ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕರಾವಳಿ ಗಡಿ ಬದಲಿಸಿ ಕಾಮಗಾರಿ!

‘ಅಭಿವೃದ್ಧಿ ರಹಿತ ವಲಯ’ದಲ್ಲಿ ಖಾಸಗಿ ಬಂದರು ನಿರ್ಮಾಣಕ್ಕೆ ಆಕ್ಷೇಪ
Last Updated 4 ಫೆಬ್ರುವರಿ 2021, 14:24 IST
ಅಕ್ಷರ ಗಾತ್ರ

ಕಾರವಾರ: ‘ಹೊನ್ನಾವರದ ಟೊಂಕಾದಲ್ಲಿ ಖಾಸಗಿ ಬಂದರು ನಿರ್ಮಾಣ ಕಾಮಗಾರಿಯಲ್ಲಿ ಕರಾವಳಿಯ ಗಡಿಯನ್ನೇ ಬದಲಿಸಲು ಮುಂದಾಗಿದ್ದಾರೆ. ಅಳಿವೆ ಪ್ರದೇಶದ ನಾಲ್ಕು ಕಿ.ಮೀ. ವ್ಯಾಪ್ತಿಯನ್ನು ಅಭಿವೃದ್ಧಿ ರಹಿತ ವಲಯ (ಎನ್.ಡಿ.ಝೆಡ್) ಎಂದು ಗುರುತಿಸಲಾಗಿದೆ. ಆದರೂ ಅಲ್ಲಿ ಕಾಮಗಾರಿ ಮಾಡಲಾಗುತ್ತಿದೆ’ ಎಂದು ಕಡಲಜೀವ ವಿಜ್ಞಾನಿ ಡಾ.ಪ್ರಕಾಶ ಮೇಸ್ತ ಆರೋಪಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಸರಕೋಡ ಗ್ರಾಮದ ಟಿಕ್ಕಾ 2 ಪ್ರದೇಶದಿಂದ ಪಾವಿನಕುರ್ವಾದ ಒಂದು ಭಾಗದ ನಡುವೆ ಇರುವ ಮಲ್ಲುಕುರ್ವದಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಇಲ್ಲಿಗೆ ಈ ಬೇರೆಯದೇ ಸರ್ವೆ ನಂಬರ್‌ಗಳಿದ್ದವು. ಅದನ್ನು ಬದಲಿಸಿ ಸರ್ವೆ ನಂಬರ್ 305ನ್ನು ನೀಡಲಾಗಿದೆ. ಈ ಬಗ್ಗೆ ನಕ್ಷೆಯನ್ನು ಪರಿಶೀಲಿಸಿದಾಗ ಗಡಿ ರೇಖೆ ಬದಲಾಗಿದ್ದು ಗೊತ್ತಾಯಿತು. ಚಾಲ್ತಿ ಪಹಣಿ ಪತ್ರದ ಮೇಲೆ ಮತ್ತೊಂದು ಸರ್ವೆ ನಂಬರ್ ನಮೂದಿಸಲಾಗಿದೆ’ ಎಂದು ವಿವರಿಸಿದರು.

‘ಸಮುದ್ರದಲ್ಲಿ ದೇಶದ ಗಡಿಯನ್ನು ಬದಲಿಸುವ ಅಧಿಕಾರವು ರಾಷ್ಟ್ರೀಯ ಹೈಡ್ರಾಲಿಕ್ ಅಧಿಕಾರಿಗೆ ಮಾತ್ರವಿದೆ. ಕರಾವಳಿಯು ಅಂತರರಾಷ್ಟ್ರೀಯ ಗಡಿಗೆ ಸಮೀಪದಲ್ಲಿರುವ ಕಾರಣ ಈ ರೀತಿ ಗಡಿ ಬದಲಿಸಿದರೆ ಅಪಾಯ ಉಂಟಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ಹೊನ್ನಾವರದ ಮೀನುಗಾರರ ಮುಖಂಡ ಗಣಪತಿ ತಾಂಡೇಲ ಮಾತನಾಡಿ, ‘ಖಾಸಗಿ ಬಂದರಿಗೆ ಮೀನುಗಾರರ ಜಮೀನಿನ ಮೂಲಕವೇ ರಸ್ತೆ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಸ್ಪಂದಿಸುತ್ತಿಲ್ಲ. ಕಾಮಗಾರಿ ಖಂಡಿಸಿ ಪ್ರತಿಭಟಿಸಿದವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಭೂಸ್ವಾಧೀನ ನಡೆಸದೇ, ಸಿ.ಆರ್.ಝೆಡ್ ಕಾಯ್ದೆಯನ್ನು ಪಾಲಿಸದೇ ಮಾಡಲಾಗುತ್ತಿರುವ ಕಾಮಗಾರಿಯನ್ನು ನಿಲ್ಲಿಸಬೇಕು. ಇದರ ಬಗ್ಗೆ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

ಮತ್ತೊಬ್ಬ ಮುಖಂಡ ವೀವನ್ ಫರ್ನಾಂಡಿಸ್ ಮಾತನಾಡಿ, ‘ಹೊನ್ನಾವರ ಬಂದರಿನಲ್ಲಿ ಅಲೆ ತಡೆಗೋಡೆ ನಿರ್ಮಿಸುವಂತೆ, ಅಳಿವೆಯಿಂದ ಹೂಳೆತ್ತುವಂತೆ ಮಾಡಿದ್ದ ಮನವಿಗೆ ಸ್ಪಂದಿಸಿಲ್ಲ. ಆದರೆ, ಖಾಸಗಿ ಬಂದರಿನ ಕಾಮಗಾರಿ ನಡೆಯುತ್ತಿದೆ. ಈ ಮೂಲಕ ಮೀನುಗಾರರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ದೂರಿದರು.

ಕಾಮಗಾರಿ ನಿಲ್ಲಿಸಲು ಆಗ್ರಹ:

‘ಹೊನ್ನಾವರದಲ್ಲಿ ಖಾಸಗಿ ಬಂದರು ನಿರ್ಮಾಣ ಸಂಬಂಧ ಸಾರ್ವಜನಿಕರ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಸೂಕ್ತ ಉತ್ತರ ಸಿಕ್ಕಿಲ್ಲ. ಕಾಮಗಾರಿಗೆ ಅನುಮತಿ ನೀಡುವಾಗ ಕರಾವಳಿಗೆ ಸಂಬಂಧಿಸಿದ ಎಲ್ಲ ಕಾನೂನುಗಳನ್ನು ಉಲ್ಲಂಘಿಸಲಾಗಿದೆ’ ಎಂದು ವಿವಿಧ ಮೀನುಗಾರಿಕಾ ಸಂಘಟನೆಗಳು ದೂರಿವೆ.

ಈ ಸಂಬಂಧ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದ ಮುಖಂಡರು, ‘ಹೊನ್ನಾವರ ಪೋರ್ಟ್ ಕಂಪನಿಯು ಸ್ಥಳೀಯ ಮೀನುಗಾರರು ಬಳಸುತ್ತಿರುವ, ಕಡಲಾಮೆಗಳು ಸಂತಾನೋತ್ಪತ್ತಿ ಮಾಡುವ ಕಡಲತೀರವನ್ನು ನಾಶ ಮಾಡುತ್ತಿದೆ. ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ಎಲ್.ತಾಂಡೇಲ, ಕಾಂಗ್ರೆಸ್ ಮುಖಂಡ ಮಂಕಾಳ ವೈದ್ಯ ಸೇರಿದಂತೆ ಹಲವರಿದ್ದರು.

ಮುಖಂಡರಾದ ಹಂಜಾ ಇಸ್ಮಾಯಿಲ್ ಪಟೇಲ್, ರಾಮಚಂದ್ರ ಡಿ.ಹರಿಕಂತ್ರ, ಶೇಷಗಿರಿ ತಾಂಡೇಲ, ರೇಣುಕಾ ತಾಂಡೇಲ, ಉಷಾ ತಾಂಡೇಲ, ಪಾರ್ವತಿ ತಾಂಡೇಲ, ರಾಧಾ ತಾಂಡೇಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT