ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ | ‘ಕರಾವಳಿ ಆರ್ಥಿಕ ವಲಯ’ಕ್ಕೆ ಪ್ರಸ್ತಾವ

ಮುರ್ಡೇಶ್ವರದಿಂದ ಕಾರವಾರದವರೆಗೆ ಸ್ಥಾಪನೆಗೆ ಚಿಂತನೆ: ಸಚಿವ ಜಗದೀಶ ಶೆಟ್ಟರ್
Last Updated 19 ಜೂನ್ 2020, 13:39 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯಸರ್ವಾಂಗೀಣ ಅಭಿವೃದ್ಧಿ ಸಲುವಾಗಿ ಮುರ್ಡೇಶ್ವರದಿಂದ ಕಾರವಾರದವರೆಗೆ‘ಕರಾವಳಿ ಆರ್ಥಿಕ ವಲಯ’ ಸ್ಥಾಪನೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.ರಾಜ್ಯ ಸರ್ಕಾರದಿಂದ ಅನುಮತಿ ಪಡೆದು ವಲಯವನ್ನು ಪ್ರಕಟಿಸಲಾಗುವುದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಇದಕ್ಕೂ ಮೊದಲು ಅವರು ಅಂಕೋಲಾ ತಾಲ್ಲೂಕಿನ ಬೇಲೆಕೇರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣದ ಜಾಗ, ಬೇಲೆಕೇರಿ ಬಂದರು ಪ್ರದೇಶವನ್ನು ಅವರು ವೀಕ್ಷಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

‘ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು, ಹೆಚ್ಚು ಕೈಗಾರಿಕೆಗಳ ಸ್ಥಾಪನೆಗೆ, ಬಂದರುಗಳ ಅಭಿವೃದ್ಧಿಗೆಈ ವಿಶೇಷ ವಲಯ ಅನುಕೂಲ ಮಾಡಲಿದೆ. ಇದಕ್ಕಾಗಿ ಎಲ್ಲೂ ಸಾರ್ವಜನಿಕರ ಜಮೀನನ್ನು ವಶಪಡಿಸಿಕೊಳ್ಳುವುದಿಲ್ಲ. ಈ ಕಾರ್ಯಕ್ಕಾಗಿ ಪ್ರಾದೇಶಿಕ ಯೋಜನಾ ಪ್ರಾಧಿಕಾರ ನಿರ್ಮಾಣ ಮಾಡಲೂ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಕಪಿಲ್ ಮೋಹನ್ ಮಾಹಿತಿ ನೀಡಿ, ‘ಸುಮಾರು 50 ಕಿಲೋಮೀಟರ್‌ಗಳ ವಲಯಗಳನ್ನು ಗುರುತಿಸಲಾಗುವುದು. ಕೈಗಾರಿಕೆ, ಪ್ರವಾಸೋದ್ಯಮ, ಕೃಷಿ ಉತ್ಪನ್ನ ಸಂಸ್ಕರಣೆಯನ್ನು ಒಳಗೊಂಡಂತೆ ಯೋಜನೆ ಸಿದ್ಧಪಡಿಸಲಾಗುವುದು’ ಎಂದರು.

ವಿಮಾನ ನಿಲ್ದಾಣಕ್ಕೆ ಆದ್ಯತೆ: ‘ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣಕ್ಕಾಗಿ ನೌಕಾದಳಕ್ಕೆ ಜಮೀನು ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ ಜೊತೆ ಚರ್ಚಿಸಿ ಶೀಘ್ರವೇ ನಿರ್ಧಾರಕ್ಕೆ ಬರಲಾಗುವುದು. ವಿಮಾನ ನಿರ್ಮಾಣಸ್ಥಾಪನೆಗೆ ಆದ್ಯತೆ ನೀಡಲಾಗುವುದು’ ಜಗದೀಶ ಶೆಟ್ಟರ್ ತಿಳಿಸಿದರು.

‘ಈ ಭಾಗದಲ್ಲಿವಿಮಾನನಿಲ್ದಾಣ, ಬೇಲೆಕೇರಿ ಬಂದರು ಅಭಿವೃದ್ಧಿಮತ್ತು ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗ ನಿರ್ಮಾಣದಿಂದ ಇಡೀ ಉತ್ತರ ಕರ್ನಾಟಕದ ಚಿತ್ರಣ ಬದಲಾಗಲಿದೆ. ಬಂದರಿನ ಮೂಲಕ ಸರಕು ರಫ್ತಿಗೆ ಮಂಗಳೂರು, ಗೋವಾ, ಮುಂಬೈಗೆ ಹೋಗಬೇಕಿದೆ. ಬೇಲೆಕೇರಿ ಬಂದರು ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಕೂಡ ಆಸಕ್ತಿ ತೋರಿದ್ದು, ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು.

‘ಕಾನೂನು ಹೋರಾಟಕ್ಕೆ ಕ್ರಮ’:‘ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗಯೋಜನೆಗೆ ಆಕ್ಷೇಪಿಸುತ್ತಿರುವವರನ್ನುರಾಜ್ಯ ಸರ್ಕಾರದಿಂದ ಸಮರ್ಪಕವಾಗಿ ಎದುರಿಸುವ ಕೆಲಸವಾಗುತ್ತಿದೆ. ಈ ಬಗ್ಗೆ ಜಿಲ್ಲೆಯ ಜನರೂ ಜಾಗೃತವಾಗಬೇಕು. ಕಾನೂನು ಹೋರಾಟ ಮಾಡಿ, ಯೋಜನೆಗೆ ಅನುಮತಿ ಪಡೆಯಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಗದೀಶ ಶೆಟ್ಟರ್ ಹೇಳಿದರು.

‘ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸುವುದು, ನವೋದ್ಯಮಕ್ಕೆ ಪ್ರೋತ್ಸಾಹ ನೀಡಲು ಕೈಗಾರಿಕಾ ನೀತಿಯಲ್ಲಿ ಬದಲಾವಣೆ ತರಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಕೈಗಾರಿಕೆಗಳನ್ನು ಆರಂಭಿಸುವವರಿಗೆಹಿಂದೆಂದೂ ಸಿಗದಷ್ಟು ಉತ್ತೇಜನವನ್ನು ಈಗ ನೀಡಲಾಗುತ್ತಿದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚಿಸಲಾಗಿದೆ. ಅದರ ಮೂಲಕ ಬಹುರಾಷ್ಟ್ರೀಯ ಸಂಸ್ಥೆಗಳ ಜೊತೆ ಮಾತುಕತೆ ಆರಂಭಿಸಲಾಗಿದೆ’ ಎಂದೂ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT