ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಕಲೆ ತುಂಬಿಸುವ ಪ್ರೀತಿ ನೆಬ್ಬೂರರ ಸಾಮರ್ಥ್ಯ

ನೆಬ್ಬೂರು ಬಾಗವತರಿಗೆ ಗಾನ–ವಚನ ನಮನ
Last Updated 19 ಮೇ 2019, 14:52 IST
ಅಕ್ಷರ ಗಾತ್ರ

ಶಿರಸಿ: ನೆಬ್ಬೂರು ನಾರಾಯಣ ಭಾಗವತರು ಹಾಡಿದ ಜನಪ್ರಿಯ ಪದ್ಯಗಳ ಪ್ರಸ್ತುತಿ, ಅವರ ಒಡನಾಟದ ಮೆಲಕು ಹಾಕುವ ಮೂಲಕ ಭಾನುವಾರ ಇಲ್ಲಿ ಆಯೋಜಿಸಿದ್ದ ‘ನೀನೆ ಕುಣಿಸುವೆ ಜೀವರನು’ ಗಾನ ಹಾಗೂ ವಚನ ನಮನ ಭಾವಪೂರ್ಣವಾಗಿ ನಡೆಯಿತು.

ಸಿದ್ದಾಪುರ, ಶಿರಸಿ, ಯಲ್ಲಾಪುರ ತಾಲ್ಲೂಕುಗಳ ವಿವಿಧ ಸಂಘಟನೆಗಳ ಪ್ರಮುಖರು, ನೆಬ್ಬೂರು ಭಾಗವತರ ಒಡನಾಡಿಗಳು ನುಡಿನಮನ ಸಲ್ಲಿಸಿದರು. ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ ಮಾತನಾಡಿ, ‘ನೆಬ್ಬೂರಲ್ಲಿದ್ದ ಪ್ರೀತಿಯ ಭಾವ ಅವರೊಳಗಿನ ಕಲೆ ನಮಗೆ ಇಷ್ಟವಾಗಲು ಕಾರಣ. ಸಮಾಜವನ್ನು ಪ್ರೀತಿಸುವ ವಿಶಿಷ್ಟ ಅರ್ಹತೆ ಇವರಲ್ಲಿತ್ತು. ಯಾವ ಕಾರಣಕ್ಕೆ ಅವರ ಒಡನಾಟ ಸಿಕ್ಕರೂ ಅದು ಪ್ರೀತಿಯಿಂದ ಕಟ್ಟು ಹಾಕುತ್ತಿತ್ತು. ಜಗಳ ಮಾಡಿದವರೂ ಭಾಗವತರನ್ನು ಮರೆಯಲು ಸಾಧ್ಯವಿಲ್ಲ. ಜೀವ ಕಲೆಯನ್ನು ತುಂಬಿಸುವ ಪ್ರೀತಿ ಅದು’ ಎಂದರು.

‘ನೆಬ್ಬೂರು ಭಾಗವತರ ಭಾಗವತಿಕೆ ಬಗ್ಗೆ ಮಾತನಾಡಲು ಧೈರ್ಯ ಹಾಗೂ ಅನುಭವ ಬೇಕು. ಏಕೆಂದರೆ ಅವರು ಎರಡು ವರ್ಷ ಮಾತ್ರ ಸಂಗೀತ ಕಲಿತು, 63 ವರ್ಷ ಭಾಗವತಿಕೆ ಮಾಡಿದವರು. ಅವರ ಹೆಸರಿನ ಜೊತೆ ಭಾಗವತ ಎಂಬುದೂ ಸೇರುವಷ್ಟು ಒಂದಾಗಿದ್ದರು ಭಾಗವತಿಕೆಯಲ್ಲಿ. ತೆರೆದ ಕಂಠದ ಭಾಗವತರು’ ಎಂದು ಹೇಳಿದರು.

ಸಂಕಲ್ಪದ ಮುಖ್ಯಸ್ಥ ಪ್ರಮೋದ ಹೆಗಡೆ ಮಾತನಾಡಿ, ‘ಪ್ರತಿ ವರ್ಷ ನೆಬ್ಬೂರರ ನೆನಪನ್ನು ಮಾಡಿಕೊಳ್ಳಬೇಕು. ಅವರ ಅಗೋಚರ ಕುಟುಂಬ ಇದೆ. ಕಲಾವಿದ, ಯಕ್ಷಗಾನದ ಕುಟುಂಬ ಅದು. ಈ ಕುಟುಂಬದ ಹಬ್ಬ ಮಾಡಬೇಕು. ಜಬ್ದಾರಿಯುತವಾಗಿ ಯಕ್ಷಗಾನ ಕುಟುಂಬ ಒಂದಾಗಬೇಕು’ ಎಂದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ ದಂಟ್ಕಲ್ ಮಾತನಾಡಿ, ‘ನಮ್ಮಂತಹ ಹಲವಾರು ಜನರನ್ನು ಸಿದ್ದಗೊಳಿಸಿ, ಅವಿಸ್ಮರಣೀಯ ರೀತಿಯಲ್ಲಿ ಪ್ರಭಾವ ಬೀರಿದ ನೆಬ್ಬೂರಿಗೆ ಕುಸುಮ ಅರ್ಪಿಸಬೇಕು’ ಎಂದರು. ಉದ್ಯಮಿ ಆರ್.ಜಿ.ಭಟ್ಟ ವರ್ಗಾಸರ, ಜಯರಾಮ ಹೆಗಡೆ, ಆರ್.ಎಂ.ಹೆಗಡೆ ಕಾನಗೋಡ, ನೇತ್ರಾವತಿ ಹೆಗಡೆ, ವಿ.ಆರ್.ಹೆಗಡೆ, ಹಿತ್ಲಕೈ ಗಣಪತಿ ಹೆಗಡೆ, ಜಿ.ಎನ್.ಹೆಗಡೆ ಹಾವಳಿಮನೆ, ನುಡಿ ನಮನ ಸಲ್ಲಿಸಿದರು.

ಆರ್.ಎಸ್.ಹೆಗಡೆ ಭೈರುಂಬೆ ಸ್ವಾಗತಿಸಿದರು. ಸಂಘಟಕ ನಾಗರಾಜ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ದೀಕ್ಷಿತ ವಂದಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ನಿರೂಪಿಸಿದರು.

ಗಾನ ನಮನ

ನೀನೇ ಕುಣಿಸುವೆ ಜೀವರನು, ನೋವು ನಲಿವಿನ ಜೀವನ ಕಂಡಾಯ್ತು, ಇಳಿದ ಪ್ರಶಾಂತದಲಿ.., ಚೆಲುವರನ್ನು ನೋಡಿದರೆ, ರಂಗ ನಾಯಕ ಸೇರಿದಂತೆ ನೆಬ್ಬೂರರ ಇಷ್ಟದ ಪದ್ಯಗಳನ್ನು ಭಾಗವತರಾದ ಕೇಶವ ಹೆಗಡೆ ಕೊಳಗಿ, ಶಂಕರ ಬ್ರಹ್ಮೂರು, ಶಂಕರ ಭಾಗವತ, ಪ್ರಸನ್ನ ಹೆಗ್ಗಾರ ತಂಡದವರು ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT