ಪಕ್ಷದ ಕಚೇರಿಗಳಲ್ಲಿ ಬಿರುಸಿನ ಚಟುವಟಿಕೆ

7
ಪತ್ನಿಯರ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿರುವ ಪುರುಷರು, ಹೊಸ ವಾರ್ಡ್‌ಗೆ ಹೊಂಚು ಹಾಕುತ್ತಿರುವ ಆಕಾಂಕ್ಷಿಗಳು

ಪಕ್ಷದ ಕಚೇರಿಗಳಲ್ಲಿ ಬಿರುಸಿನ ಚಟುವಟಿಕೆ

Published:
Updated:
Deccan Herald

ಶಿರಸಿ: ನಗರಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಯ ದಿನ ಆರಂಭವಾದಂತೆ ರಾಜಕೀಯ ಪಕ್ಷಗಳ ಕಚೇರಿಯಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ‘ಸಾಮಾನ್ಯ’ ಮೀಸಲಾತಿಯ ವಾರ್ಡಿನಲ್ಲಿ ಟಿಕೆಟ್ ಪಡೆಯುವ ಪೈಪೋಟಿ ಒಂದೆಡೆಯಾದರೆ, ಪತ್ನಿಯರಿಗೆ ಟಿಕೆಟ್‌ ಕೊಡಿಸಲು ನಾಯಕರ ಹಿಂದೆ ದುಂಬಾಲು ಬಿದ್ದಿರುವ ಪತಿರಾಯರು ಇನ್ನೊಂದೆಡೆ.

ಈ ಮೊದಲಿದ್ದ ವಾರ್ಡ್‌ಗಳು, ವಾರ್ಡ್‌ ವಿಂಗಡಣೆಯ ಸಂದರ್ಭದಲ್ಲಿ ಒಡೆದು ಹೋಗಿವೆ ಜತೆಗೆ ವಾರ್ಡ್‌ ಮೀಸಲಾತಿ ಕೂಡ ಬದಲಾಗಿದೆ. ಹಾಲಿ ಸದಸ್ಯರಲ್ಲಿ ಹಲವರಿಗೆ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವಾರ್ಡ್‌ಗಳು ಮೀಸಲಾತಿಯ ಕಾರಣಕ್ಕೆ ಕೈತಪ್ಪಿ ಹೋಗಿವೆ. ಅಂತಹವರು ಸಾಮಾನ್ಯಕ್ಕೆ ಮೀಸಲಾಗಿರುವ ವಾರ್ಡ್‌ಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ, ಇಂತಹ ವಾರ್ಡ್‌ಗಳ ಟಿಕೆಟ್ ಬಯಸಿ ಹಲವಾರು ಅರ್ಜಿಗಳು ಬಂದಿವೆ. ‘ಸಾಮಾನ್ಯ ಇರುವ ಒಂದೊಂದು ವಾರ್ಡಿಗೆ 10ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಎಲ್ಲರೂ ಪಕ್ಷದ ಕಾರ್ಯಕರ್ತರಾಗಿರುವುದರಿಂದ ಯಾರಿಗೆ ಟಿಕೆಟ್ ನೀಡಬೇಕೆಂಬುದೇ ಗೊಂದಲವಾಗಿದೆ’ ಎನ್ನುತ್ತಾರೆ ಕಾಂಗ್ರೆಸ್ ಪ್ರಮುಖರೊಬ್ಬರು. ಬಿಜೆಪಿಯ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.

‘ಸಾಮಾನ್ಯ ಮೀಸಲಾತಿ ಇರುವ ವಾರ್ಡಿಗೆ ಒಂದು ರೀತಿಯ ಸಮಸ್ಯೆಯಾದರೆ, ಮಹಿಳಾ ಮೀಸಲಾತಿ ಇದ್ದಲ್ಲಿ ಇನ್ನೊಂದು ಬಗೆಯ ಸಮಸ್ಯೆ. ನಗರಸಭೆಯ 31 ವಾರ್ಡ್‌ಗಳಲ್ಲಿ ಶೇ 50ರಷ್ಟು ಮಹಿಳೆಯರಿಗೆ ಮೀಸಲಾಗಿವೆ. ಕಾರ್ಯಕರ್ತರು ತಮ್ಮ ಪತ್ನಿಯರಿಗೆ ಟಿಕೆಟ್ ಪಡೆಯಲು, ರಾಜ್ಯ ನಾಯಕರ ಪ್ರಭಾವ ಬಳಸುತ್ತಿದ್ದಾರೆ’ ಎನ್ನುತ್ತಾರೆ ಬಿಜೆಪಿ ಮುಖಂಡರೊಬ್ಬರು.

’10ನೇ ವಾರ್ಡಿಗೆ ಗರಿಷ್ಠ 10 ಅರ್ಜಿಗಳು ಬಂದಿವೆ. ಎಲ್ಲ ವಾರ್ಡ್‌ಗಳಿಂದ ಈವರೆಗೆ ಸುಮಾರು 150 ಆಕಾಂಕ್ಷಿಗಳು ಅರ್ಜಿ ನೀಡಿದ್ದಾರೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರನ್ನೊಳಗೊಂಡ ಕೋರ್ ಕಮಿಟಿ ರಚಿಸಲಾಗಿದೆ. ಈ ಸಮಿತಿ ಹಂತ ಹಂತವಾಗಿ ಪಟ್ಟಿ ಬಿಡುಗಡೆ ಮಾಡುತ್ತದೆ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ ಪ್ರತಿಕ್ರಿಯಿಸಿದರು.

‘ನಗರಸಭೆಯಲ್ಲಿ ಕಾಂಗ್ರೆಸ್‌ನ 20 ಸದಸ್ಯರು ಇದ್ದರು. ಅವರಲ್ಲಿ 11ರಷ್ಟು ಸದಸ್ಯರಿಗೆ ವಾರ್ಡ್ ಮೀಸಲಾತಿ ಉಳಿದುಕೊಂಡಿದೆ. ಆದರೆ, ಹೊಸ ಆಕಾಂಕ್ಷಿಗಳೂ ಹೆಚ್ಚಾಗಿದ್ದಾರೆ. ಈವರೆಗೆ ಸುಮಾರು 75 ಜನರು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಅಭ್ಯರ್ಥಿ ಆಯ್ಕೆ ಸಮಿತಿ ಶನಿವಾರ ರಚನೆಗೊಳ್ಳಲಿದೆ. ಈ ಸಮಿತಿಯು ಪಕ್ಷದ ಹಿರಿಯರೊಂದಿಗೆ ಚರ್ಚಿಸಿ, ಪಟ್ಟಿಯನ್ನು ಅಂತಿಮಗೊಳಿಸುತ್ತದೆ ’ ಎನ್ನುತ್ತಾರೆ ಪಕ್ಷದ ಮುಖಂಡರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !