ಶಾಸಕಿ ರೂಪಾಲಿ ಸಾಧನೆ ಶೂನ್ಯ: ಕಾಂಗ್ರೆಸ್ ಟೀಕೆ

7

ಶಾಸಕಿ ರೂಪಾಲಿ ಸಾಧನೆ ಶೂನ್ಯ: ಕಾಂಗ್ರೆಸ್ ಟೀಕೆ

Published:
Updated:

ಕಾರವಾರ: ‘ರೂಪಾಲಿ ನಾಯ್ಕ ಶಾಸಕಿಯಾಗಿ ಆಯ್ಕೆಯಾಗಿ ನಾಲ್ಕು ತಿಂಗಳಾದವು. ಆದರೆ, ಅವರು ಈವರೆಗೆ ಅವರ ಸಾಧನೆ ಶೂನ್ಯ. ಈ ಹಿಂದಿನ ಶಾಸಕರ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಭೇಟಿ ನೀಡಿ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ ಆರೋಪಿಸಿದರು. 

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಕೋಲಾದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮೂಲ ಸೌಕರ್ಯಗಳಿಲ್ಲದಿದ್ದರೂ ಭಾನುವಾರ ತರಾತುರಿಯಲ್ಲಿ ಉದ್ಘಾಟಿಸಲಾಗಿದೆ. ಅಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಕುರ್ಚಿ, ಕಚೇರಿಗೆ ಹೊಸ ಪೀಠೋಪಕರಣಗಳಿಲ್ಲ. ಶಾಸಕಿ ಹೇಳುವುದು ಒಂದು ಮಾಡುವುದು ಇನ್ನೊಂದು’ ಎಂದು ಟೀಕಿಸಿದರು.

ಮುಖಂಡ ಶಂಭು ಶೆಟ್ಟಿ ಮಾತನಾಡಿ, ‘ರೂಪಾಲಿ ನಾಯ್ಕ ಅವರು ಈಚೆಗೆ ದೇವರಾಜ ಅರಸು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಭೇಟಿ ನೀಡಿದ್ಗರು. ಆಗ ಅಲ್ಲಿ ಶೌಚಾಲಯದ ಸೌಲಭ್ಯವಿಲ್ಲದೇ ಇದನ್ನು ಹೇಗೆ ಉದ್ಘಾಟಿಸಿದರು ಎಂದು ಪ್ರಶ್ನಿಸಿದ್ದರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಶಾಸಕ ಸತೀಶ್ ಸೈಲ್ ಅವರ ವಿರುದ್ಧವೂ ಇಲ್ಲಸಲ್ಲದ ಟೀಕೆ ಮಾಡಿದ್ದರು. ಅದೇರೀತಿಯ ವಿಚಾರಗಳು ಅಂಕೋಲಾದಲ್ಲಿ ಉಪನೋಂದಣಾಧಿಕಾರಿ ಕಚೇರಿ ಉದ್ಘಾಟಿಸುವಾಗ ಯಾಕೆ ಪಾಲನೆಯಾಗಿಲ್ಲ’ ಎಂದು ಪ್ರಶ್ನಿಸಿದರು. 

‘ಅಲ್ಲಿ ವಸತಿನಿಲಯ ನಿರ್ಮಾಣ ಸಂದರ್ಭದಲ್ಲಿ ಶೌಚಾಲಯಕ್ಕೆ ಗುಂಡಿ ತೋಡುವಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಆ ನಿವೇಶನದ ಸುತ್ತ ಕುಡಿಯುವ ನೀರಿನ ಏಳೆಂಟು ಬಾವಿಗಳಿವೆ. ಈ ಸಮಸ್ಯೆಯನ್ನು ಅರ್ಥ ಮಾಡಿಕೊಂಡ ಜಿಲ್ಲಾಧಿಕಾರಿ, ಮಲಿನ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ₹ 17 ಲಕ್ಷ ಬಿಡುಗಡೆ ಮಾಡಿದರು. ಆದರೆ, ಕಾಮಗಾರಿ ಇನ್ನೂ ಯಾಕೆ ಆರಂಭವಾಗಿಲ್ಲ ಎಂಬುದನ್ನು ಶಾಸಕಿ ವಿವರಿಸಲಿ. ಇದಕ್ಕೆ ಸಂಬಂಧಿಸಿ ವರದಿ ತರಿಸಿಕೊಂಡು ಅವರು ಮಾತನಾಡಲಿ’ ಎಂದು ತಿರುಗೇಟು ನೀಡಿದರು. 

ಕಾರವಾರದಲ್ಲಿ ನಿರ್ಮಾಣವಾಗುತ್ತಿರುವ ಮೀನು ಮಾರುಕಟ್ಟೆ ಕಟ್ಟಡದ ಕೆಳ ಅಂತಸ್ತಿನಲ್ಲಿ ನೀಲನಕ್ಷೆಯ ಪ್ರಕಾರ ವಾಹನ ಪಾರ್ಕಿಂಗ್‌ಗೆ ಜಾಗ ನಿಗದಿಯಾಗಿತ್ತು. ಆದರೆ, ಈಗ ಅಲ್ಲಿ ಅವಕಾಶ ನೀಡಲಾಗಿದೆಯೇ ಎಂಬುದನ್ನೂ ಶಾಸಕಿ ವಿವರಿಸಲಿ ಎಂದು ಆಗ್ರಹಿಸಿದರು.

ನ್ಯಾಯಾಲಯಕ್ಕೆ ದೂರು: ಈಚೆಗೆ ನಡೆದ ಕಾರವಾರ– ಅಂಕೋಲಾ ಎಪಿಎಂಸಿ ಚುನಾವಣೆಯಲ್ಲಿ ಗುಪ್ತ ಮತದಾನದ ಮೂಲಕ ಸದಸ್ಯರ ಆಯ್ಕೆ ಮಾಡಬೇಕಿತ್ತು. ಆದರೆ, ಚುನಾವಣಾಧಿಕಾರಿ ಕೈ ಎತ್ತುವ ವಿಧಾನ ಅನುಸರಿಸಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಬೆಂಬಲಿತ ಪರಾಜಿತ ಅಭ್ಯರ್ಥಿಗಳು ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ ಎಂದು ಶಂಭು ಶೆಟ್ಟಿ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕೃಷ್ಣಾ ಮೇತಾ, ಮುಖಂಡರಾದ ಗಣಪತಿ ನಾಯ್ಕ, ಬಾಬು ಶೇಖ್, ರಾಜೇಂದ್ರ ಅಂಚೇಕರ್, ಪ್ರಭಾಕರ್ ಮಾಳ್ಸೇಕರ್ ಪೂರ್ಣಾನಂದ ಪಾಟೀಲ್, ಸುಹಾನಿ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !