ಭಾನುವಾರ, ಸೆಪ್ಟೆಂಬರ್ 15, 2019
25 °C

ಡಿಕೆಶಿ ಬಂಧನ: ಕಾಂಗ್ರೆಸ್ ಪ್ರತಿಭಟನೆ

Published:
Updated:
Prajavani

ಶಿರಸಿ: ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ ಬಂಧನ ವಿರೋಧಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಬುಧವಾರ ಇಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹಳೇ ಬಸ್ ನಿಲ್ದಾಣ ವೃತ್ತದಲ್ಲಿ ಸೇರಿದ್ದ ಕಾರ್ಯಕರ್ತರು, ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ರಸ್ತೆ ನಡುವೆ ಕುಳಿತು, ಬಸ್ ತಡೆದು ಪ್ರತಿಭಟಿಸಿದರು. ಟೈಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅವರು, ‘ಡಿ.ಕೆ.ಶಿವಕುಮಾರ್ ಅವರು ದಾಖಲೆ ಪರಿಶೀಲನೆಯ ವೇಳೆ ಎಲ್ಲ ರೀತಿಯ ಸಹಕಾರ ನೀಡಿದರೂ ಅವರನ್ನು ವಿನಾಕಾರಣ ಬಂಧಿಸಲಾಗಿದೆ. ಅವರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಪಕ್ಷದ ಶಕ್ತಿ ಕುಂದಿಸಲು ಬಿಜೆಪಿ ಪ್ರಯತ್ನ ನಡೆಸಿದೆ. ಇ.ಡಿ ಅಧಿಕಾರಿಗಳ ಮೂಲಕ ರಾಜ್ಯದಲ್ಲಿರುವ ಕಾಂಗ್ರೆಸ್ಸಿಗರನ್ನು ಹೆದರಿಸುವ ನೀಚ ಕೆಲಸ ಬಿಜೆಪಿಯಿಂದ ಆಗುತ್ತಿದೆ. ಕಾಂಗ್ರೆಸ್ ಮುಕ್ತ ಮಾಡುವ ಬಿಜೆಪಿ ಕನಸು ಯಾವತ್ತಿಗೂ ಸಾಧ್ಯವಾಗದು’ ಎಂದು ಹೇಳಿದರು.

ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಪಕ್ಷದ ಪ್ರಮುಖರಾದ ಭಟ್ಕಳದ ಸಂತೋಷ ನಾಯ್ಕ, ವಿಠ್ಠಲ ನಾಯ್ಕ, ರಾಜೇಶ ನಾಯ್ಕ, ಗೋವಿಂದ ನಾಯ್ಕ, ಜಗದೀಪ ತೆಂಗೇರಿ, ಬಾಲಚಂದ್ರ ನಾಯ್ಕ, ವಿ.ಎಲ್.ನಾಯ್ಕ, ರತ್ನಾಕರ ನಾಯ್ಕ, ಜಗದೀಶ ಖಾರ್ವಿ, ಬಿ.ಡಿ.ನಾಯ್ಕ, ಕೆ.ಜಿ.ನಾಗರಾಜ, ಸಂತೋಷ ಶೆಟ್ಟಿ, ಸುಜಾತಾ ಗಾಂವಕರ, ಸುನೀಲ ನಾಯ್ಕ, ಸಿ.ಎಫ್.ನಾಯ್ಕ, ಶ್ರೀಲತಾ ಕಾಳೇರಮನೆ, ಈಶ್ವರ ನಾಯ್ಕ ಇದ್ದರು.

Post Comments (+)