ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆ

ಒಂದನೇ ತರಗತಿ ಇಂಗ್ಲಿಷ್ ಮಾಧ್ಯಮ ಪ್ರವೇಶಕ್ಕೆ ತೀವ್ರ ಪೈಪೋಟಿ
Last Updated 7 ಜೂನ್ 2019, 19:30 IST
ಅಕ್ಷರ ಗಾತ್ರ

ಶಿರಸಿ: ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡುವ ಶಾಸಕರ ಸರ್ಕಾರಿ ಮಾದರಿ ಶಾಲೆ ನಂ.2 ಖಾಸಗಿ ಶಾಲೆಗಳಿಗೆ ಸವಾಲೊಡ್ಡುವ ಮಟ್ಟಕ್ಕೆ ಮಕ್ಕಳು, ಪಾಲಕರನ್ನು ಸೆಳೆಯುತ್ತಿದೆ. ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ವಾರದಲ್ಲಿ ಈ ಶಾಲೆಗೆ ಪ್ರವೇಶ ಬಯಸಿ ಖಾಸಗಿ ಶಾಲೆಗಳಿಂದ ಬಂದಿರುವ ಮಕ್ಕಳ ಸಂಖ್ಯೆ 70 ಮಿಕ್ಕಿದೆ.

ನಗರದ ಹೃದಯ ಭಾಗದಲ್ಲಿರುವ ಈ ಶಾಲೆಯಲ್ಲಿ ಈ ವರ್ಷ ಸರ್ಕಾರ ಪ್ರಾರಂಭಿಸಿರುವ ಆಂಗ್ಲ ಮಾಧ್ಯಮ ಒಂದನೇ ತರಗತಿ ಪ್ರಾರಂಭವಾಗಿದೆ. ಗರಿಷ್ಠ 30 ಮಕ್ಕಳಿಗೆ ಸರ್ಕಾರ ಮಿತಿಗೊಳಿಸಿದೆ. ಆದರೆ, ಪಾಲಕರು ಇಲ್ಲಿ ಸೀಟು ಪಡೆಯಲು ಮುಗಿಬಿದ್ದಿದ್ದಾರೆ. 60ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ, ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಮಕ್ಕಳನ್ನು ಆಯ್ಕೆ ಮಾಡಲಾಗುವುದು ಎನ್ನುತ್ತಾರೆ ಶಿಕ್ಷಕರು.

ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆಯಲ್ಲಿ ಮುಂದಿರುವ ಶಾಲೆಯಲ್ಲಿ ಪ್ರಸ್ತುತ 602 ಮಕ್ಕಳು ಕಲಿಯುತ್ತಿದ್ದಾರೆ. 21 ಶಿಕ್ಷಕರ ಹುದ್ದೆ ಮಂಜೂರು ಇದ್ದರೂ, ಕಾರ್ಯನಿರ್ವಹಿಸುತ್ತಿರುವವರು 14 ಮಂದಿ ಮಾತ್ರ. ಇರುವ ಕೊರತೆಯನ್ನು ನಿಭಾಯಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ಸಿಸುತ್ತಿದ್ದಾರೆ ಶಿಕ್ಷಕರು.

‘ಆರನೇ ತರಗತಿಯಿಂದ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಕಲಿಕೆಯಿದೆ. ಹೀಗಾಗಿ, ಈ ತರಗತಿಯಲ್ಲಿ ಒಟ್ಟು 109 ಮಕ್ಕಳಿದ್ದಾರೆ. ಶಿಕ್ಷಕರ ಟೇಬಲ್ ಇಡಲೂ ಜಾಗವಿಲ್ಲದಂತೆ ಡೆಸ್ಕ್‌ಗಳನ್ನು ಹಾಕಿ, ಹೆಚ್ಚಿನ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಇ–ಲರ್ನಿಂಗ್, ಎಜ್ಯುಸಾಟ್, ವಿಜ್ಞಾನ ಕೊಠಡಿ ಸೌಲಭ್ಯಗಳಿವೆ. ಮಕ್ಕಳಿಗೆ ಓದಲು ವಾಚನಾಲಯದಲ್ಲಿ ಪುಸ್ತಕಗಳಿವೆ’ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಭಾರತಿ ಶೆಟ್ಟಿ.

‘1952ರಲ್ಲಿ ಆರಂಭವಾದ ಶಾಲೆ 2002ರಲ್ಲಿ ಸುವರ್ಣ ಮಹೋತ್ಸವ ಆಚರಿಸಿದೆ. 1998ರಲ್ಲಿ ಶಾಸಕರ ಮಾದರಿ ಶಾಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಕ್ಕಳಿಗೆ ಕುಡಿಯಲು ಯೋಗ್ಯ ನೀರನ್ನು ಕೊಡಬೇಕೆಂಬ ಉದ್ದೇಶದಿಂದ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗಿದೆ. ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಜಿಲ್ಲಾ ಮಟ್ಟದ ಬಹುಮಾನ ಪಡೆದಿದ್ದಾರೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ಕ್ರೀಡೆಯಲ್ಲೂ ನಮ್ಮ ಶಾಲೆಯ ಮಕ್ಕಳು ಮುಂದಿದ್ದಾರೆ. ಕೊಕ್ಕೊದಲ್ಲಿ ಜಿಲ್ಲಾ ಮಟ್ಟದ ಬಹುಮಾನ ಹೆಚ್ಚಿನ ಬಾರಿ ನಮ್ಮ ಶಾಲೆಗೇ ಬಂದಿದೆ. ವೈಯಕ್ತಿಕ ಕ್ರೀಡೆಯಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿದ್ದಾರೆ. ಅಂಗವಿಕಲ ಮಕ್ಕಳು ಸಹ ರಾಜ್ಯ ಮಟ್ಟದಲ್ಲಿ ಬಹುಮಾನ ಪಡೆದಿದ್ದಾರೆ’ ಎನ್ನುತ್ತಾರೆ ದೈಹಿಕ ಶಿಕ್ಷಣ ಶಿಕ್ಷಕ ಅಶೋಕ ಭಜಂತ್ರಿ.

ಸಾಲಾಗಿ ಕುಳಿತು ಶಿಸ್ತಿನಿಂದ ಊಟ ಮಾಡುವ ಮಕ್ಕಳು
ಸಾಲಾಗಿ ಕುಳಿತು ಶಿಸ್ತಿನಿಂದ ಊಟ ಮಾಡುವ ಮಕ್ಕಳು

*
ಶಾಲೆಯಲ್ಲಿ ಬಿಸಿಯೂಟ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುತ್ತದೆ. ಮಕ್ಕಳು ಶಿಸ್ತಿನಿಂದ ಸಾಲಾಗಿ ಕುಳಿತು, ಖುಷಿಯಿಂದ ಊಟ ಮಾಡುತ್ತಾರೆ.
-ಭಾರತಿ ಶೆಟ್ಟಿ, ಮುಖ್ಯ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT