ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೂಪರ್ ಸ್ಪೆಷಾಲಿಟಿ ಆಸ್ಪ‍ತ್ರೆ: ಅಧಿವೇಶನದ ಬಳಿಕ ಘೋಷಣೆ’

ಮುಖ್ಯಮಂತ್ರಿಯಿಂದ ಭರವಸೆ: ಶಾಸಕಿ ರೂಪಾಲಿ
Last Updated 17 ಸೆಪ್ಟೆಂಬರ್ 2022, 16:59 IST
ಅಕ್ಷರ ಗಾತ್ರ

ಕಾರವಾರ: ‘ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸ್ಪಷ್ಟ ಭರವಸೆ ಸಿಕ್ಕಿದೆ. ಪ್ರಸ್ತುತ ಅಧಿವೇಶನ ಮುಕ್ತಾಯವಾದ ಬಳಿಕ ಜಿಲ್ಲೆಗೆ ಭೇಟಿ ನೀಡಿ ಘೋಷಿಸುವುದಾಗಿ ತಿಳಿಸಿದ್ದಾರೆ’ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಆಸ್ಪತ್ರೆ ಸ್ಥಾಪನೆಯು ನಮ್ಮೆಲ್ಲರ ಕನಸಾಗಿದೆ. ಇದಕ್ಕೆ ನಾಲ್ಕು ವರ್ಷಗಳಿಂದ ಸತತವಾಗಿ ಪ್ರಯತ್ನಿಸಲಾಗುತ್ತಿದ್ದು, 24 ಮನವಿಗಳನ್ನು ನೀಡಿದ್ದೇವೆ. ಪ್ರಸ್ತಾವವು ನಾಲ್ಕು ಬಾರಿ ಆರ್ಥಿಕ ಇಲಾಖೆಗೆ ಹೋಗಿ ಚಿಕ್ಕಪುಟ್ಟ ಸಮಸ್ಯೆಗಳಿಂದ ತಿರಸ್ಕೃತವಾಗಿದೆ. ಇದರಿಂದ ಬೇಸರವಾಗಿ, ಸದನದಲ್ಲೂ ಮಾತನಾಡಿದ್ದೆ’ ಎಂದರು.

‘ಶುಕ್ರವಾರ ಅಧಿವೇಶನದ ನಡುವೆ ಮುಖ್ಯಮಂತ್ರಿ ಜೊತೆ ಮಾತನಾಡಿ ಪ್ರಸ್ತಾಪವು ತಿರಸ್ಕೃತವಾಗಿರುವ ಬಗ್ಗೆ ಬಹಳ ನೋವಿನಿಂದ ಪ್ರಸ್ತಾಪಿಸಿದ್ದೇವೆ. ಅದಕ್ಕೆ ಅವರು ಸ್ಪಂದಿಸಿದ್ದು, ಅಧಿವೇಶನದ ನಂತರ ಜಿಲ್ಲೆಗೆ ಬಂದು ಆಸ್ಪತ್ರೆ ಘೋಷಣೆ ಮಾಡಲಾಗುವುದು. ಉತ್ತರ ಕನ್ನಡದವರ ನ್ಯಾಯಯುತ ಬೇಡಿಕೆಗೆ ಸರ್ಕಾರ ಸ್ಪಂದಿಸಲಿದೆ. ಜಿಲ್ಲೆಯ ಜನ ಬೇಸರವಾಗುವುದು ಬೇಡ ಎಂದು ತಿಳಿಸಿದ್ದಾರೆ. ಜನರ ಆರೋಗ್ಯದ ದೃಷ್ಟಿಯಿಂದ ಆದಷ್ಟು ಶೀಘ್ರವೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು’ ಎಂದು ಹೇಳಿದರು.

‘ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ₹ 160 ಕೋಟಿ ವೆಚ್ಚದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಡವು ನಿರ್ಮಾಣ ಹಂತದಲ್ಲಿದೆ. ಕ್ಯಾನ್ಸರ್, ಟ್ರಾಮಾ ಸೆಂಟರ್‌ಗಳೂ ಸಿದ್ಧವಾಗುತ್ತಿವೆ. ಆದರೆ, ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು, ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಬೇಕಾಗುತ್ತದೆ. ಹೃದ್ರೋಗ ತಜ್ಞರು, ನರರೋಗ ತಜ್ಞರ ಅಗತ್ಯವಿದೆ. ಬಹಳ ತುರ್ತಾಗಿ ಚಿಕಿತ್ಸೆ ಕೊಡಿಸಲು ಸುಸಜ್ಜಿತ ಆಸ್ಪತ್ರೆ ಬೇಕೇ ಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದೇನೆ’ ಎಂದು ತಿಳಿಸಿದರು.

‘ಆಸ್ಪತ್ರೆ ಸ್ಥಾಪನೆ ನಿಶ್ಚಿತ’:

‘ಜಿಲ್ಲೆಯಲ್ಲಿ ಆಸ್ಪತ್ರೆ ಸ್ಥಾಪನೆಯ ಸಂಬಂಧ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಜೊತೆ ಸಂಪರ್ಕದಲ್ಲಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

‘ಒಂದುವೇಳೆ ಖಾಸಗಿ ಆಸ್ಪತ್ರೆ ಸ್ಥಾಪಿಸುವುದಾದರೆ ಅದಕ್ಕೆ ಬೇಕಾದ ಜಮೀನು, ರಸ್ತೆ, ನೀರು, ಅಗತ್ಯವಿದ್ದರೆ ಭಾಗಶಃ ಹಣಕಾಸಿನ ವ್ಯವಸ್ಥೆಯನ್ನೂ ಮಾಡುವುದಾಗಿ ತಿಳಿಸಿದ್ದಾರೆ. ಒಂದೇ ದಿನದಲ್ಲಿ ಎಲ್ಲವೂ ಮಾಡುವುದು ಕಷ್ಟ. ಮುಖ್ಯಮಂತ್ರಿ ಒಪ್ಪುವ ತನಕವೂ ಕಾಡುತ್ತೇವೆ. ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯುತ್ತೇವೆ. ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದು ನಿಶ್ಚಿತ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT