ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್- ಬಿಜೆಪಿ ನಾಯಕರು ಹಾನಗಲ್‍ನಲ್ಲಿ ಪ್ರಚಾರ: ಶಿರಸಿಯಲ್ಲಿ ವಾಸ್ತವ್ಯ

ದಿನವೂ ಹರಿದು ಬರುತ್ತಿರುವ ಕಾಂಗ್ರೆಸ್ ನಾಯಕರ ದಂಡು
Last Updated 23 ಅಕ್ಟೋಬರ್ 2021, 7:57 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿಗೆ ಹೊಂದಿಕೊಂಡಿರುವ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯ ಪ್ರಚಾರ ಕಾರ್ಯಕ್ಕೆ ಕಾಂಗ್ರೆಸ್, ಬಿಜೆಪಿ ನಾಯಕರ ದೊಡ್ಡ ದಂಡು ಹರಿದುಬರುತ್ತಿದೆ. ಪ್ರಚಾರ ಮುಗಿಸಿ ನಾಯಕರು ಸಂಜೆ ವಾಸ್ತವ್ಯಕ್ಕೆ ಶಿರಸಿಗೆ ಮರಳುತ್ತಿದ್ದಾರೆ.

ಇಲ್ಲಿನ ಹೊಟೆಲ್‍ಗಳು, ಪ್ರವಾಸಿ ಮಂದಿರಗಳಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ತಂಗುತ್ತಿದ್ದಾರೆ. ಕಳೆದ ಒಂದು ವಾರದಿಂದ ಹತ್ತಾರು ನಾಯಕರು ಶಿರಸಿಯಲ್ಲಿ ತಂಗಿದ್ದು, ಬೆಳಿಗ್ಗೆ ಎದ್ದು ಹಾನಗಲ್‍ನತ್ತ ತೆರಳುವುದು ಸಾಮಾನ್ಯವಾಗಿದೆ. ಈ ಪೈಕಿ ಕಾಂಗ್ರೆಸ್ ಪಕ್ಷದ ಪ್ರಮುಖರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರಚಾರ ತಯಾರಿ, ಚುನಾವಣಾ ರಣತಂತ್ರ ಇಲ್ಲಿಯೂ ರೂಪಿತವಾಗುತ್ತಿದೆ.

ಮಾಜಿ ಸಚಿವರಾದ ವೆಂಕಟರಮಣಪ್ಪ, ರಮಾನಾಥ ರೈ, ಮಾಜಿ ಶಾಸಕರಾದ ವೈ.ಸಂಪಂಗಿ, ರಮೇಶ ಬಾಬು ಸೇರಿದಂತೆ ಹಲವು ಮುಖಂಡರು ಹಾನಗಲ್‍ನಲ್ಲಿ ಪ್ರಚಾರ ನಡೆಸಿ, ಶಿರಸಿಗೆ ಬಂದು ತಂಗುತ್ತಿದ್ದಾರೆ. ಪಕ್ಷದ ರಾಜ್ಯಮಟ್ಟದ ಹಲವು ನಾಯಕರು ಕೂಡ ಬೀಡು ಬಿಟ್ಟಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕೂಡ ಈಚೆಗೆ ಪ್ರಚಾರಕ್ಕೆ ತೆರಳುವ ಮುನ್ನ ಶಿರಸಿಯಲ್ಲಿ ವಾಸ್ತವ್ಯ ಹೂಡಿ ನಂತರ ಹಾವೇರಿಗೆ ತೆರಳಿದ್ದರು. ಬಿಜೆಪಿಯ ಕೆಲ ರಾಜ್ಯಮಟ್ಟದ ಮುಖಂಡರು ಕೂಡ ಇಲ್ಲಿನ ಹೊಟೆಲ್‍ಗಳಲ್ಲಿ ತಂಗುತ್ತಿದ್ದಾರೆ.

‘ಮುಖಂಡರಿಗೆ ಹಾನಗಲ್‍ನಲ್ಲಿ ವಸತಿಗೆ ಸಮಸ್ಯೆ ಎದುರಾಗಿದೆ. ಉತ್ತಮ ದರ್ಜೆಯ ಹೊಟೆಲ್‍ಗಳ ಕೊರತೆ ಇರುವುದೇ ಇದಕ್ಕೆ ಕಾರಣ. ಪಕ್ಕದ ಹಾವೇರಿಯ ಹೊಟೆಲ್‍, ಪ್ರವಾಸಿ ಮಂದಿರದಲ್ಲಿ ಬಿಜೆಪಿ ನಾಯಕರು, ಸಚಿವರು ಬೀಡು ಬಿಟ್ಟಿರುವ ಪರಿಣಾಮ ಅನಿವಾರ್ಯವಾಗಿ ಶಿರಸಿಗೆ ಬರುತ್ತಿದ್ದೇವೆ’ ಎಂದು ಕಾಂಗ್ರೆಸ್ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಹಾನಗಲ್ ಶಿರಸಿಯಿಂದ ಕೇವಲ 45 ಕಿಲೋ ಮೀಟರ್ ಅಂತರದಲ್ಲಿದೆ. ಆ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಿಗೆ ಶಿರಸಿ ಇನ್ನೂ ಹತ್ತಿರವಿದೆ. ಅಂತಹ ಗಡಿಭಾಗದ ಹಳ್ಳಿಗಳಲ್ಲಿ ಸ್ಥಳೀಯ ನಾಯಕರ ಜತೆ ರಾಜ್ಯಮಟ್ಟದ ಮುಖಂಡರು ಪ್ರಚಾರ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT