ಶುಕ್ರವಾರ, ಜುಲೈ 30, 2021
23 °C
ಗ್ರಾಮಾರೋಗ್ಯ: ಕುಗ್ರಾಮಕ್ಕೆ ತಲುಪದ ಆರೋಗ್ಯ ಭಾಗ್ಯ

ಉತ್ತರಕನ್ನಡ: ವೈದ್ಯರಿದ್ದಲ್ಲಿ ಶುಶ್ರೂಷಕರಿಲ್ಲ, ಶುಶ್ರೂಷಕರಿದ್ದ ಕಡೆ ವೈದ್ಯರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ಕೊರೊನಾ ಸೋಂಕು ಈಗ ದೊಡ್ಡ ನಗರಗಳಿಂದ ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಿಗೆ ತನ್ನ ಕಬಂಧಬಾಹುಗಳನ್ನು ಚಾಚಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆ ಇರುವುದರಿಂದ ಕೋವಿಡ್‌ ಪೀಡಿತರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳೇನು, ಚಿಕಿತ್ಸೆಗೆ ಇರುವ ಕೊರತೆಗಳೇನು ಎಂಬ ವಸ್ತುಸ್ಥಿತಿಯ ಚಿತ್ರಣ ನೀಡಲು ಪ್ರಜಾವಾಣಿ ಸ್ಥಳಕ್ಕೆ ಭೇಟಿ ನೀಡಿ ಸರಣಿ ವರದಿಗಳನ್ನು ನೀಡುತ್ತಿದೆ.

***

ಕಾರವಾರ/ ಶಿರಸಿ: ವೈದ್ಯರಿದ್ದ ಕಡೆ ಶುಶ್ರೂಷಕರ ಕೊರತೆ, ಶುಶ್ರೂಷಕರಿದ್ದ ಕಡೆ ವೈದ್ಯರಿಲ್ಲ. ಇಬ್ಬರೂ ಇದ್ದ ಕಡೆ ಡಿ–ಗ್ರೂಪ್ ಸಿಬ್ಬಂದಿಯನ್ನು ಹುಡುಕಬೇಕು. ಇದು ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಆರೋಗ್ಯ ಕ್ಷೇತ್ರದಲ್ಲಿರುವ ಸಾಮಾನ್ಯ ಸಮಸ್ಯೆ.

ಕರಾವಳಿ ಮತ್ತು ಮಲೆನಾಡಿನ ಬಹುತೇಕ ಎಲ್ಲ ಕಡೆಯೂ ಕಟ್ಟಡಗಳು ಸುಂದರ ಮತ್ತು ಸುಸಜ್ಜಿತವಾಗಿವೆ. ಅಲ್ಲಿ ಸಿಗುವ ಆರೋಗ್ಯ ಸೇವೆಯ ಬಗ್ಗೆ ಸ್ಥಳೀಯರಿಗೂ ಸಂತೃಪ್ತಿಯಿದೆ. ಆದರೆ, ಸಿಬ್ಬಂದಿ ಕೊರತೆ, ಕಾರ್ಯ ನಿರ್ವಹಿಸುತ್ತಿರುವವರ ಉತ್ಸಾಹಕ್ಕೆ ಅಡ್ಡಿಯಾಗಿದೆ.

ಉತ್ತರ ಕನ್ನಡವು ಬಹುಪಾಲು ಗುಡ್ಡಗಾಡು ಪ್ರದೇಶಗಳಿಂದ ಕೂಡಿದ ಜಿಲ್ಲೆ. ಇಲ್ಲಿ ಕಾಡಿನ ನಡುವೆ ಒಂಟಿ ಮನೆಗಳು ಇರುವ ಅವೆಷ್ಟೋ ಹಳ್ಳಿಗಳಿವೆ. ಅಲ್ಲಿ ಮೊಬೈಲ್ ನೆಟ್‌ವರ್ಕ್ ಕೂಡ ಸರಿಯಾಗಿ ಸಿಗುವುದಿಲ್ಲ. ಅಂಥ ಪ್ರದೇಶಗಳಲ್ಲಿ ಆರೋಗ್ಯ ಸೇವೆ ತಲುಪಿಸಲು ಪರದಾಡಬೇಕಾಗುತ್ತದೆ. ಅದರಲ್ಲೂ ಕೋವಿಡ್‌ನ ಎರಡನೇ ಅಲೆಗೆ ಜಿಲ್ಲೆ ತತ್ತರಿಸಿರುವ ಈ ಸಂದರ್ಭದಲ್ಲಂತೂ ಬಹಳ ಕಷ್ಟ ಎನ್ನುತ್ತಾರೆ ಆರೋಗ್ಯ ಕಾರ್ಯಕರ್ತರು.

ಇದನ್ನೂ ಓದಿ: 

ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾತಿಗೆ ಸಿಕ್ಕಿದವರು ನಗರಬಸ್ತಿಕೇರಿಯ ಹಾಡಗೇರಿ ಗ್ರಾಮದ ಮಹಾದೇವಿ ನಾಯ್ಕ. ಅವರ ಮನೆ ಆರೋಗ್ಯ ಕೇಂದ್ರದಿಂದ 18 ಕಿಲೋಮೀಟರ್ ದೂರದಲ್ಲಿದೆ. ಅಂಗವಿಕಲರಿಗೆ ಶುಕ್ರವಾರ ಕೋವಿಡ್ ಲಸಿಕೆ ಅಭಿಯಾನ ಇದ್ದ ಕಾರಣ ಬುದ್ಧಿಮಾಂದ್ಯ ಮಗಳನ್ನು ಕರೆದುಕೊಂಡು ಬಂದಿದ್ದರು.

‘ನಮ್ಮ ಊರಿನಿಂದ ಗೇರುಸೊಪ್ಪಕ್ಕೆ ವಾಹನಗಳ ವ್ಯವಸ್ಥೆಯಿಲ್ಲ. ಪ್ರತಿ ಬಾರಿ ಆರೋಗ್ಯ ಕೇಂದ್ರಕ್ಕೆ ಬರಬೇಕಿದ್ದರೂ ಆಟೊರಿಕ್ಷಾಕ್ಕೆ ₹ 600 ತೆಗೆದುಕೊಳ್ತಾರೆ. ಊರಲ್ಲಿ ಸುಮಾರು 300 ಮನೆಗಳಿವೆ. ದಾರಿಯಲ್ಲಿ ಸಣ್ಣ ಹಣ್ಣಗಳಿವೆ. ಸೂಕ್ತ ದಾರಿಯೂ ಇಲ್ಲ. ವಾಹನಗಳು ಸಿಗದಿದ್ದರೆ ಕೋಲಿಗೆ ಕಂಬಳಿ ಕಟ್ಟಿಕೊಂಡು ಹೊತ್ತುಕೊಂಡು ಬರೋದು’ ಎಂದು ಅತ್ಯಂತ ಸಹಜವೆಂಬಂತೆ ಹೇಳಿದರು. ಈ ಪರಿಸ್ಥಿತಿ ಹೊನ್ನಾವರ, ಸಿದ್ದಾಪುರ, ಅಂಕೋಲಾ, ಜೊಯಿಡಾ ತಾಲ್ಲೂಕುಗಳ ಹಲವು ಕುಗ್ರಾಮಗಳಲ್ಲಿದೆ.

ಜೊಯಿಡಾ ತಾಲ್ಲೂಕಿನ ಹತ್ತಾರು ಕುಗ್ರಾಮಗಳಿಗೂ ಈ ಬಾರಿ ಕೋವಿಡ್ ವ್ಯಾಪಿಸಿದೆ. ಸೋಂಕಿನ ಲಕ್ಷಣ ಇರುವವರು ಕೋವಿಡ್ ತಪಾಸಣೆಗೆ ಬನ್ನಿ ಎಂದು ತಾಲ್ಲೂಕು ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ಕರೆದರೂ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲಿ ರಸ್ತೆಗಳೂ ಸಮರ್ಪಕವಾಗಿ ಇಲ್ಲದ ಕಾರಣ ಸೋಂಕಿತರನ್ನು ಪತ್ತೆ ಹಚ್ಚುವುದೇ ಕಷ್ಟವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.


ಶಿರಸಿ ತಾಲ್ಲೂಕಿನ ಜಡ್ಡಿಗದ್ದೆ (ಮೆಣಸಿ) ಗ್ರಾಮದಲ್ಲಿ ಮಹಿಳೆಯೊಬ್ಬರ ಗಂಟಲುದ್ರವದ ಮಾದರಿಯನ್ನು ಆರೋಗ್ಯ ಕೇಂದ್ರದ ಸಿಬ್ಬಂದಿ ಸಂಗ್ರಹಿಸಿದರು – ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್

ಶಿರಸಿ ತಾಲ್ಲೂಕು ಕೇಂದ್ರದಿಂದ 35 ಕಿ.ಮೀ. ದೂರದ ಜಡ್ಡಿಗದ್ದೆಯಲ್ಲಿ (ಮೆಣಸಿ) ಕಳೆದ ವರ್ಷವಷ್ಟೇ 10 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣವಾಗಿದೆ. ಆದರೆ, ಚಿಕಿತ್ಸೆಗೆ ಅಲ್ಲಿ ವೈದ್ಯರಿಲ್ಲ. ಶುಶ್ರೂಷಕರೇ ಜನರಿಗೆ ಔಷಧ ಉಪಚಾರ ಮಾಡುತ್ತಿದ್ದಾರೆ. ಇದು ಹಲವು ಕಡೆ ಸಾಮಾನ್ಯವಾಗಿ ಕಾಣಸಿಗುತ್ತದೆ. ಯಲ್ಲಾಪುರದ ವಜ್ರಳ್ಳಿ, ಮಂಚಿಕೇರಿಯಲ್ಲಿ ಸ್ಥಿತಿ ಭಿನ್ನವಾಗೇನೂ ಇಲ್ಲ.

ಸಿದ್ದಾಪುರದ ಕ್ಯಾದಗಿ, ಮನ್ಮನೆ, ಕೋಲಸಿರ್ಸಿ ಮತ್ತಿತರ ಕಡೆ ಕೋವಿಡ್ ಸಂಖ್ಯೆ ಹೆಚ್ಚಳವಾಗಿದೆ. ಪಕ್ಕದ ಜಿಲ್ಲೆಗಳಿಂದ ಸದ್ದಿಲ್ಲದೆ ರಾತ್ರೋರಾತ್ರಿ ಊರೊಳಗೆ ಬಂದವರಿಂದ ಸೋಂಕು ಹೆಚ್ಚಿತ್ತು ಎಂಬ ಆರೋಪ ಸ್ಥಳೀಯರದ್ದು. ಈಗಲೂ ಸೋಂಕು ಹರಡುವಿಕೆ ಪ್ರಮಾಣ ಆ ಭಾಗದಲ್ಲಿ ಹೆಚ್ಚಿದೆ. ಶಿರಸಿಯ ಬನವಾಸಿ, ಭಾಶಿ, ಮುಂಡಗೋಡ ತಾಲ್ಲೂಕಿನ ಗುಂಜಾವತಿ, ಮೈನಳ್ಳಿ ಸೇರಿದಂತೆ ಹಲವು ಕಡೆ ಕೋವಿಡ್ ಪ್ರಕರಣಗಳು ವ್ಯಾಪಕವಾಗಿ ಹರಡಿವೆ.

ಇದನ್ನೂ ಓದಿ: 

‘ಸೋಂಕಿತರು ಪತ್ತೆಯಾದ ನಂತರ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೊಳಪಡಿಸುವುದೇ ಸವಾಲಾಗಿತ್ತು. ಮೂರು ತಿಂಗಳಿನಿಂದ ವೇತನ, ಸುರಕ್ಷತಾ ಸಲಕರಣೆ ಇಲ್ಲದಿದ್ದರೂ ಸೇವೆ ಎಂದು ಭಾವಿಸಿ ಕೆಲಸ ಮಾಡುತ್ತಿದ್ದೇವೆ’ ಎಂದು ಮುಂಡಗೋಡ ತಾಲ್ಲೂಕಿನ ಕೊಪ್ಪ ಗ್ರಾಮದ ಆಶಾ ಕಾರ್ಯಕರ್ತೆ ಮೇಘಾ ಬಸವರಾಜ ಹೇಳುತ್ತಾರೆ.

‘ಸೋಂಕಿತರು ಕ್ವಾರಂಟೈನ್ ಆದ ಮನೆಗೆ ಮತ್ತು ಕಂಟೈನ್ಮೆಂಟ್ ವಲಯದೊಳಗೆ ಮನೆಗಳಿಗೆ ಅಗತ್ಯ ಸಾಮಗ್ರಿಗಳನ್ನು ಪೂರೈಸುವ ಜವಾಬ್ದಾರಿಯನ್ನು ಮಾಡಲಾಗಿದೆ. ಸಹಾಯವಾಣಿ ತೆರೆದು ಅದರಿಂದ ಜನರ ಬೇಡಿಕೆ ಸಂಗ್ರಹಿಸಿ ಅದನ್ನು ಪೂರೈಸಲು ಸಹಾಯವಾಗಿದೆ’ ಎನ್ನುತ್ತಾರೆ ಕ್ಯಾದಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರುಕ್ಮಿಣಿ ಗೌಡ, ಉಪಾಧ್ಯಕ್ಷ ಎಸ್.ಎನ್.ಹೆಗಡೆ, ಇಂದೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸಿಕಂದರ್ ಬಂಕಾಪುರ.

‘ಹೊಸ ಜೀವನದಂಥ ಖುಷಿ’
‘ಪತ್ನಿಗೆ ಪಾಸಿಟಿವ್ ಎಂದಾಗ ಒಮ್ಮೆ ಆತಂಕ ಉಂಟಾಗಿತ್ತು. ಅಕ್ಕಪಕ್ಕದ ಜನರು ನಮ್ಮ ಮನೆ ಸಮೀಪವೂ ಸುಳಿಯಲಿಲ್ಲ. ಅಗತ್ಯ ವಸ್ತುಗಳ ಖರೀದಿಗೂ ಕಷ್ಟಪಡಬೇಕಿತ್ತು. ಹೆದರದೆ ಹದಿನೈದು ದಿನ ಮನೆಯಲ್ಲೇ ಕಳೆದೆವು. ಸೋಂಕುಮುಕ್ತರಾಗಿ ಹೊರಬಂದಾಗ ಹೊಸಜೀವನ ಆರಂಭಿಸಿದಷ್ಟು ಸಂತಸ ಉಂಟಾಯಿತು’ ಎಂದು ಸಿದ್ದಾಪುರ ತಾಲ್ಲೂಕಿನ ಹೊನ್ನೆಬಿಡಾರ ರಾಜಾರಾಮ ನಾಯ್ಕ, ಸೀತಾ ಲಕ್ಷ್ಮಣ ನಾಯ್ಕ ಹೇಳುತ್ತಿದ್ದರೆ ಇಂತಹ ನೂರಾರು ಜನರು ಮೌನವಾಗಿ ಸೋಂಕು ಗೆದ್ದದ್ದು ಸ್ಪಷ್ಟವಾಗುತ್ತದೆ.

ಬೈಕ್‌ಗಳೇ ಆಧಾರ
‘ಗ್ರಾಮೀಣ ಭಾಗದಲ್ಲೇ ಸೋಂಕಿನ ಪ್ರಮಾಣ ಹೆಚ್ಚಿತ್ತು. ಆದರೂ ಸಕಾಲಕ್ಕೆ ವೈದ್ಯಕೀಯ ಸೇವೆ ಸಿಗುವುದು ಕಷ್ಟವಿತ್ತು. ಬೈಕ್‍ಗಳಲ್ಲಿ ಸೋಂಕಿತರನ್ನು ಕರೆದೊಯ್ಯಬೇಕಾದ ಸ್ಥಿತಿಯೂ ಹಲವು ಕಡೆ ಉಂಟಾಗಿತ್ತು’ ಎನ್ನುತ್ತಾರೆ ಶಿರಸಿ ತಾಲ್ಲೂಕಿನ ಕೊಡ್ನಗದ್ದೆ ಗ್ರಾಮ ಪಂಚಾಯ್ತಿ ಸದಸ್ಯ ಪ್ರವೀಣ ಹೆಗಡೆ.

‘ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಗಂಟಲುದ್ರವ ಸಂಗ್ರಹಣೆಗೆ ಪ್ರತ್ಯೇಕ ವಾಹನ ಬೇಕಿತ್ತು. ಆದರೆ, ಆ ಸೌಲಭ್ಯ ಇಲ್ಲದ ಕಾರಣ ಇಬ್ಬರು ಸಿಬ್ಬಂದಿ ಬೈಕ್‍ನಲ್ಲಿಯೇ ಮನೆ ಮನೆಗೆ ತೆರಳಿ ಪರೀಕ್ಷೆ ನಡೆಸಬೇಕಿದೆ. ಕೆಲವು ಮನೆಗಳಿಗೆ ತೆರಳಲು ಸರಿಯಾದ ದಾರಿಯೂ ಇರಲಿಲ್ಲ. ಪಿ.ಪಿ.ಇ ಕಿಟ್ ಧರಿಸಿ ಕಿಲೋಮೀಟರ್ ನಡೆದ ಸಾಹಸ ಮರೆಯಲಾಗುತ್ತಿಲ್ಲ’ ಎನ್ನುತ್ತಾರೆ ಮೆಣಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ನವೀನ ಹುಲಸ್ವಾರ, ಶ್ವೇತಾ ಪೂಜಾರಿ.

***

ನಮ್ಮ ಆರೋಗ್ಯ ಕೇಂದ್ರಕ್ಕೆ ಬರಲು ಜನರಿಗೆ ಸಾರಿಗೆ ಸಮಸ್ಯೆಯಿದೆ. ಚಿಕಿತ್ಸೆ, ಸೌಲಭ್ಯಗಳು ಚೆನ್ನಾಗಿದ್ದು, ಕೋವಿಡ್ ಸೋಂಕಿತರಿಗೂ ಚಿಕಿತ್ಸೆ ನೀಡಲು ಸಿದ್ಧರಿದ್ದೇವೆ.
-ವಿನಾಯಕ ನಾಯ್ಕ, ಲ್ಯಾಬ್ ಟೆಕ್ನಿಷಿಯನ್ ಹೊನ್ನಾವರದ ಖರ್ವಾ ಪ್ರಾಥಮಿಕ ಆರೋಗ್ಯ ಕೇಂದ್ರ

***

ನಮ್ಮ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 17,200 ಜನಸಂಖ್ಯೆಯಿದೆ. ಐಗಳಕೂರ್ವೆ ನಡುಗಡ್ಡೆಗೆ ತೂಗು ಸೇತುವೆ ಕಾಮಗಾರಿ ಆಗುತ್ತಿದೆ. ಬಳಿಕ ಆ ಭಾಗದ ಸಮಸ್ಯೆ ಬಗೆಹರಿಯಬಹುದು.
-ಅನಸೂಯಾ, ಶುಶ್ರೂಷಕಿ ಮಿರ್ಜಾನ್ ಪ್ರಾಥಮಿಕ ಆರೋಗ್ಯ ಕೇಂದ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು