‘ಮಿತ್ರ’ರ ನಡುವೆ ಮೈತ್ರಿ ಧರ್ಮದ ಚರ್ಚೆ!

ಮಂಗಳವಾರ, ಮಾರ್ಚ್ 26, 2019
27 °C
ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ: ‘ಕೈ’ ಪಾಳಯದಲ್ಲಿ ಅಸಮಾಧಾನ, ಬಿಜೆಪಿಯಿಂದ ಟೀಕಾ ಪ್ರಹಾರ

‘ಮಿತ್ರ’ರ ನಡುವೆ ಮೈತ್ರಿ ಧರ್ಮದ ಚರ್ಚೆ!

Published:
Updated:
Prajavani

ಕಾರವಾರ: ‘ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧೆ ಇಲ್ವಂತೆ. ಮೈತ್ರಿ ಸರ್ಕಾರದ ದೋಸ್ತಿ ಜೆಡಿಎಸ್‌ ಅಭ್ಯರ್ಥಿ ಕಣಕ್ಕೆ ಇಳಿಯುತ್ತಾರಂತೆ...’

ಜಿಲ್ಲೆಯಲ್ಲಿ ಗುರುವಾರವಿಡೀ ಇದೇ ಮಾತು. ಒಪ್ಪಂದದಂತೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವ ಕಾಂಗ್ರೆಸ್ ಮುಖಂಡರ ನಿರ್ಧಾರ ಜನರಿಗೆ ಅಚ್ಚರಿ ಮೂಡಿಸಿದೆ. ಜಿಲ್ಲೆಯಲ್ಲಿ ಉತ್ತಮ ಹಿಡಿತ ಹೊಂದಿರುವ ಕಾಂಗ್ರೆಸ್, ಅಷ್ಟಾಗಿ ಮತದಾರರನ್ನು ಹೊಂದಿರದ ಜೆಡಿಎಸ್‌ಗೆ ಯಾಕೆ ಈ ಕ್ಷೇತ್ರವನ್ನು ಕೊಡಲು ಒಪ್ಪಿದೆ ಎಂಬುದು ಚರ್ಚೆಯ ವಿಚಾರವಾಗಿದೆ. 

‘ಪ್ರಯತ್ನ ಮುಂದುವರಿದಿದೆ’: ‘ಇದು ಪಕ್ಷದ ಹಿರಿಯ ನಾಯಕರ ತೀರ್ಮಾನ. ನಮ್ಮ ಸ್ಥಳೀಯ ಮುಖಂಡರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದ್ದಾರೆ.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಜಿಲ್ಲೆಯಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಭದ್ರವಾಗಿದೆ. ಇಡೀ ಕ್ಷೇತ್ರದಲ್ಲಿ ಪಕ್ಷಕ್ಕೆ 4.5 ಲಕ್ಷ ಮತಗಳಿವೆ. ಜೆಡಿಎಸ್‌ಗೆ ಒಂದು ಲಕ್ಷ ಇರಬಹುದು. ಇದನ್ನು ಪಕ್ಷದ ವರಿಷ್ಠರ ಗಮನಕ್ಕೂ ತರಲಾಗಿದೆ. ಇಷ್ಟು ಅಂತರದ ಮತಗಳನ್ನು ಹೇಗೆ ಗೆಲುವಿನತ್ತ ತಿರುಗಿಸಲು ಸಾಧ್ಯ ಎಂಬುದನ್ನು ಮುಖಂಡರು ತೀರ್ಮಾನ ಮಾಡಬೇಕು. ಹಾಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮುಖಂಡರು ಒಟ್ಟಾಗಿ ಒಳ್ಳೆಯ ತೀರ್ಮಾನಕ್ಕೆ ಬರುತ್ತಾರೆ ಎಂದು ಭರವಸೆಯಿದೆ’ ಎಂದರು.

‘ಬೆಂಬಲದ ವಿಶ್ವಾಸವಿದೆ’: ‘ಮೈತ್ರಿ ಧರ್ಮ ಪಾಲನೆಯ ಸಲುವಾಗಿ ಕಾಂಗ್ರೆಸ್‌ನವರು ನಮ್ಮ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ನಾಯ್ಕ. 

‘ಪ್ರತ್ಯೇಕ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಯಕೆ ಸಹಜವಾದುದು. ಮೈತ್ರಿ ಒಪ್ಪಂದದ ಪ್ರಕಾರವೇ ಕ್ಷೇತ್ರ ಹಂಚಿಕೆಯಾಗಿದೆ. ಅಭ್ಯರ್ಥಿಯ ಚಿಹ್ನೆ ಜೆಡಿಎಸ್‌ ಆದರೂ ನಮ್ಮಷ್ಟೇ ಜವಾಬ್ದಾರಿ ಕಾಂಗ್ರೆಸ್‌ನವರಿಗೂ ಇದೆ. ಈ ಕ್ಷೇತ್ರ ಬೇಕು ಎಂದು ನಾವೇನು ಗೋಗರೆದು ಕೇಳಿರಲಿಲ್ಲ. ಎರಡೂ ಪಕ್ಷಗಳ ವರಿಷ್ಠರು ಅವರದ್ದೇ ಲೆಕ್ಕಾಚಾರದಲ್ಲಿ ಈ ನಿರ್ಧಾರ ಮಾಡಿದ್ದಾರೆ’ ಎಂಬ ಅಭಿಪ್ರಾಯ ಅವರದ್ದು.

‘ಗೆಲ್ಲಲಾಗದು ಎಂದು ಈ ತೀರ್ಮಾನ’: ‘ಉತ್ತರ ಕನ್ನಡದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ನಿಖರವಾಗಿ ತಿಳಿದಿರುವ ಕಾರಣದಿಂದಲೇ ಈ ನಿರ್ಧಾರಕ್ಕೆ ಬಂದಿದ್ದಾರೆ’ ಎಂದು ಹೇಳುತ್ತ ಬಿಜೆಪಿ ಮುಖಂಡರು ಉಭಯ ಪಕ್ಷಗಳ ಮುಖಂಡರ ಕಾಲೆಳೆದಿದ್ದಾರೆ.

‘ನಮಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಆಗಲಿ, ಎರಡೂ ಪಕ್ಷಗಳೂ ಒಂದೇ ರೀತಿ. ಸ್ಪರ್ಧೆಯಲ್ಲಿ ನಮಗೇನೂ ಬದಲಾವಣೆ ಆಗುವುದಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವ ಇದ್ದೂ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದು ಇಲ್ಲಿ ಗೆಲ್ಲಲಾಗದು ಎಂಬುದನ್ನು ಅವರು ತಿಳಿದಿದ್ದಾರೆ ಎಂದರ್ಥ. ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಉಮೇದಿರುವ ಯಾರೋ ಒಂದಿಬ್ಬರು ನಿಲ್ಲುತ್ತಾರೆ ಅಷ್ಟೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಪ್ರತಿಕ್ರಿಯಿಸಿದರು.

ಎರಡೂ ಕಡೆ ಅಸಮಾಧಾನ: ಉತ್ತರ ಕನ್ನಡ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಈಚೆಗೆ ಹೇಳಿದ್ದರು. ಆದರೆ, ಈಗ ಕ್ಷೇತ್ರ ಜೆಡಿಎಸ್‌ ಪಾಲಾಗಿದೆ. ಇದು ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಕಾಂಗ್ರೆಸ್ ಮುಖಂಡರು ಪ್ರತ್ಯೇಕ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮಾತುಗಳನ್ನಾಡಬಾರದು. ಮೈತ್ರಿ ಧರ್ಮ ಪಾಲನೆಯಾಗಬೇಕು ಎಂಬುದು ಜೆಡಿಎಸ್‌ ಕಾರ್ಯಕರ್ತರ ಅನಿಸಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !