ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ ಸಿದ್ಧತೆಗೆ ಅಣಿಯಾದ ಕಾಂಗ್ರೆಸ್

ಅಭ್ಯರ್ಥಿ ಆಯ್ಕೆಗೆ ಮಾನದಂಡ ವಿಧಿಸಿರುವ ಪಕ್ಷದ ವರಿಷ್ಠರು
Last Updated 31 ಜುಲೈ 2019, 5:40 IST
ಅಕ್ಷರ ಗಾತ್ರ

ಶಿರಸಿ: ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅನರ್ಹಗೊಂಡ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುವುದು ನಿಶ್ಚಿತವಾಗಿದೆ. ಅನರ್ಹಗೊಂಡ ಶಾಸಕರು ಕೋರ್ಟ್ ಅಲೆದಾಟದಲ್ಲಿದ್ದರೆ, ಇತ್ತ ಕಾಂಗ್ರೆಸ್ ಉಪ ಚುನಾವಣೆಯ ಸಿದ್ಧತೆ ಆರಂಭಿಸಿದೆ.

ಅನರ್ಹಗೊಂಡಿರುವ ಶಾಸಕರ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರನ್ನು ಬೆಂಗಳೂರಿಗೆ ಕರೆಯಿಸಿ, ಸಭೆ ನಡೆಸಿರುವ ಕೆಪಿಸಿಸಿ ಪ್ರಮುಖರು, ಅನರ್ಹಗೊಂಡಿರುವವರ ಜೊತೆ ಗುರುತಿಸಿಕೊಂಡವರನ್ನು ಪಕ್ಷದಿಂದ ಅಮಾನತು ಮಾಡುವಂತೆ ಆದೇಶಿಸಿದ್ದಾರೆ. ಉಪ ಚುನಾವಣೆ ನಡೆಯುವ ಎಲ್ಲ ಕ್ಷೇತ್ರಗಳಿಗೆ ರಾಜ್ಯ ಮಟ್ಟದ ನಾಯಕರೊಬ್ಬರನ್ನು ಉಸ್ತುವಾರಿಯಾಗಿ ನೇಮಿಸಲು ನಿರ್ಧಾರವಾಗಿದೆ. ಸ್ಥಳೀಯ ಕಾರ್ಯಕರ್ತರಿಂದ ಮಾಹಿತಿ ಪಡೆದು, ಗೆಲುವು ಸಾಧಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷರು ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಸ್ಥಳೀಯ ಪ್ರಮುಖರೊಬ್ಬರು ತಿಳಿಸಿದರು.

’ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ನಂತರದ ಸಮ್ಮಿಶ್ರ ಸರ್ಕಾರ ಶಿವರಾಮ ಹೆಬ್ಬಾರ್ ಪ್ರತಿನಿಧಿಸುತ್ತಿದ್ದ ಯಲ್ಲಾಪುರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿತ್ತು. ಅವರಿಗೆ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನ ಕೂಡ ನೀಡಲಾಗಿತ್ತು. ಆದರೆ, ಅವರು ಪಕ್ಷಕ್ಕೆ ದ್ರೋಹ ಮಾಡಿ, ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಅವರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದರೆ, ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದು. ಒಂದೊಮ್ಮೆ ತಡೆಯಾಜ್ಞೆ ಸಿಕ್ಕಿ, ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಿದರೆ, ಅವರನ್ನು ಸೋಲಿಸುವಂತಹ ಸಮರ್ಥ ಅಭ್ಯರ್ಥಿಯನ್ನೇ ಆಯ್ಕೆ ಮಾಡಲು ಪಕ್ಷದ ವರಿಷ್ಠರು ಚರ್ಚಿಸಿದ್ದಾರೆ’ ಎಂದು ಅವರು ವಿಷಯ ಹಂಚಿಕೊಂಡರು.

ಅಭ್ಯರ್ಥಿ ಯಾರಾಗಬಹುದು ?:

ಉತ್ತರ ಕನ್ನಡ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಇನ್ನೆರಡು ಕಡೆ ಕಾಂಗ್ರೆಸ್ ಶಾಸಕರಿದ್ದರು. ಹೆಬ್ಬಾರ್ ಹೊರ ಬಿದ್ದ ಮೇಲೆ, ಉಳಿದಿರುವ ಏಕೈಕ ಕಾಂಗ್ರೆಸ್ ಶಾಸಕ ಹಳಿಯಾಳ ಕ್ಷೇತ್ರದ ಆರ್.ವಿ.ದೇಶಪಾಂಡೆ. ಪಕ್ಷದ ಹಿರಿಯರಾಗಿರುವ ಅವರಿಗೆ ಈ ಉಪ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೀಗಾಗಿ, ಅವರು ಈಗಾಗಲೇ ಆಪ್ತರ ಮೂಲಕ ಕ್ಷೇತ್ರದಲ್ಲಿ ಆಂತರಿಕ ಸಮೀಕ್ಷೆಯನ್ನು ನಡೆಸಿದ್ದಾರೆನ್ನಲಾಗಿದೆ.

‘ದೇಶಪಾಂಡೆ ಮಗ ಪ್ರಶಾಂತ ದೇಶಪಾಂಡೆ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಹಿರಿಯ ಸಹಕಾರಿ ಆರ್.ಎನ್.ಹೆಗಡೆ ಗೋರ್ಸಗದ್ದೆ ಅವರ ಹೆಸರು ಪಕ್ಷದ ಆಂತರಿಕ ವಲಯದಲ್ಲಿ ಪ್ರಸ್ತಾಪವಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಲ್ಪ ಮತಗಳ ಅಂತರದಿಂದ ಸೋತಿದ್ದ ಮಾಜಿ ಶಾಸಕ ವಿ.ಎಸ್.ಪಾಟೀಲ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಕರೆತರುವ ಪ್ರಯತ್ನವೂ ನಡೆಸಿದೆ’ ಎಂದು ಮೂಲ ಕಾಂಗ್ರೆಸ್ಸಿಗರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT