ಅಡಿಕೆ ತೋಟಗಳಿಗೆ ಕೊಳೆ ರೋಗ: ಪರಿಹಾರ ನೀಡಲು ಆಗ್ರಹ

7
ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ನಿರ್ಣಯ, ಹಾನಿ ಸಮೀಕ್ಷೆ ನಡೆಸುತ್ತಿರುವ ಇಲಾಖೆಗಳು

ಅಡಿಕೆ ತೋಟಗಳಿಗೆ ಕೊಳೆ ರೋಗ: ಪರಿಹಾರ ನೀಡಲು ಆಗ್ರಹ

Published:
Updated:
Deccan Herald

ಶಿರಸಿ: ತಾಲ್ಲೂಕಿನ ಅಡಿಕೆ ತೋಟಗಳಿಗೆ ಕೊಳೆರೋಗ ವ್ಯಾಪಿಸಿರುವ ಕಾರಣ ಬೆಳೆ ನಾಶವಾಗಿದ್ದು, ಸಮಗ್ರ ಸಮೀಕ್ಷೆ ನಡೆಸಿ, ಪರಿಹಾರ ನೀಡುವಂತೆ ಒತ್ತಾಯಿಸಲು, ಗುರುವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ನಿರ್ಣಯಿಸಲಾಗಿದೆ.

ತೋಟಗಾರಿಕಾ ಇಲಾಖೆ ಅಧಿಕಾರಿ ಸತೀಶ ಹೆಗಡೆ ಮಾಹಿತಿ ನೀಡಿ, ‘ಅತಿವೃಷ್ಟಿಯಿಂದ ತಾಲ್ಲೂಕಿನ ಒಟ್ಟು 6037 ಹೆಕ್ಟೇರ್ ಅಡಿಕೆ ತೋಟದಲ್ಲಿ, 6018 ಹೆಕ್ಟೇರ್‌ನಲ್ಲಿ ಶೇ 33ಕ್ಕಿಂತ ಹೆಚ್ಚು ಕೊಳೆರೋಗ ವ್ಯಾಪಿಸಿರುವ ಬಗ್ಗೆ ಸರ್ಕಾರಕ್ಕೆ ಪ್ರಾಥಮಿಕ ವರದಿ ನೀಡಲಾಗಿದೆ. ಸಮಗ್ರ ವರದಿ ನೀಡುವ ಉದ್ದೇಶದಿಂದ ಸರ್ವೆ ನಡೆಸಲಾಗುತ್ತಿದೆ. 2013-14ನೇ ಸಾಲಿನಲ್ಲಿ ಸಿದ್ಧಪಡಿಸಿದ ಅಡಿಕೆ ಬೆಳೆಗಾರರ ಪಟ್ಟಿಯನ್ನು ತಹಶೀಲ್ದಾರರಿಗೆ ನೀಡಲಾಗಿದ್ದು, ಬದಲಾವಣೆಯನ್ನು ಸೇರಿಸಿಕೊಂಡು, ಸರ್ವೆ ನಡೆಸುವಂತೆ ವಿನಂತಿಸಲಾಗಿದೆ ಎಂದರು. ‘ಕೊಳೆರೋಗದ ಸಂಬಂಧ ರೈತರು ಅರ್ಜಿ ನೀಡಬೇಕಾಗಿಲ್ಲ. ಇಲಾಖೆಯ ವತಿಯಿಂದಲೇ ಎಲ್ಲ ಕಡೆ ಸಮೀಕ್ಷೆ ನಡೆಸಲಾಗುತ್ತದೆ’ ಎಂದು ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ತಿಳಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ವಿ.ಕೂರ್ಸೆ ಮಾತನಾಡಿ, ‘ಸೆ.3ರವರೆಗೆ ತಾಲ್ಲೂಕಿನ ವಾಡಿಕೆ ಮಳೆ 2042 ಮಿ.ಮೀ ಇದ್ದು, ಈ ಬಾರಿ 2742 ಮಿ.ಮೀ ಮಳೆ ದಾಖಲಾಗಿದೆ. ಅತಿವೃಷ್ಟಿಯ ಕಾರಣಕ್ಕೆ 3100 ಹೆಕ್ಟೇರ್ ಭತ್ತ ಬಿತ್ತನೆ ಕ್ಷೇತ್ರದಲ್ಲಿ, 1300 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಬನವಾಸಿಯಲ್ಲಿ ವರದಾ ನದಿಯ ಪ್ರವಾಹದಿಂದ ಬೆಳೆ ಹಾನಿಯಾದ ರೈತರಿಗೆ ಒಟ್ಟು ₹ 42ಸಾವಿರ ಪರಿಹಾರ ನೀಡಲಾಗಿದೆ. 45 ಎಕರೆ ಮೆಕ್ಕೆಜೋಳ ಕೂಡ ಹಾನಿಯಾಗಿದೆ’ ಎಂದರು.

’ಶುದ್ಧ ಕುಡಿಯುವ ನೀರಿನ ಘಟಕ ದುರವಸ್ಥೆ ತಲುಪಿದೆ. ನಾಲ್ಕು ವರ್ಷಗಳಿಂದ ಹೇಳುತ್ತಲೇ ಬಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಬನವಾಸಿ ಭಾಗದ ಜನರು ಮಣ್ಣು ಮಿಶ್ರಿತ ನೀರನ್ನು ಕುಡಿಯುವಂತಾಗಿದೆ. ತಕ್ಷಣ ಇಲಾಖೆ ಕಾರ್ಯಪ್ರವೃತ್ತವಾಗಬೇಕು’ ಎಂದು ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗೆ ಸೂಚಿಸಿದರು.

ಐದು ರಸ್ತೆ ವೃತ್ತದ ವಾಹನ ದಟ್ಟಣೆ ನಿಯಂತ್ರಿಸಲು ಗೃಹ ರಕ್ಷಕದಳದ ಸಿಬ್ಬಂದಿ ಬದಲಾಗಿ ಪೊಲೀಸ್ ಸಿಬ್ಬಂದಿ ನೇಮಿಸಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹೆಗಡೆ ಹೇಳಿದರು. ‘ಕಾಲೇಜು ರಸ್ತೆಯಲ್ಲಿ ವಿದ್ಯಾರ್ಥಿಗಳು ಬೈಕ್ ವೀಲಿಂಗ್ ಮಾಡುತ್ತಾರೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ’ ಎಂದು ಉಪಾಧ್ಯಕ್ಷ ಚಂದ್ರು ದೇವಾಡಿಗೆ ಹೇಳಿದಾಗ, ಪ್ರತಿಕ್ರಿಯಿಸಿದ ಪಿಎಸ್ಐ ಮಾದೇಶ, ವೀಲಿಂಗ್ ಮಾಡುವ ಬೈಕ್  ವಶ‍ಪಡಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಸಹಸ್ರಲಿಂಗದಲ್ಲಿ ಸ್ವಚ್ಛತೆಯಿಲ್ಲ. ಗುತ್ತಿಗೆ ನೀಡುವ ಬದಲು ಅರಣ್ಯ ಇಲಾಖೆಯವರೇ ಇದರ ನಿರ್ವಹಿಸಬೇಕು ಎಂದು ಸದಸ್ಯ ನಾಗರಾಜ ಶೆಟ್ಟಿ ಹೇಳಿದರು.

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !