ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಚುನಾವಣೆಯ ಕಷ್ಟ ನನಗೆ ಹೊಸ ಅನುಭವ: ಸಚಿವ ಆರ್.ವಿ.ದೇಶಪಾಂಡೆ

ಕಾರ್ಯಕರ್ತರ ಸಭೆ
Last Updated 2 ಏಪ್ರಿಲ್ 2019, 11:11 IST
ಅಕ್ಷರ ಗಾತ್ರ

ಶಿರಸಿ: ‘ನನ್ನ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಈ ರೀತಿಯ ಕಷ್ಟ ಹಿಂದೆ ಯಾವತ್ತೂ ಅನುಭವಕ್ಕೆ ಬಂದಿರಲಿಲ್ಲ. ಆದರೆ, ಅನಿವಾರ್ಯವಾಗಿ ಪಕ್ಷದ ವರಿಷ್ಠರ ನಿರ್ಣಯವನ್ನು ಒಪ್ಪಿಕೊಂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯಿಲ್ಲದೇ, ಲೋಕಸಭೆ ಚುನಾವಣೆ ಎದುರಿಸಬೇಕಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ನೋವಿನಿಂದ ಹೇಳಿದರು.

ಮಂಗಳವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ‘ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಜಂಟಿಯಾಗಿ ಕೈಗೊಂಡಿರುವ ನಿರ್ಧಾರವನ್ನು ಒಪ್ಪಿಕೊಳ್ಳಬೇಕಾಗಿದೆ. ಪಕ್ಷದ ಎಲ್ಲ ವರಿಷ್ಠರಿಗೂ ಜಿಲ್ಲೆಯ ಸ್ಥಿತಿಗತಿಯ ಬಗ್ಗೆ ತಿಳಿಸಲಾಗಿತ್ತು. ಜಿಲ್ಲೆಯಲ್ಲಿ ಬಿಜೆಪಿಯನ್ನು ಸೋಲಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಆದರೆ, ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ನಮಗೆ ಎಷ್ಟೇ ನೋವಿದ್ದರು ಪಕ್ಷದ ಶಿಸ್ತಿನ ನಡುವೆ ಜೆಡಿಎಸ್ ಅನ್ನು ಬೆಂಬಲಿಸಬೇಕಾಗಿದೆ’ ಎಂದರು.

‘ನಾಲ್ಕು ತಿಂಗಳುಗಳ ಹಿಂದೆ ಯಾರು ಏನು ಮಾತನಾಡಿದ್ದಾರೆ ಎಂದು ನೆನಪಿಸಿಕೊಂಡರೆ ನನಗೆ ಚುನಾವಣಾ ಪ್ರಚಾರಕ್ಕೆ ಹೋಗುವುದು ಕಷ್ಟ. ಆದರೆ, ನಾನು ರಾಜಕಾರಣದಲ್ಲಿ ಅವೆಲ್ಲವನ್ನೂ ಮೀರಿ ನಿಂತಿದ್ದೇನೆ. ಚುನಾವಣಾ ಪ್ರಚಾರದ ವೇಳೆ ಎಲ್ಲೂ ನಮ್ಮ ಕಾರ್ಯಕರ್ತರ ಗೌರವಕ್ಕೆ ಅಪಚಾರವಾಗಬಾರದು. ಪರಸ್ಪರ ಗೌರವದಿಂದ ಪ್ರಚಾರ ನಡೆಯಬೇಕು’ ಎಂದು ಎಚ್ಚರಿಸಿದರು.

ವೇದಿಕೆಯಲ್ಲೇ ವಿರೋಧ

ಕಾಂಗ್ರೆಸ್–ಜೆಡಿಎಸ್ ಕಾರ್ಯಕರ್ತರ ಜಂಟಿ ಸಭೆಯ ಪೂರ್ವದಲ್ಲಿ ಈ ಸಭೆ ನಡೆಯಿತು. ವೇದಿಕೆಯಲ್ಲಿ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಶಂಭು ಶೆಟ್ಟಿ ಅವರು ಸಚಿವ ದೇಶಪಾಂಡೆ ಬಳಿ ಬಂದು, ಜೆಡಿಎಸ್‌ ಬೆಂಬಲಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಜೋರಾಗಿ ಮಾತು ನಡೆಯುತ್ತಿರುವುದನ್ನು ಮುಂಭಾಗದಲ್ಲಿ ಕುಳಿತಿದ್ದ ಕಾರ್ಯಕರ್ತರು ಗಮನಿಸಿದರು. ಪಕ್ಷದ ಪ್ರಮುಖರಾದ ಜಯಶ್ರೀ ಮೊಗೇರ, ಜೆ.ಡಿ.ನಾಯ್ಕ, ಸಿ.ಎಫ್.ನಾಯ್ಕ, ಆರ್.ಎನ್.ನಾಯ್ಕ ಇದ್ದರು.

ಕಾಂಗ್ರೆಸ್ ಮುಖಂಡರ ಹೇಳಿಕೆ

* ಕಾಂಗ್ರೆಸ್‌ಗೆ ಟಿಕೆಟ್ ಸಿಗದಿರುವುದಕ್ಕೆ ಕಾರ್ಯಕರ್ತರಿಗೆ ನೋವಾಗಿರುವುದು ಸಹಜ. ಆದರೆ, ಪಕ್ಷದ ನಾಯಕರ ಮಾತನ್ನು ಮೀರಿ ನಾವು ಹೋಗಬಾರದು

– ಭೀಮಣ್ಣ ನಾಯ್ಕ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

* ಸಂವಿಧಾನ ಬದಲಾಯಿಸಬೇಕು ಎಂದು ಹೇಳಿಕೆ ನೀಡುವ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಬದಲಾಯಿಸುವ ಅವಕಾಶ ನಮಗೆ ಸಿಕ್ಕಿದೆ

– ಯು.ಆರ್.ಸಭಾಪತಿ, ವಿಧಾನ ಪರಿಷತ್ ಸದಸ್ಯ

* ಮೈತ್ರಿ ಧರ್ಮ ಪಾಲಿಸಲು ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಕ್ಷವನ್ನು ಆಟಕ್ಕೆ ತೆಗೆದುಕೊಂಡು ನಾವು ಗೆಲ್ಲಿಸಬೇಕಾಗಿದೆ. ಬಿಜೆಪಿಗೂ ಬೇಡವಾಗಿರುವ ಅನಂತಕುಮಾರ್ ಹೆಗಡೆ ಅವರನ್ನು ಒಗ್ಗಟ್ಟಿನಿಂದ ಸೋಲಿಸಬೇಕಾಗಿದೆ

– ಶ್ರೀಕಾಂತ ಘೋಟ್ನೇಕರ್, ವಿಧಾನ ಪರಿಷತ್ ಸದಸ್ಯ

* ಈ ಲೋಕಸಭೆ ಚುನಾವಣೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಜುಗರ ಹಾಗೂ ಬೇಸರವನ್ನು ತಂದಿದೆ. ಆದರೆ, ಪಕ್ಷದ ವರಿಷ್ಠರು ನಿರ್ಣಯಿಸಿದಂತೆ ನಾವು ನಡೆಯಬೇಕಾಗಿದೆ

– ಶಾರದಾ ಶೆಟ್ಟಿ, ಮಾಜಿ ಶಾಸಕಿ

* ಬಿಜೆಪಿ ವಿರುದ್ಧದ ಅಲೆಯನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು. ಈ ಹಿಂದಿನ ಯಾವ ಸರ್ಕಾರವೂ ಗಡಿ ಕಾಯುವ ಸೈನ್ಯವನ್ನು ದುರ್ಬಳಕೆ ಮಾಡಿಕೊಂಡಿರಲಿಲ್ಲ. ಈಗಿನ ಬಿಜೆಪಿ ಸರ್ಕಾರ ಆ ಕೆಲಸವನ್ನು ಮಾಡಿದೆ

– ಶಿವರಾಮ ಹೆಬ್ಬಾರ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT