ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಇಲ್ಲಿ ಉಗುಳಿದರೆ ಬೀಳುತ್ತೆ ಭಾರೀ ದಂಡ !

ಮುಖಗವಸು ಧರಿಸದೇ ಜನರು ಸಂಚರಿಸುವುದೇ ಇಲ್ಲ
Last Updated 17 ಮೇ 2020, 19:30 IST
ಅಕ್ಷರ ಗಾತ್ರ

ಶಿರಸಿ: ಇವೆರಡು ಗ್ರಾಮ ಪಂಚಾಯ್ತಿಗಳಲ್ಲಿ ಜನರು ಮುಖಗವಸು ಧರಿಸದೇ ಮನೆಯಿಂದ ಹೊರಬೀಳುವುದೇ ಇಲ್ಲ. ಬಾಯಲ್ಲಿ ಕವಳ ತುಂಬಿಕೊಂಡರೂ, ಎಲ್ಲೂ ಉಗುಳುವುದಿಲ್ಲ. ಯಾಕೆಂದರೆ ಇಲ್ಲಿ ಮುಖಗವಸು ಧರಿಸದಿದ್ದರೆ, ಕಂಡಕಂಡಲ್ಲಿ ಉಗುಳಿದರೆ ಭಾರೀ ದಂಡ ಬೀಳುತ್ತದೆ !

ಕೊರೊನಾ ವೈರಸ್ ಬರದಂತೆ ಮುನ್ನೆಚ್ಚರಿಕೆಯಾಗಿ, ತಾಲ್ಲೂಕಿನ ಸದಾಶಿವಳ್ಳಿ (ತಾರಗೋಡ) ಹಾಗೂ ಉಂಚಳ್ಳಿ ಗ್ರಾಮ ಪಂಚಾಯ್ತಿಗಳಲ್ಲಿ ನಾಲ್ಕೈದು ದಿನಗಳಿಂದ ಈ ನಿಯಮ ಜಾರಿಗೊಂಡಿದೆ. 2500ಕ್ಕೂ ಅಧಿಕ ಕರಪತ್ರಗಳನ್ನು ಮುದ್ರಿಸಿ ಪ್ರತಿ ಮನೆಗೆ ಪಂಚಾಯ್ತಿ ಸಿಬ್ಬಂದಿ ಈ ಕರಪತ್ರವನ್ನು ತಲುಪಿಸಿದ್ದಾರೆ.

‘ಕೋವಿಡ್ 19 ನಿಯಂತ್ರಣಕ್ಕೆ ಲಾಕ್‌ಡೌನ್ ಇರುವ ಸಂದರ್ಭದಲ್ಲಿಯೇ ಎರಡೂ ಗ್ರಾಮ ಪಂಚಾಯ್ತಿಗಳ ಸುಮಾರು 16 ಗ್ರಾಮಗಳು, 150ಕ್ಕೂ ಹೆಚ್ಚು ಮಜಿರೆಗಳ ಪ್ರತಿ ಮನೆಗೆ ಎರಡು ಮುಖಗವಸು ವಿತರಿಸಲಾಗಿದೆ. ಈ ಮುಖಗವಸನ್ನು ಧರಿಸಿಯೇ ಮನೆಯಿಂದ ಹೊರಬೀಳುವಂತೆ ತಿಳಿವಳಿಕೆ ನೀಡಲಾಗಿದೆ. ಕಂಡಕಂಡಲ್ಲಿ ಉಗುಳದಂತೆ ಮೊದಲ ಹಂತದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಲಾಗಿದೆ’ ಎನ್ನುತ್ತಾರೆ ಉಂಚಳ್ಳಿ ಪಂಚಾಯ್ತಿಯ ಹೆಚ್ಚುವರಿ ಹೊಣೆಗಾರಿಕೆ ಇರುವ, ಸದಾಶಿವಳ್ಳಿ ಪಂಚಾಯ್ತಿ ಪಿಡಿಒ ಮೊಹಮ್ಮದ್ ರಿಯಾಜ್.

‘ಇಂತಹ ವಿಶೇಷ ಸಂದರ್ಭದಲ್ಲಿ ಪಂಚಾಯತ್‌ರಾಜ್ ಕಾಯ್ದೆಯಡಿ ದಂಡ ವಿಧಿಸಲು ಪಂಚಾಯ್ತಿಗೆ ಅಧಿಕಾರವಿದೆ. ಈ ಅಧಿಕಾರ ಬಳಸಿಕೊಂಡು, ಒಂದನೇ ಬಾರಿಯ ತಪ್ಪಿಗೆ ₹ 100 ದಂಡ, ಎರಡನೇ ಬಾರಿಗೆ ₹ 200, ಮೂರನೇ ಬಾರಿಗೆ ₹ 300 ದಂಡ ವಿಧಿಸಲು ಯೋಚಿಸಲಾಗಿದೆ. ದಂಡ ವಿಧಿಸುವುದು ನಮ್ಮ ಉದ್ದೇಶವಲ್ಲ. ಆ ಮೂಲಕ ಜನರಲ್ಲಿ ಜಾಗೃತಿ ಮೂಡಬೇಕು. ಜನಜಾಗೃತಿಗೆ ಇದು ಅನಿವಾರ್ಯ ಎಂಬ ಅಭಿಪ್ರಾಯ ಪಂಚಾಯ್ತಿ ಟಾಸ್ಕ್‌ಫೋರ್ಸ್ ಸಭೆಯಲ್ಲೂ ವ್ಯಕ್ತವಾಗಿದೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಈ ನಿಯಮ ಅನುಷ್ಠಾನಕ್ಕೆ ತರಲಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ಪಂಚಾಯ್ತಿ ವ್ಯಾಪ್ತಿಯ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಕಂದಾಯ ಸಿಬ್ಬಂದಿ ಸೇರಿದಂತೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ 55ಕ್ಕೂ ಹೆಚ್ಚು ಜನರಿಗೆ ಬಟ್ಟೆಯ ಮುಖಗವಸು, ಎನ್‌95 ಮಾಸ್ಕ್, ಸುರಕ್ಷತೆಗೆ ಬಳಸುವ ಶೀಲ್ಡ್‌ಗಳನ್ನು ವಿತರಿಸಲಾಗಿದೆ’ ಎಂದು ತಿಳಿಸಿದರು.

‘ಪಂಚಾಯ್ತಿ ಮಟ್ಟದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಒಮ್ಮತದ ಬೆಂಬಲ ನೀಡಲಾಗಿದೆ. ಗ್ರಾಮದಲ್ಲಿ ಬಹುತೇಕ ಎಲ್ಲರೂ ಮುಖಗವಸು ಧರಿಸಿ ಓಡಾಡುತ್ತಾರೆ’ ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯ ರಾಜೇಶ ತಾರಗೋಡ ಹೇಳಿದರು.

**
ಸದಾಶಿವಳ್ಳಿ, ಉಂಚಳ್ಳಿ ಗ್ರಾಮ ಪಂಚಾಯ್ತಿಗಳಲ್ಲಿ ಜಾರಿಗೊಳಿಸಿರುವ ಕ್ರಮ ಉತ್ತಮ ಬೆಳವಣಿಗೆ. ಇದು ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ.
– ಎಂ.ರೋಷನ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT