ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನಿವಾರ ಪೇಟೆಯಲ್ಲಿ ‘ಹಾಲ್‌ಮಾರ್ಕ್’ ಗೊಂದಲ

ಆಭರಣಕ್ಕೆ ಪ್ರಮಾಣ ಪತ್ರ ಮಾಡಿಸಬೇಕಾದವರು ಯಾರೆಂಬ ಬಗ್ಗೆ ಸಿಗದ ಸ್ಪಷ್ಟತೆ
Last Updated 15 ಜುಲೈ 2021, 15:26 IST
ಅಕ್ಷರ ಗಾತ್ರ

ಕಾರವಾರ: ಚಿನ್ನಾಭರಣಗಳ ಶುದ್ಧತೆಯನ್ನು ಖಾತ್ರಿ ಪಡಿಸುವ ಸಲುವಾಗಿ ‘ಹಾಲ್‌ಮಾರ್ಕ್’ ಪ್ರಮಾಣಪತ್ರವನ್ನು ಕೇಂದ್ರ ಸರ್ಕಾರವು ಜುಲೈ 1ರಿಂದ ಕಡ್ಡಾಯಗೊಳಿಸಿದೆ. ಆದರೆ, ಅದನ್ನು ಯಾರು ಪಡೆದುಕೊಳ್ಳಬೇಕು ಎಂಬ ಬಗ್ಗೆ ಆಭರಣ ತಯಾರಕರು ಹಾಗೂ ವರ್ತಕರ ನಡುವೆ ಗೊಂದಲ ಏರ್ಪಟ್ಟಿದೆ.

ಕಾರವಾರ ನಗರ, ಸದಾಶಿವಗಡ ಸೇರಿದಂತೆ ತಾಲ್ಲೂಕಿನಲ್ಲಿ ಸುಮಾರು ಒಂದು ಸಾವಿರ ಮಂದಿ ಸಾಂಪ್ರದಾಯಿಕವಾಗಿ ಚಿನ್ನಾಭರಣಗಳ ಕೆಲಸ ಮಾಡುತ್ತಾರೆ. ಅವರು ಸಿದ್ಧಪಡಿಸಿದ ಆಭರಣಗಳನ್ನು, ಬಂಡವಾಳ ಹೂಡಿ ಕೆಲಸ ನೀಡಿದ ವ್ಯಕ್ತಿಗೆ (ಸಾಹುಕಾರ) ನೀಡುತ್ತಾರೆ. ಆ ವ್ಯಕ್ತಿಯು ಒಡವೆಗಳನ್ನು ಸಗಟು ವ್ಯಾಪಾರಿಗೆ ನೀಡುತ್ತಾರೆ. ಅವರು ಸಣ್ಣಪುಟ್ಟ ವರ್ತಕರಿಗೆ ಮಾರಾಟ ಮಾಡುತ್ತಾರೆ. ಅಲ್ಲಿಂದ ಕೊನೆಗೆ ಗ್ರಾಹಕರ ಕೈಗೆ ಸೇರುತ್ತದೆ.

ಈ ವ್ಯವಸ್ಥೆಯಲ್ಲಿ ಆರಂಭಿಕ ಹಂತದಲ್ಲಿರುವ ಚಿನ್ನಾಭರಣ ತಯಾರಕರೇ ಹಾಲ್‌ಮಾರ್ಕ್ ಮಾಡಿಸಬೇಕೇ, ಅವರಿಂದ ಖರೀದಿಸುವ ಸಾಹುಕಾರರು ಪ್ರಮಾಣಪತ್ರ ಪಡೆದುಕೊಳ್ಳಬೇಕೇ, ಸಗಟು ವ್ಯಾಪಾರಿಗಳು ಸಣ್ಣ ವರ್ತಕರಿಗೆ ಪ್ರಮಾಣಪತ್ರ ಕೊಡಿಸಬೇಕೇ ಅಥವಾ ಗ್ರಾಹಕರಿಗೆ ಮಾರಾಟ ಮಾಡುವ ಮಳಿಗೆಯವರು ಮಾಡಿಸಿಕೊಳ್ಳಬೇಕೇ ಎಂಬುದು ಚಿನಿವಾರ ಪೇಟೆಯಲ್ಲಿ ಚರ್ಚೆಯಲ್ಲಿ ಉಳಿದಿದೆ.

ಹಾಲ್‌ಮಾರ್ಕ್‌ನಲ್ಲಿ ಒಬ್ಬರಿಗೆ ಕೊಟ್ಟಿರುವ ಸಂಕೇತವನ್ನು ಇಡೀ ದೇಶದಲ್ಲೇ ಮತ್ಯಾರಿಗೂ ಕೊಡುವುದಿಲ್ಲ. ಹಾಗಾಗಿ ಆಭರಣಗಳನ್ನು ತಯಾರಿಸಿದವರನ್ನು ಕಂಡುಹಿಡಿಯುವುದು ಸುಲಭವಾಗುತ್ತದೆ. ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದ ಚಿನ್ನಾಭರಣದ ವ್ಯವಹಾರವು ಪಾರದರ್ಶಕವಾಗಿ ಇರಬೇಕು ಎಂಬುದು ಕೇಂದ್ರ ಸರ್ಕಾರದ ಆಶಯವಾಗಿದೆ. ಆದರೆ, ಹಾಲ್‌ಮಾರ್ಕ್ ಯಾರ ಹೆಸರಿನಲ್ಲಿ ಮಾಡಬೇಕು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

14, 18 ಮತ್ತು 22 ಕ್ಯಾರೆಟ್‌ಗಳ ಆಭರಣಗಳನ್ನು ಮಾತ್ರ ಮಾರಾಟ ಮಾಡಲು ಸರ್ಕಾರ ಅವಕಾಶ ನೀಡಿದೆ. ಅವುಗಳಿಗೆ ಹಾಲ್‌ಮಾರ್ಕ್ ಕಡ್ಡಾಯವಾಗಿದೆ. ಎರಡು ಗ್ರಾಂಗಳ ಒಳಗಿನ ಆಭರಣಗಳಿಗೆ ಈ ನಿರ್ಬಂಧವಿಲ್ಲ.

ಈ ನಡುವೆ, ಕೇಂದ್ರ ಸರ್ಕಾರವು ಹಾಲ್‌ಮಾರ್ಕ್ ಮಾಡುವ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡಿದೆ. ಅದಕ್ಕೆ ಸಂಬಂಧಿಸಿದ ತಂತ್ರಾಂಶವು ಸರಿಯಾಗಿ ಸ್ಪಂದಿಸದೇ ಸಮಸ್ಯೆಯಾಗಿದೆ ಎಂದೂ ಆಭರಣ ತಯಾರಕರು ಬೇಸರ ವ್ಯಕ್ತಪಡಿಸಿದ್ದಾರೆ.

‘10 ದಿನದಲ್ಲಿ ನಿರ್ಧಾರ ಸಾಧ್ಯತೆ’:

ಚಿನ್ನಾಭರಣ ತಯಾರಕರೂ ಆಗಿರುವ ದೈವಜ್ಞ ಸೇವಾ ಸಂಘದ ಕಾರ್ಯದರ್ಶಿ ಶ್ರೀಕಾಂತ ‘‍ಪ್ರಜಾವಾಣಿ’ ಜೊತೆ ಮಾತನಾಡಿ, ‘ಈ ಸಮಸ್ಯೆಯಿಂದಾಗಿ ಹಾಲ್‌ಮಾರ್ಕ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿಲ್ಲ. ಗೊಂದಲ ಬಗೆಹರಿಯುವ ತನಕ ಹಾಲ್‌ಮಾರ್ಕ್ ಮಾಡದಂತೆ ಸರ್ಕಾರದಿಂದ ಸೂಚನೆ ಬಂದಿದೆ ಎನ್ನಲಾಗಿದೆ. ಹಾಗಾಗಿ ಪ್ರಮಾಣಪತ್ರ ಕೊಡಿಸುವುದು ಯಾರ ಜವಾಬ್ದಾರಿ ಎಂಬ ಬಗ್ಗೆ 10 ದಿನಗಳ ಒಳಗಾಗಿ ಸ್ಪಷ್ಟ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ’ ಎಂದು ತಿಳಿಸಿದರು.

‘ಹಾಲ್‌ಮಾರ್ಕ್ ಜಾರಿಯನ್ನು ಕೇಂದ್ರ ಸರ್ಕಾರವು ಜುಲೈ 1ರಿಂದಲೇ ಕಡ್ಡಾಯ ಮಾಡಿದ್ದರೂ ಅದರ ಪರಿಣಾಮಕಾರಿ ಜಾರಿಗೆ ಒಂದು ತಿಂಗಳ ಕಾಲಾವಕಾಶ ನೀಡಿದೆ’ ಎಂದು ಹೇಳಿದರು.

‘ಕಾರವಾರದಲ್ಲಿ ಮೊದಲಿನಿಂದಲೂ ಪ್ರತಿಯೊಬ್ಬ ಚಿನ್ನಾಭರಣ ತಯಾರಕರಿಗೂ ಪ್ರತ್ಯೇಕವಾದ ಸಂಕೇತಗಳು ಮತ್ತು ಮುದ್ರೆಗಳಿವೆ. ಒಡವೆಯ ಗಾತ್ರವನ್ನು ಆಧರಿಸಿ ಹಾಲ್‌ಮಾರ್ಕ್‌ ಮಾಡಲು ಸುಮಾರು ₹ 40ರಿಂದ ₹ 150ರವರೆಗೂ ದರ ನಿಗದಿಯಾಗುತ್ತದೆ. ಈ ನಿಯಮದಿಂದ ಚಿನ್ನಾಭರಣಗಳ ಕೆಲಸಗಳ ಮೇಲೆ ಯಾವುದೇ ಪರಿಣಾಮ ಆಗಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT