಷರ ಗಾತ್ರ

ಕಾರವಾರ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ.1 ಅಥವಾ 2ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಆ ಸಂದರ್ಭದಲ್ಲಿ, ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯ ಘೋಷಣೆಯಾಗುವ ನಿರೀಕ್ಷೆಯಿದೆ’ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

ನಗರದ ಪತ್ರಿಕಾಭವನ ನಿರ್ವಹಣಾ ಸಮಿತಿಯು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಉತ್ತರ ಕನ್ನಡವನ್ನು ಉತ್ತರ ಕರ್ನಾಟಕದೊಂದಿಗೆ ಹೋಲಿಸಿದಾಗ, ಈ ಜಿಲ್ಲೆಯು ಕರಾವಳಿ ಜಿಲ್ಲೆಯೂ ಆಗದೇ ಉತ್ತರ ಕರ್ನಾಟಕದ ಭಾಗವೂ ಆಗದೆ ಅತಂತ್ರವಾಗಿದೆ. ನಮ್ಮ ಜಿಲ್ಲೆಯನ್ನು ಕರಾವಳಿ ಪ್ರದೇಶವೆಂದು ಪರಿಗಣಿಸಿ ವಿಶೇಷ ಅನುದಾನ ಕೊಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಕೇಳಿದ್ದೇವೆ. ಮುಂದೆಯೂ ಆಗ್ರಹ ಮಾಡಲಾಗುತ್ತದೆ’ ಎಂದು ಹೇಳಿದರು.

ವಾಸ್ತವವನ್ನೇ ಬರೆಯಿರಿ:

‘ಪತ್ರಿಕಾ ರಂಗ ಬೆಳೆಯುತ್ತಿದೆ. ವಾಟ್ಸ್‌ಆ್ಯಪ್, ವೆಬ್‌ಸೈಟ್‌ಗಳ ಮೂಲಕ ಸುದ್ದಿಗಳು ಎಷ್ಟೇ ವೇಗವಾಗಿ ಬಂದರೂ ಮರುದಿನ ಪತ್ರಿಕೆಗಳಲ್ಲಿ ಸುದ್ದಿ ಓದುವುದು, ಟಿ.ವಿ.ಯಲ್ಲಿ ಸುದ್ದಿ ನೋಡುವ ಖುಷಿಯೇ ಬೇರೆ’ ಎಂದು ರೂಪಾಲಿ ನಾಯ್ಕ ಹೇಳಿದರು.

‘ಪೆನ್ನಿನಲ್ಲಿ ದೇವಿ ಸರಸ್ವತಿಯ ಸ್ವರೂಪ ಇದೆ. ಬರವಣಿಗೆಯಿಂದ ಅಮಾಯಕರಿಗೆ ತೊಂದರೆಯಾಗಬಾರದು. ಸತ್ಯ, ವಾಸ್ತವವನ್ನೇ ಬರೆಯಬೇಕು. ತಪ್ಪು ಬರೆದರೆ ಸರಸ್ವತಿಯೂ ಒಪ್ಪುವುದಿಲ್ಲ’ ಎಂದರು.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಪತ್ರಿಕಾ ಭವನಕ್ಕೆ ವೈಯಕ್ತಿಕವಾಗಿ ಕುರ್ಚಿಗಳ ಕೊಡುಗೆ ಪ್ರಕಟಿಸಿದರು.

ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, ‘ಸಮಾಜವನ್ನು ಬೆಳೆಸುವ, ವ್ಯಕ್ತಿತ್ವ ರೂಪಿಸುವ ಮತ್ತು ಕೆಡಿಸುವ ಶಕ್ತಿ ಪತ್ರಿಕೋದ್ಯಮಕ್ಕಿದೆ. ಈ ಶಕ್ತಿಯು ಸದುದ್ದೇಶಕ್ಕಷ್ಟೇ ಬಳಕೆಯಾಗಬೇಕು. ಪತ್ರಕರ್ತರಿಂದ ಸಮಾಜಕ್ಕೆ ಒಳ್ಳೆಯ ಸೇವೆ ಸಿಗಲಿ’ ಎಂದು ಆಶಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್ ಮಾತನಾಡಿ, ‘ಪತ್ರಿಕಾ ರಂಗವನ್ನು ಸಂವಿಧಾನದ ನಾಲ್ಕನೇ ಅಂಗ ಎನ್ನುತ್ತಾರೆ. ಅದನ್ನು ಸರಿಯಾಗಿ ಬಳಸಿದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ’ ಎಂದರು.

ಜಿಲ್ಲಾ ಪತ್ರಿಕಾಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಬಿ.ಹರಿಕಾಂತ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ, ಬಿಣಗಾದ ಗ್ರಾಸಿಮ್ ಇಂಡಸ್ಟ್ರೀಸ್‌ನ ರಾಸಾಯನಿಕ ವಿಭಾಗದ ಅಧ್ಯಕ್ಷ ಬಿ.ಬಿ.ದೀಕ್ಷಿತ್, ಕಾರವಾರದ ಮಾತೋಶ್ರೀ ಸರೋಜಾಬಾಳಾ ದೇಸಾಯಿ ಮೆಮೋರಿಯಲ್‌ನ ಸಂಸ್ಥಾಪಕ ಅಧ್ಯಕ್ಷ ನರೇಂದ್ರ ದೇಸಾಯಿ, ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ ಇದ್ದರು.

ಸಂದೀಪ ಸಾಗರ ಕಾರ್ಯಕ್ರಮ ನಿರೂಪಿಸಿದರು. ಶೇಷಗಿರಿ ಮುಂಡಳ್ಳಿ ವಂದಿಸಿದರು.

ವನಮಹೋತ್ಸವ, ಸನ್ಮಾನ:

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾರವಾರದ ಮಕ್ಕಳ ಉದ್ಯಾನದಲ್ಲಿ ಏಕಕಾಲಕ್ಕೆ 75 ಗಿಡಗಳನ್ನು ನೆಡಲಾಯಿತು. ಪತ್ರಕರ್ತರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಅಧಿಕಾರಿಗಳು ಭಾಗವಹಿಸಿದ್ದರು.

ಪತ್ರಿಕಾ ಭವನದ ಮುಂದುವರಿದ ಕಾಮಗಾರಿಯನ್ನು ಶಾಸಕಿ ರೂಪಾಲಿ ನಾಯ್ಕ ಉದ್ಘಾಟಿಸಿದರು. ಬಳಿಕ, ಮೂವರು ಮಾಜಿ ಸೈನಿಕರಾದ ಸಂತೋಷ ನಾಯ್ಕ, ಗೋವಿಂದ ಗಾಂವ್ಕರ್, ರಮಾಕಾಂತ ಸಾವಂತ್ ಅವರನ್ನು ಸನ್ಮಾನಿಸಲಾಯಿತು.

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹರ್ಷ, ಸುರೇಶ್, ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಸುಜಾತಾ ಜೋಡಳ್ಳಿ, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ಎನ್‌.ಸಿ.ಸಿ ಘಟಕದ ವಿದ್ಯಾರ್ಥಿ ರೋಶನ್ ರಾಣೆ ಅವರನ್ನು ಗೌರವಿಸಲಾಯಿತು.

‘ಟ್ಯಾಗೋರ್’ ಪ್ರಶಸ್ತಿ ಪ್ರದಾನ:

ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಟ್ಯಾಗೋರ್ ಪತ್ರಿಕಾ ಪ್ರಶಸ್ತಿ’ಯನ್ನು ಮೂವರು ಪತ್ರಕರ್ತರಿಗೆ ಪ್ರದಾನ ಮಾಡಲಾಯಿತು. ಸುಭಾಷ ದೂಪದಹೊಂಡ, ಮಯೂರ ಹೆಗಡೆ ಹಾಗೂ ಸುರೇಂದ್ರ ಕುಡಾಳಕರ್‌ ಪ್ರಶಸ್ತಿ ಸ್ವೀಕರಿಸಿದರು.

––––

* ಬೇರೆ ಊರಿನಿಂದ ಬರುವ ಪತ್ರಕರ್ತರಿಗೆ ಕಾರವಾರದಲ್ಲಿ ವಸತಿ ಸಮಸ್ಯೆಯಿದೆ. ಪತ್ರಕರ್ತರಿಗೆ ಪಿ.ಎಂ.ಎ.ವೈ ಅಡಿ ವಸತಿ ಸೌಲಭ್ಯಕ್ಕೆ ಪ್ರಯತ್ನ ನಡೆಯುತ್ತಿದೆ.

– ರೂಪಾಲಿ ನಾಯ್ಕ, ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT